2023ರ ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು 6 ವಿಕೆಟ್‌ಗಳಿಂದ ಮಣಿಸಿದ ಆಸ್ಟ್ರೇಲಿಯಾ ದಾಖಲೆಯ ಆರನೇ ಬಾರಿಗೆ ವಿಶ್ವಕಪ್ ಚಾಂಪಿಯನ್ ಎನಿಸಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 10 ವಿಕೆಟ್ ಕಳೆದುಕೊಂಡು 240 ರನ್ ಗಳಿಸಿತು.
ಈ ಗುರಿಯನ್ನು ಆಸ್ಟ್ರೇಲಿಯಾ 43 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಸುಲಭವಾಗಿ ಬೆನ್ನಟ್ಟಿತು. ಟ್ರಾವಿಸ್ ಹೆಡ್ ಆಸ್ಟ್ರೇಲಿಯಾದ ಗೆಲುವಿನ ಹೀರೋ ಎನಿಸಿಕೊಂಡರು. ಇದು ಪಂದ್ಯದ ಕುರಿತಾದ ಮಾಹಿತಿಯಾದರೆ ಮತ್ತೊಂದೆಡೆ, ಈ ಐತಿಹಾಸಿಕ ವಿಜಯದ ನಂತರ ಆಸ್ಟ್ರೇಲಿಯಾದ ಖಾತೆಗೆ ಕೋಟಿ ಕೋಟಿ ಹಣದ ಹೊಳೆ ಹರಿದಿದ್ದರೆ, ಟೀಂ ಇಂಡಿಯಾ ಖಾತೆಗೂ ಭಾರಿ ಹಣ ಬಂದು ಸೇರಿದೆ.
10 ಮಿಲಿಯನ್ ಯುಎಸ್ ಡಾಲರ್
ಈ ಬಾರಿ ಒಟ್ಟು 10 ಮಿಲಿಯನ್ ಯುಎಸ್ ಡಾಲರ್ ಬಹುಮಾನ ಮೊತ್ತವನ್ನು ಪಂದ್ಯಾವಳಿಗೆ ಮೀಸಲಿಡಲಾಗಿದೆ. ಅಂತಿಮ ಪಂದ್ಯದಲ್ಲಿ ಗೆದ್ದ ಆಸ್ಟ್ರೇಲಿಯಾ ತಂಡಕ್ಕೆ 4 ಮಿಲಿಯನ್ ಡಾಲರ್ ಬಹುಮಾನ ನೀಡಲಾಗಿದೆ. ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ನೋಡಿದರೆ ಸುಮಾರು 33 ಕೋಟಿ ರೂಗಳನ್ನು ಆಸ್ಟ್ರೇಲಿಯಾ ಬಹುಮಾನವಾಗಿ ಪಡೆದುಕೊಂಡಿದೆ. ಅದೇ ಸಮಯದಲ್ಲಿ ಫೈನಲ್‌ನಲ್ಲಿ ಸೋತ ಭಾರತ ತಂಡಕ್ಕೆ 2 ಮಿಲಿಯನ್ ಡಾಲರ್ ಬಹುಮಾನವನ್ನು ನೀಡಲಾಗಿದೆ. ಅಂದರೆ ಭಾರತೀಯ ರೂಪಾಯಿಯಲ್ಲಿ ಟೀಂ ಇಂಡಿಯಾ ಖಾತೆಗೆ ಸುಮಾರು 16 ಕೋಟಿ ರೂ. ಬಹುಮಾನದ ಹಣ ಹರಿದು ಬಂದಿದೆ.
ಭಾರತಕ್ಕೆ 19 ಕೋಟಿ
ಇದಲ್ಲದೆ ಗುಂಪು ಹಂತದಲ್ಲಿ ಪ್ರತಿ ಪಂದ್ಯಗಳನ್ನು ಗೆಲ್ಲುವ ತಂಡಗಳಿಗೆ 40 ಸಾವಿರ ಡಾಲರ್ ನೀಡುವುದಾಗಿಯೂ ಘೋಷಿಸಲಾಗಿತ್ತು. ಅಂದರೆ ಗುಂಪು ಹಂತದಲ್ಲಿ ಒಂದು ಗೆಲುವಿಗೆ 40 ಸಾವಿರ ಡಾಲರ್ ಬಹುಮಾನ ನೀಡಲಾಗಿದ್ದು, ಭಾರತೀಯ ರೂಪಾಯಿಯಲ್ಲಿ ಸುಮಾರು 33 ಲಕ್ಷ ರೂಗಳನ್ನು ಬಹುಮಾನವಾಗಿ ನೀಡಲಾಗುತ್ತಿದೆ. ಅಂದರೆ ಟೀಂ ಇಂಡಿಯಾ ಗುಂಪು ಹಂತದಲ್ಲಿ 9 ಪಂದ್ಯಗಳನ್ನಾಡಿದ್ದು, ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದಿದೆ. ಅದರಂತೆ, ಪ್ರತಿ ಪಂದ್ಯಕ್ಕೆ 40 ಸಾವಿರ ಡಾಲರ್ ಅಂದರೆ 33 ಲಕ್ಷ ರೂಗಳನ್ನು ಬಹುಮಾನವಾಗಿ ಪಡೆದಿದೆ. ಒಟ್ಟಾರೆ ಭಾರತ ಹತ್ತಿರ ಹತ್ತಿರ 19 ಕೋಟಿ ರೂಗಳನ್ನು ಬಹುಮಾನವಾಗಿ ಸ್ವೀಕರಿಸಲಿದೆ.
ಆಫ್ರಿಕಾಗೆ ಸಿಕ್ಕಿದ್ದೆಷ್ಟು?
ಏತನ್ಮಧ್ಯೆ, ಸೆಮಿ-ಫೈನಲ್‌ನಲ್ಲಿ ಸೋತ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳು ತಲಾ 6 ಕೋಟಿ ರೂಗಳನ್ನು ಬಹುಮಾನವಾಗಿ ಪಡೆಯಲ್ಲಿವೆ. ಹಾಗೆಯೇ ಸೆಮಿ-ಫೈನಲ್‌ಗೆ ಅರ್ಹತೆ ಪಡೆಯದ ಆರು ತಂಡಗಳಿಗೆ ಅಂದಾಜು ರೂ 82 ಲಕ್ಷ ರೂಗಳನ್ನು ಬಹುಮಾನವಾಗಿ ಸ್ವೀಕರಿಸಲಿವೆ.