Jan.31: ಕುಕ್ಕೆಯಲ್ಲಿ ಮಾಂಗಲ್ಯ ಭಾಗ್ಯ: ಅರ್ಜಿ ಸಲ್ಲಿಸಲು ಡಿ.31 ಕೊನೆಯ ದಿನ

ಶೇರ್ ಮಾಡಿ

ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ. 31ರಂದು ಸರಳ ಸಾಮೂಹಿಕ ವಿವಾಹ ಮಾಂಗಲ್ಯ ಭಾಗ್ಯ ನಡೆಯಲಿದೆ. ಡಿ.31ರಂದು ನಿಗದಿತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. 08257-281224ಕ್ಕೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.ಅಥವಾ ದೇವಸ್ಥಾನದ ಕಚೇರಿ ವೇಳೆಯಲ್ಲಿ ಖುದ್ದಾಗಿ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

ಜ. 31ರಂದು ಬೆಳಗ್ಗೆ 11.20ರಿಂದ 12.20ರ ವರೆಗೆ ನೆರವೇರುವ ಅಭಿಜಿನ್‌ ಲಗ್ನ ಸುಮುಹೂರ್ತದಲ್ಲಿ ವಿವಾಹ ನೆರವೇರಲಿದೆ. ಜ. 5ರಂದು ನೋಂದಾಯಿತ ವಧೂ-ವರರ ವಿವರಗಳನ್ನು ದೇವಸ್ಥಾನದಲ್ಲಿ ಪ್ರಕಟಿಸಲಾಗುವುದು. ಜ.10 ಅಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಜ. 15ರಂದು ಅಂತಿಮ ಪಟ್ಟಿ ಪ್ರಕಟಿಸಲಾಗುವುದು.

ಅಗತ್ಯ ದಾಖಲೆಗಳು
ವಧು-ವರರ ಪೂರ್ಣ ವಿಳಾಸ ದೊಂದಿಗೆ ಜನನ ದಿನಾಂಕವನ್ನು ದೃಢೀಕರಿಸುವ ಶಾಲಾ ದೃಢಪತ್ರದ ಪ್ರತಿ, ಪಾಸ್‌ಪೋರ್ಟ್‌ ಗಾತ್ರದ 2 ಫೋಟೋ, ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌, ವಧು-ವರರ ಬ್ಯಾಂಕ್‌ ಖಾತೆ ಸಂಖ್ಯೆಯ ದಾಖಲೆ ಪ್ರತಿ, ಅವಿವಾಹಿತರು ಎಂಬುದಾಗಿ ಪಂಚಾಯತ್‌ನಿಂದ ಅಥವಾ ಸಂಬಂಧಪಟ್ಟ ಸರಕಾರಿ ಇಲಾಖಾಧಿಕಾರಿಗಳಿಂದ ದೃಢಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.

ಸಹಾಯಹಸ್ತ
ವರನಿಗೆ ದೇವಸ್ಥಾನದ ವತಿಯಿಂದ ಹೂವಿನ ಹಾರ, ಪಂಚೆ, ಶಲ್ಯ, ಶರ್ಟ್‌, ಪೇಟ, ಬಾಸಿಂಗಕ್ಕಾಗಿ ಪ್ರೋತ್ಸಾಹ ಧನವಾಗಿ 5 ಸಾವಿರ ರೂ. ಹಾಗೂ ವಧುವಿಗೆ ಹೂವಿನ ಹಾರ, ಧಾರೆ ಸೀರೆ, ರವಿಕೆ ಕಣ, ಕಾಲುಂಗುರ ಇತ್ಯಾದಿಗಳಿಗೆ 10 ಸಾವಿರ ರೂ. ನೀಡಲಾಗುವುದು. 40 ಸಾವಿರ ರೂ. ಮೌಲ್ಯದಲ್ಲಿ ವಧುವಿಗೆ ಚಿನ್ನದ ತಾಳಿ, 2 ಚಿನ್ನದ ಗುಂಡನ್ನು ಒದಗಿಸಲಾಗುವುದು. ವಧು-ವರರು ಮತ್ತು ಅವರ ಬಂಧುಗಳಿಗೆ ಊಟೋಪಚಾರ ವ್ಯವಸ್ಥೆಗಳನ್ನು ಮಾಡಲಾಗುವುದು. ವಧುವಿಗೆ ಕಂದಾಯ ಇಲಾಖೆಯ ವತಿಯಿಂದ ಆದರ್ಶ ವಿವಾಹ ಯೋಜನೆಯಡಿ 10 ಸಾವಿರ ರೂ. ನಿಶ್ಚಿತ ಠೇವಣಿ ಒದಗಿಸಲಾಗುವುದು. ವಿವಾಹವಾಗುವ ಪರಿಶಿಷ್ಟ ಜಾತಿಯ ಜೋಡಿಗೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸರಳ ವಿವಾಹ ಯೋಜನೆಯಡಿ 50 ಸಾವಿರ ರೂ. ಒದಗಿಸಲಾಗುವುದು.

Leave a Reply

error: Content is protected !!