ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ, ಮಗಳು ಬಲಿ- ಐವರು ಅಧಿಕಾರಿಗಳ ಅಮಾನತು

ಶೇರ್ ಮಾಡಿ

ವಿದ್ಯುತ್ ತಂತಿ ತುಳಿದು ತಾಯಿ-ಮಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ತವ್ಯ ಲೋಪ ಪತ್ತೆಯಾದ ಹಿನ್ನೆಲೆ ಐವರು ಬೆಸ್ಕಾಂ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಇಬ್ಬರು ಹಿರಿಯ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಇಂಧನ ಇಲಾಖೆಯ ನಿರ್ದೇಶನ ಹಿನ್ನೆಲೆ ಅಮಾನತುಗೊಳಿಸಲಾಗಿದೆ. ನಾಲ್ಕನೇ ಪೂರ್ವ ವಿಭಾಗ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಸುಬ್ರಮಣ್ಯ.ಟಿ, ಸಹಾಯಕ ಎಂಜಿನಿಯರ್ ಚೇತನ್ ಎಸ್, ಹಿರಿಯ ಎಂಜಿನಿಯರ್ ರಾಜಣ್ಣ, ಕಿರಿಯ ಪವರ್ ಮ್ಯಾನ್ ಮಂಜುನಾಥ್ ರೇವಣ್ಣ, ಲೈನ್‌ಮ್ಯಾನ್ ಬಸವರಾಜು ಎಂಬವರನ್ನು ಅಮಾನತು ಮಾಡಲಾಗಿದೆ. ಪೂರ್ವ ವಿಭಾಗದ ಅಧೀಕ್ಷಕ ಎಂಜಿನಿಯರ್ ಲೋಕೇಶ್ ಬಾಬು ಮತ್ತು ಬೆಸ್ಕಾಂ ವೈಟ್ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ಶ್ರೀರಾಮು ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ಭಾನುವಾರ ಬೆಂಗಳೂರಿನ ವೈಟ್ ಫೀಲ್ಡ್‌ನ ಕಾಡುಗೋಡಿಯಲ್ಲಿ ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ-ಮಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ತಾಯಿ ಸೌಂದರ್ಯ ಹಾಗೂ ಮಗಳು ಲಿಯಾ ಸಾವನ್ನಪ್ಪಿದ ದುರ್ದೈವಿಗಳು. ತಮಿಳುನಾಡು ಮೂಲದ ಇವರು ಕಾಡುಗೋಡಿಯ ಗೋಪಾಲ್ ಕಾಲೋನಿಯಲ್ಲಿ ವಾಸವಾಗಿದ್ದರು. ಭಾನುವಾರ ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ನೆಲದಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಕಾಣಿಸದೇ ತುಳಿದ ಕಾರಣ ವಿದ್ಯುತ್ ಪ್ರವಹಿಸಿ ಇಬ್ಬರು ಸಾವನ್ನಪ್ಪಿದ್ದಾರೆ.

ದೀಪಾವಳಿ ಹಬ್ಬಕ್ಕೆ ಚೆನ್ನೈಗೆ ಹೋಗಿದ್ದ ಸೌಂದರ್ಯ, ಪತಿ ಸಂತೋಷ್ ಹಾಗೂ 9 ತಿಂಗಳ ಕಂದಮ್ಮ ಲಿಯಾ ಭಾನುವಾರ ಮುಂಜಾನೆ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ದಾರಿಯಲ್ಲಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದೇ ಸೌಂದರ್ಯ ಅದನ್ನು ತುಳಿದಿದ್ದರು. ಈ ವೇಳೆ ಪತಿ ಸಂತೋಷ್ ಕೈಗೆ ವಿದ್ಯುತ್ ಶಾಕ್ ಹೊಡೆದು ಅದೃಷ್ಟವಶಾತ್ ಅವರು ಪಕ್ಕಕ್ಕೆ ಬಿದ್ದಿದ್ದರು. ಆದರೆ ಪತಿ ಎದುರೇ ಪತ್ನಿ ಹಾಗೂ ಕಂದಮ್ಮ ವಿದ್ಯುತ್ ಶಾಕ್‌ಗೆ ಸುಟ್ಟು ಕರಕಲಾಗಿದ್ದಾರೆ.

Leave a Reply

error: Content is protected !!