ಕಂಬಳ ನೋಡಿ ವಾಪಸ್ಸಾಗ್ತಿದ್ದ ವೇಳೆ ಭೀಕರ ಅಪಘಾತ- ದ.ಕ.ಜಿಲ್ಲೆಯ ಇಬ್ಬರು ಸಾವು, ಮೂವರು ಗಂಭೀರ

ಶೇರ್ ಮಾಡಿ

ಕಂಬಳ ನೋಡಿ ವಾಪಸ್ಸಾಗುತ್ತಿದ್ದ ವೇಳೆ ಬೋರ್‌ವೆಲ್ ಲಾರಿ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಚಿಗಣಿಪಾಳ್ಯ ಬಳಿ ಘಟನೆ ನಡೆದಿದೆ. ಘಟನೆಯಲ್ಲಿ ಮಂಗಳೂರಿನ ಪೆರಾರ ಬಜಪ್ಪೆ ಗ್ರಾಮದ ನಿವಾಸಿ ಕಿಶನ್ ಶೆಟ್ಟಿ(20) ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಭಟ್ಟರ ತೋಟ ಗ್ರಾಮದ ನಿವಾಸಿ ಫಿಲೀಪ್ ಲೋಬೋ (32) ಮೃತಪಟ್ಟಿದ್ದಾರೆ. ನಿತೀಶ್ ಬಂಡಾರಿ, ಪ್ರೀತಿ ಲೋಬೋ ಮತ್ತು ಹರೀಶ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ನಡೆಯುತ್ತಿದ್ದ ಕಂಬಳವನ್ನು ನೋಡಿಕೊಂಡು ಮಂಗಳೂರಿಗೆ ವಾಪಸ್ ಆಗುತ್ತಿದ್ದ ವೇಳೆ ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಹೊಗುತ್ತಿದ್ದ ಬೋರ್‌ವೆಲ್ ಲಾರಿ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲಾರಿ ಹಾಗೂ ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave a Reply

error: Content is protected !!