ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಇಂಧನಗಳ ದರ ಮತ್ತು ದುಬಾರಿ ನಿರ್ವಹಣೆ ಪರಿಣಾಮ ಹೊಸ ಕಾರುಗಳ ಖರೀದಿದಾರರು ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಿಗೆ ಪರ್ಯಾಯವಾಗಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ಮತ್ತು ಸಿಎನ್ ಜಿ ಕಾರುಗಳ ಖರೀದಿಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಪರಿಸರ ಸ್ನೇಹಿ ಕಾರುಗಳಲ್ಲಿ ಎಲೆಕ್ಟ್ರಿಕ್ ಮಾದರಿಗಳಿಗೆ ಉತ್ತಮ ಬೇಡಿಕೆಯಿದ್ದರೂ ಬೆಲೆ ತುಸು ದುಬಾರಿಯಾಗಿರುವುದರಿಂದ ಹಲವು ಗ್ರಾಹಕರು ಕೈಗೆಟುಕುವ ಬೆಲೆಯಲ್ಲಿ ಸಿಗುವ ಸಿಎನ್ ಜಿ ಮಾದರಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಸಿಎನ್ ಜಿ ಕಾರುಗಳು ಸದ್ಯ ಎಂಟ್ರಿ ಲೆವಲ್ ಕಾರುಗಳಲ್ಲಿ ಮಾತ್ರವಲ್ಲದೆ ಮಧ್ಯಮ ಗಾತ್ರದ ಎಸ್ ಯುವಿ ಮತ್ತು ಎಂಪಿವಿ ಕಾರುಗಳಲ್ಲೂ ಮಾರಾಟಗೊಳ್ಳುತ್ತಿದ್ದು, ಇವುಗಳು ನಿರ್ವಹಣಾ ವೆಚ್ಚದಲ್ಲಿ ಪೆಟ್ರೋಲ್ ಮಾದರಿಗಿಂತಲೂ ಉತ್ತಮವಾಗಿದ್ದರೂ ಕೆಲವು ವಿಚಾರಗಳ ಬಗೆಗೆ ಸಂಭಾವ್ಯ ಗ್ರಾಹಕರು ತಪ್ಪದೇ ತಿಳಿದುಕೊಳ್ಳುವ ಅವಶ್ಯಕವಾಗಿದೆ.
ಕಾರುಗಳ ಬೆಲೆ ಮತ್ತು ನಿರ್ವಹಣೆ
ಸಿಎನ್ ಜಿ ಕಾರು ಮಾದರಿಗಳು ಪೆಟ್ರೋಲ್ ಕಾರುಗಳಿಂತಲೂ ತುಸು ದುಬಾರಿ ಬೆಲೆ ಹೊಂದಿದ್ದರೂ ರನ್ನಿಂಗ್ ಕಾಸ್ಟ್ ವಿಚಾರದಲ್ಲಿ ಇವು ಗ್ರಾಹಕರ ಗಮನಸೆಳೆಯುತ್ತಿವೆ. ಆದರೆ ಸಿ ಎನ್ ಜಿ ಕಾರುಗಳ ನಿರ್ವಹಣೆಯು ಪೆಟ್ರೋಲ್ ಕಾರುಗಳಿಂತಲೂ ತುಸು ದುಬಾರಿಯಾಗಿರುತ್ತದೆ. ರನ್ನಿಂಗ್ ಕಾಸ್ಟ್ ಕಡಿಮೆ ಇದ್ದರೂ ಮೂಲ ಬೆಲೆ ಮತ್ತು ವಾರ್ಷಿಕ ನಿರ್ವಹಣಾ ವೆಚ್ಚಗಳು ದುಬಾರಿಯಾಗಿರುತ್ತವೆ ಎನ್ನುವದನ್ನು ಮರೆಯುವಂತಿಲ್ಲ.
ಮೈಲೇಜ್ ಮತ್ತು ಪರ್ಫಾಮೆನ್ಸ್
ಸಿ ಎನ್ ಜಿ ಕಾರುಗಳು ಪೆಟ್ರೋಲ್ ಕಾರುಗಳಿಂತಲೂ ಸಾಕಷ್ಟು ಇಂಧನ ದಕ್ಷತೆ ಹೊಂದಿದ್ದರೂ ಪರ್ಫಾಮೆನ್ಸ್ ನಲ್ಲಿ ಹಿನ್ನಡೆ ಅನುಭವಿಸುತ್ತವೆ. ಆದರೆ ನಗರಪ್ರದೇಶಗಳಲ್ಲಿ ಸಂಚಾರಕ್ಕೆ ಸಿ ಎನ್ ಜಿ ಮಾದರಿಗಳು ಉತ್ತಮ ಆಯ್ಕೆ ಎನ್ನಬಹುದಾಗಿದ್ದು, ದೂರದ ಪ್ರಯಾಣಗಳಲ್ಲಿ ಪೆಟ್ರೋಲ್ ಕಾರುಗಳು ಉತ್ತಮ ಆಯ್ಕೆ ಎನ್ನಬಹುದು. ಜೊತೆಗೆ ಸಿ ಎನ್ ಜಿ ಕಾರುಗಳ ಸದ್ಯ ಮ್ಯಾನುವಲ್ ಆಯ್ಕೆ ಮಾತ್ರ ಲಭ್ಯವಿದ್ದು, ಸಿ ಎನ್ ಜಿ ಮಾದರಿಯಲ್ಲಿ ಆಟೋಮ್ಯಾಟಿಕ್ ಆವೃತ್ತಿಗಳನ್ನು ಪರಿಚಯಿಸಲಾಗಿಲ್ಲ. ಆದರೆ ಸಂಪೂರ್ಣ ಪೆಟ್ರೋಲ್ ಚಾಲಿತ ಕಾರುಗಳಲ್ಲಿ ಗ್ರಾಹಕರು ತಮ್ಮ ಆದ್ಯತೆಗೆ ಅನುಗುಣವಾಗಿ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಆಯ್ಕೆ ಮಾಡಬಹುದು.
ಇಂಧನ ಲಭ್ಯತೆ ಮತ್ತು ಪರಿಸರ ಕಾಳಜಿ
ಪೆಟ್ರೋಲ್ ಕಾರುಗಳು ಯಾವುದೇ ಪ್ರದೇಶಕ್ಕೂ ಪ್ರಯಾಣ ಬೆಳೆಸಿದರೂ ಸಹ ಇಂಧನ ಲಭ್ಯತೆ ಸುಲಭವಾಗಿ ಲಭ್ಯವಿರುತ್ತದೆ. ಆದರೆ ಸಿಎನ್ ಜಿ ಕಾರುಗಳು ಪೆಟ್ರೋಲ್ ಸಂಯೋಜನೆ ಹೊಂದಿದ್ದರೂ ಸಿ ಎನ್ ಜಿ ಲಭ್ಯತೆ ಎಲ್ಲಾ ಕಡೆಗೂ ಲಭ್ಯವಿಲ್ಲದಿರುವುದು ದೂರದ ಪ್ರಯಾಣಗಳಲ್ಲಿ ಇದು ಹಿನ್ನಡೆ ಉಂಟುಮಾಡಬಹುದು. ಆದರೂ ಇತ್ತೀಚೆಗೆ ಸಿಎನ್ ಜಿ ಲಭ್ಯತೆಯು ನಿಧಾನವಾಗಿ ಹೆಚ್ಚುತ್ತಿದ್ದು, ಇದು ಪೆಟ್ರೋಲ್ ಮಾದರಿಗಿಂತಲೂ ಅತಿ ಕಡಿಮೆ ಮಾಲಿನ್ಯ ಹೊರಸೂಸುವ ಮೂಲಕ ಪರಿಸರ ಸ್ನೇಹಿಯಾಗಿವೆ ಎನ್ನಬಹುದು.
ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿರುವ ದುಬಾರಿ ಬೆಲೆಯ ಡೀಸೆಲ್ ಕಾರುಗಳಿಗೆ ಹೋಲಿಕೆ ಮಾಡಿದರೆ ಪೆಟ್ರೋಲ್ ಸಿಎನ್ ಜಿ ಕಾರುಗಳು ವಿವಿಧ ಕಾರಣಗಳಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಮಟ್ಟದ ವೈಶಿಷ್ಟ್ಯತೆಗಳೊಂದಿಗೆ ಖರೀದಿಗೆ ಲಭ್ಯವಾಗುವ ಸಿದ್ದತೆಯಲ್ಲಿವೆ. ಹೀಗಾಗಿ ಗ್ರಾಹಕರು ಪೂರ್ಣ ಪೆಟ್ರೋಲ್ ಅಥವಾ ಪೆಟ್ರೋಲ್ ಸಿ ಎನ್ ಜಿ ಕಾರುಗಳನ್ನು ಆಯ್ಕೆ ಮಾಡುವಾಗ ಮೇಲೆ ಹೇಳಿರುವ ಪ್ರಮುಖ ವಿಚಾರಗಳನ್ನು ಮುಂದಿಟ್ಟುಕೊಂಡು ಆಯ್ಕೆ ಮಾಡುವುದು ಉತ್ತಮ ಎನ್ನಬಹುದು.