ವರದಕ್ಷಿಣೆ ಹಣ ತಂದಿಲ್ಲವೆಂದು ಪತ್ನಿಯ ಖಾಸಗಿ ಅಂಗಕ್ಕೆ ಆಸಿಡ್ ಎರಚಿ ವಿಕೃತಿ ಮೆರೆದ ಹೀನಾಯ ಘಟನೆ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ಸಂಬಂಧ ಪತಿ ಮತ್ತು ಅತ್ತೆ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮದುವೆಯಾಗಿ ವರ್ಷ ಕಳೆಯುವ ಮುಂಚೆಯೇ ವರದಕ್ಷಿಣೆಗಾಗಿ ಪತಿ ಕಿರುಕುಳ ನೀಡಿದ್ದಾನೆ ಎಂದು ನೊಂದ ಮಹಿಳೆ ಕಣ್ಣೀರಿಟಿದ್ದಾರೆ.
ಮಂಡ್ಯದ ಸಂತೋಷ್ ಜೊತೆ 23 ವರ್ಷದ ಕಾವ್ಯಗೆ ಮೇ 19ರಂದು ಮದುವೆ ನಡೆದಿತ್ತು. 20ಗ್ರಾಂ ಚಿನ್ನಾಭರಣ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಮದುವೆ ನಂತರ ದಂಪತಿ ಬೆಂಗಳೂರಿನ ಕುರುಬರಹಳ್ಳಿಯಲ್ಲಿ 3 ತಿಂಗಳು ವಾಸವಾಗಿದ್ದರು. ಅಲ್ಲಿ ಸರಿಯಾಗಿ ಬಾಡಿಗೆ ಕಟ್ಟದ ಹಿನ್ನೆಲೆ ಮನೆ ಮಾಲೀಕ ಮನೆ ಖಾಲಿ ಮಾಡಿಸಿದ್ದ. ಬಳಿಕ ಮೈಸೂರಿನ ಯರಗನಹಳ್ಳಿಯಲ್ಲಿ ಬಾಡಿಗೆ ಮನೆಯನ್ನು ಮಾಡಿ ಅಲ್ಲಿಯೇ ವಾಸವಾಗಿದ್ದರು. ಪತಿ ಸಂತೋಷ ಕೆಲಸಕ್ಕೆ ಹೋಗದೆ ಪ್ರತಿ ದಿನ ಮದ್ಯಪಾನ ಮಾಡಿ ಅವಾಚ್ಯ ಶಬ್ದಗಳಿಂದ ಬೈಯೋದು, ಪ್ರಾಣ ಬೆದರಿಕೆ ಹಾಕಿ ಹಲ್ಲೆ ಮಾಡೋದಿ, ತಲೆ ಕೂದಲನ್ನು ಹಿಡಿದು ಎಳೆದಾಡಿ ದೊಡೆಯುವುದನ್ನೆಲ್ಲ ಮಾಡುತ್ತಿದ್ದ. ಹೀಗೆ ಒಮ್ಮೆ ಗಂಡ-ಹೆಂಡತಿ ನಡುವೆ ಜಗಳವಾಗಿದ್ದು ಮನೆಯ ಬಾತ್ ರೂಂ ಕ್ಲಿನ್ ಮಾಡಲು ಇಟ್ಟಿದ್ದ ಆಸಿಡನ್ನು ತೆಗೆದುಕೊಂಡು ಕಾವ್ಯ ಬೆನ್ನು, ಸೊಂಟದ ಭಾಗ ಹಾಗೂ ಖಾಸಗಿ ಅಂಗಕ್ಕೆ ಎಸೆದು ವಿಕೃತಿ ಮೆರೆದಿದ್ದಾನೆ. ಘಟನೆ ಸಂಬಂಧ ಪತಿ ಹಾಗೂ ಪತಿಗೆ ಸಹಕಾರಿಯಾಗಿದ್ದ ಅತ್ತೆ ಪುಟ್ಟಮ್ಮ ವಿರುದ್ಧ ಕಾವ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಜೊತೆಗೆ ಹಲ್ಲೆ ಮಾಡಿರುವ ಬಗ್ಗೆ ದೂರು ದಾಖಲಿಸಿದ್ದಾರೆ.