ನೆಲ್ಯಾಡಿ ವಿಶ್ವವಿದ್ಯಾನಿಲಯ ಘಟಕ ಕಾಲೇಜು; ಗ್ರಂಥಾವಲೋಕನ, ಪುಸ್ತಕ ವಿಮರ್ಶೆ ಮತ್ತು ಪುಸ್ತಕ ಪ್ರದರ್ಶನ ಕಾರ್ಯಕ್ರಮ

ಶೇರ್ ಮಾಡಿ

ನೆಲ್ಯಾಡಿ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಗ್ರಂಥಾಲಯ ವಿಭಾಗದಿಂದ ಗುರುನಾನಕ್ ಜಯಂತಿ ಪ್ರಯುಕ್ತ ಗ್ರಂಥಾವಲೋಕನ, ಪುಸ್ತಕ ವಿಮರ್ಶೆ ಹಾಗೂ ಪುಸ್ತಕ ಪ್ರದರ್ಶನ ಕಾರ್ಯಕ್ರಮ ನೆರವೇರಿತು.

ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಸೀತಾರಾಮ.ಪಿ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಇತಿಹಾಸ ವಿಭಾಗದ ಮುಖ್ಯಸ್ಥರಾಗಿರುವ ಡಾ.ಸೀತಾರಾಮ.ಪಿ.ರವರು ಗುರುನಾನಕರ ಜೀವನ ಸಂದೇಶಗಳನ್ನು ಕುರಿತು ಮಾತನಾಡುತ್ತಾ ಭಾರತದಂತಹ ದೇಶದಲ್ಲಿ ಭಕ್ತಿ ಪರಂಪರೆಯನ್ನು ಚಾರಿತ್ರಿಕವಾಗಿ ಗಮನಿಸಿದಾಗ ಬುದ್ಧ, ತಮಿಳುನಾಡಿನ ಮಯನ್ಮಾರರು, ವಚನ ಚಳುವಳಿ, ಕೀರ್ತನಕಾರರು ಮತ್ತು ಆಧುನಿಕ ಸಾಹಿತ್ಯದ ಸಂದರ್ಭದಲ್ಲಿ ಭಕ್ತಿಯ ಅಭಿವ್ಯಕ್ತಿ ಯನ್ನು ಕಾವ್ಯ ಮತ್ತು ಗದ್ಯಾತ್ಮಕ ಶೈಲಿಯಲ್ಲಿ ಕಾಣಲು ಸಾಧ್ಯವಿದೆ. ಈ ಭಕ್ತಿ ಪರಂಪರೆಯ ಬೆಳವಣಿಗೆಯು ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ ಮತ್ತು ಸಾಮಾಜಿಕ ಸುಧಾರಣೆಯ ಹಿನ್ನೆಲೆಯಲ್ಲಿಯೂ ಕೂಡ ಹಲವು ರೂಪಗಳನ್ನ ಪಡೆದುಕೊಂಡು ವಿಸ್ತರಿಸಿದೆ. ಈ ಹಿನ್ನಲೆಯಲ್ಲಿ ಉತ್ತರ ಭಾರತದಲ್ಲಿ ಭಕ್ತಿಯ ವ್ಯಾಖ್ಯಾನದ ಮೂಲಕ ಮಾನವೀಯ ಸಂದೇಶಗಳನ್ನು ಪ್ರತಿಪಾದಿಸಿದ ಗುರುನಾನಕ್ ಅವರ ಜಯಂತಿಯ ಪ್ರಯುಕ್ತ ಈ ಕಾರ್ಯಕ್ರಮ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಅರ್ಥಶಾಸ್ತ್ರದ ವಿಭಾಗದ ಉಪನ್ಯಾಸಕರಾದ ಸಚಿನ್ ಗೌಡ ಎನ್.ಟಿ ರವರು ಶಿವರಾಮ ಕಾರಂತರ ‘ಬೆಟ್ಟದ ಜೀವ’ ಕಾದಂಬರಿ ಕುರಿತು ಮಾತನಾಡಿದರು. ಪಶ್ಚಿಮಘಟ್ಟ ಪ್ರದೇಶದಲ್ಲಿ ಪ್ರಕೃತಿಯೊಂದಿಗೆ ಮನುಷ್ಯನ ಹೊಂದಾಣಿಕೆಯ ಬದುಕನ್ನು ಕಟ್ಟಿಕೊಂಡಿರುವ ರೀತಿಯು ಅನನ್ಯವಾದದ್ದು, ಪ್ರಾಕೃತಿಕ ಚಿತ್ರಣಗಳ ಜೊತೆಗೆ ಸಮುದಾಯಗಳ ಸಾಂಸ್ಕೃತಿಕ ಬದುಕಿನ ಅಭಿವ್ಯಕ್ತಿಯನ್ನು ಈ ಕಾದಂಬರಿಯಲ್ಲಿ ಕಾಣಲು ಸಾಧ್ಯವಿದೆ. ಐತಿಹಾಸಿಕವಾಗಿ ಈ ಕಾದಂಬರಿಯು ಸ್ವಾತಂತ್ರ್ಯ ಹೋರಾಟದ ಕಾಲಘಟ್ಟವನ್ನ ಪ್ರತಿನಿಧಿಸಿದ್ದು, ಕಥಾವಸ್ತುವಿನ ದೃಷ್ಟಿಯಲ್ಲಿ ಮನುಷ್ಯ ಸಂಬಂಧಗಳ ಅಂತರಾವಲೋಕನದ ಅನೇಕ ಭಾವಾಭಿವ್ಯಕ್ತಿಗಳನ್ನ ಈ ಕಾದಂಬರಿ ಯಲ್ಲಿ ಕಾಣಲು ಸಾಧ್ಯವಿದೆ. ಕಳೆದ ಐದಾರು ದಶಕಗಳಲ್ಲಿ ಅಗಾಧವಾದ ಬದಲಾವಣೆಯ ಮೂಲಕ ಪ್ರಕೃತಿಯು ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡಿರುವ ಈ ಸಂದರ್ಭದಲ್ಲಿ ಇಂತಹ ಕಾದಂಬರಿಗಳನ್ನ ಓದುವ ಮತ್ತು ವಿಮರ್ಶಿಸುವ ಮೂಲಕ ಪ್ರಕೃತಿ ಮತ್ತು ಸಂಸ್ಕೃತಿಯ ಅವಿನಾಭಾವ ಸಬಂಧದ ಗತವೈಭವವನ್ನು ತಿಳಿದುಕೊಳ್ಳಲು ಸಾಧ್ಯವಿದೆ ಎಂದರು.

ಅಂತಿಮ ಬಿ.ಎ.ವಿದ್ಯಾರ್ಥಿ ಸಂದೀಪ್ ಕುಮಾರ್ ರವರು ತೇಜಸ್ವಿ ಯವರ ‘ಬೆಳ್ಳಂದೂರಿನ ನರಭಕ್ಷಕ’ ಕೃತಿಯನ್ನು, ವಿದ್ಯಾರ್ಥಿನಿ ವನಿತಾ ಅವರು ಕಾರಂತರ ‘ಚೋಮನ ದುಡಿ’ ಕೃತಿಯನ್ನು, ವಿದ್ಯಾರ್ಥಿನಿ ಅನುಪ್ರಿಯ ಅವರು ನೇಮಿಚಂದ್ರ ರವರ ‘ಬದುಕು ಬದಲಿಸಬಹುದು’ ಕೃತಿಯನ್ನು ಕುರಿತು ಮಾತನಾಡಿದರು.
ಗ್ರಂಥಪಾಲಕರಾದ ಶ್ರೀಮತಿ ಶೋಭ ಡಿ. ಟಿ. ರವರು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಉಪನ್ಯಾಸಕರಾದ ಡಾ.ನೂರಂದಪ್ಪ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ರೀಮತಿ ಚಂದ್ರಕಲಾ ವಂದಿಸಿದರು. ಶ್ರೀಮತಿ ದಿವ್ಯಶ್ರೀ ಅವರು ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಾದ ಭವ್ಯಶ್ರಿ ಮತ್ತು ತಂಡದವರು ಪ್ರಾರ್ಥಿಸಿದರು.

ಸಭಾ ಕಾರ್ಯಕ್ರಮದ ನಂತರ ಪುಸ್ತಕ ಪ್ರದರ್ಶನವನ್ನು ಕನ್ನಡ ವಿಭಾಗದ ಉಪನ್ಯಾಸಕ ಡಾ.ನೂರಂದಪ್ಪ ಅವರು ಉದ್ಘಾಟಿಸಿದರು. ವಿದ್ಯಾರ್ಥಿ ವಿದ್ಯಾರ್ಥಿನಿಯರು ಪುಸ್ತಕ ಪ್ರದರ್ಶನವನ್ನು ವೀಕ್ಷಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಯವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

error: Content is protected !!