ಇತಿಹಾಸ ಪ್ರಸಿದ್ಧ ಶಿಶಿಲದ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ದಶಮಾನಗಳಿಂದಲೂ ಆಚರಿಸಿಕೊಂಡು ಬರುತ್ತಿರುವ ಕಾಯಿತಾ ಪೂಜೆಯು (ಅಡಕೆ ಪೂಜೆ) ವಿಜೃಂಭಣೆಯಿಂದ ನ. 26ರಂದು ನಡೆಯಿತು. ಶಿಶಿಲ ಗ್ರಾಮದ ಹೆಚ್ಚಿನ ಕೃಷಿಕರು ತಮ್ಮ ಅಡಕೆ ತೋಟದ ಒಂದು ಗೊನೆ ಅಡಕೆಯನ್ನು ಶ್ರೀ ದೇವರಿಗೆ ಅರ್ಪಿಸಿ ಪುನೀತರಾದರು. ರಾತ್ರಿ ನಡೆದ ರಂಗ ಪೂಜೆಯ ಬಳಿಕ ಶ್ರೀದೇವರ ಎದುರಿನ ನಮಸ್ಕಾರ ಮಂಟಪದಲ್ಲಿ ರಾಶಿ ಹಾಕಲ್ಪಟ್ಟ ಅಡಕೆ ಗೊನೆಗಳಿಗೆ ಮಂಗಳಾರತಿ ನೆರವೇರಿತು. ಕಾಯಿತಾ ಪೂಜೆಯ ಭಾವನಾತ್ಮಕ ಸನ್ನಿವೇಶಕ್ಕೆ ದೇವಳದ ಭಕ್ತರು ಸಾಕ್ಷಿಯಾದರು.
86 ವರ್ಷಗಳಿಂದ ಸತತವಾಗಿ ನಡೆದುಕೊಂಡು ಬರುತ್ತಿರುವ ಈ ಪೂಜೆಗೆ ಕಳೆದ ಕೆಲವು ವರುಷಗಳಿಂದ ಸುಮಾರು ಮೂರರಿಂದ ನಾಲ್ಕು ಕ್ವಿಂಟಾಲ್ ನವರೆಗೆ ಹಣ್ಣಡಕೆ ಸಂಗ್ರಹವಾಗುತ್ತಿದೆ. ಇದನ್ನು ಅಂದಿನ ಮಾರುಕಟ್ಟೆ ದರದಲ್ಲಿ ಏಲಂ ಪ್ರಕ್ರಿಯೆ ಮಾಡಿ ದೇವಳದ ಆರ್ಥಿಕ ಖರ್ಚು ವೆಚ್ಚಗಳಿಗೆ ಹೊಂದಿಸಲಾಗುತ್ತಿದೆ. ಕೆಲವು ವರ್ಷಗಳಲ್ಲಿ ಮಾರುಕಟ್ಟೆ, ದರಕ್ಕಿಂತಲೂ ಹೆಚ್ಚಿನ ಬೆಲೆಗೆ ಏಲಂ ನಡೆದಿದ್ದು ಕೂಡ ಇತಿಹಾಸ. ದೇವರ ಪ್ರಸಾದವೆಂದು ಹೆಚ್ಚು ಬೆಲೆಗೆ ಏಲಂ ಪಡೆಯುತ್ತಿರುವುದು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿದೆ.
ಪೂಜೆಗೆ ಆಗಮಿಸುವ ಎಲ್ಲರಿಗೂ ಗಂಧ ಪ್ರಸಾದ ದೊಂದಿಗೆ ಒಂದೊಂದು ಅಡಕೆ ಪ್ರಸಾದವನ್ನು ನೀಡಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ. ಪಡೆದುಕೊಂಡ ಅಡಕೆ ಪ್ರಸಾದವನ್ನು ತಮ್ಮ ತಮ್ಮ ಮನೆಯ ಅಡಕೆ ರಾಶಿಗಳಲ್ಲಿ ಹಾಕಿ ಹೆಚ್ಚು ಬೆಳೆಯನ್ನ ಪಡೆಯುವಂತೆ ಪ್ರಾರ್ಥಿಸುತ್ತಾರೆ. ಇನ್ನು ಕೆಲವರು ತಮ್ಮ ವೀಳ್ಯದೆಲೆಯ ತಟ್ಟೆಯಲ್ಲಿ ಬಳಸಿಕೊಂಡು ತಿನ್ನುತ್ತಾರೆ.
1937 ಇಸವಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಲವು ತಾಲೂಕುಗಳ ಅಡಕೆ ತೋಟಗಳಿಗೆ ಮಹಾಳಿ ಎಂಬ ಹೆಸರಿನ ರೋಗ ಬಂದಿತ್ತು. ಅಂದಿನ ಬ್ರಿಟಿಷ್ ಸರ್ಕಾರ ಅಡಿಕೆ ತೋಟದ ಗೇಣಿಯನ್ನು 75% ಕ್ಕೆ ರಿಯಾಯತಿ ನೀಡಿತ್ತು. ಈ ಸಂದರ್ಭ ಈ ಮಹಾಳಿ ರೋಗ ಉಲ್ಬಣಗೊಳ್ಳದೆ ಶಮನವಾಗಲು 1937 ನೇ ಇಸವಿಯಲ್ಲಿ ಶಿಶಿಲ ದೇವಳದ ಆಡಳಿತ ಮೊಕ್ತೇಸರರಾಗಿದ್ದ ದಿ.ಸುಬ್ರಾಯ ದಾಮಲೆ,ಅಡ್ಡಹಳ್ಳ ದಿ.ಗಣಪತಿ ದಾಮಲೆಯವರು ಕಾಯಿತಾ (ಅಡಕೆಯ)ಪೂಜೆಯನ್ನು ಕಾತಿ೯ಕ ಶುಧ್ಧ ಹುಣ್ಣಿಮೆಯಂದು ಪ್ರಾರಂಭ ಮಾಡಿದರು. ದೇವಳದಲ್ಲಿ ಕಾಯಿತಾ ಪೂಜೆ ಆಗದೆ ಗ್ರಾಮದ ಯಾವ ಕೃಷಿಕನ ಮನೆಯಲ್ಲಿಯೂ ಅಡಕೆ ಕೊಯ್ಲು ಮಾಡುವುದು ನಿಷಿದ್ಧವಾಗಿದೆ. ಕಾಯಿತಾ ಪೂಜೆಯ ಮರು ದಿನದಿಂದಲೇ ಗ್ರಾಮದ ಅಡಿಕೆ ಕೊಯ್ಲು ಆರಂಭವಾಗುವುದು ಇದುವರೆಗೆ ಬಂದಿರುವ ಸಂಪ್ರದಾಯ.
ಶಿಶಿಲಗಷ್ಟೇ ಸೀಮಿತವಾಗಿರದೆ ಈ ಹರಕೆಯು ಪಕ್ಕದ ಗ್ರಾಮದ ಕೃಷಿಕರು ಕೂಡ ಶ್ರೀದೇವರಿಗೆ ಗೊನೆಯನ್ನು ಅರ್ಪಿಸುತ್ತಿದ್ದಾರೆ. ಯಾರೇ ಗೊನೆಯನ್ನು ತಂದರೂ ದೇವಳದವರು ಅದನ್ನು ಸ್ವೀಕರಿಸಿ ಪ್ರಸಾದ ನೀಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಅಡಕೆ ಗೊನೆಯ ಜೊತೆಗೆ ತೆಂಗಿನ ಕಾಯಿ ಹಾಗೂ ಎಳನೀರು ಗೊಂಚಲು ಹರಕೆಯ ರೂಪದಲ್ಲಿ ಬರುತ್ತಿದ್ದು ಶ್ರೀದೇವರ ಕಾರ್ಣಿಕಕ್ಕೆ ಸಾಕ್ಷಿಯಾಗುತ್ತಿದೆ.