ದೃಷ್ಟಿ ಹೀನ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ, ಜೈ ಶ್ರೀ ರಾಮ್ ಎಂದು ಕೂಗುವಂತೆ ಒತ್ತಾಯ; ಎಫ್‌ಐಆರ್ ದಾಖಲು

ಶೇರ್ ಮಾಡಿ

ಇಬ್ಬರು ಅಪರಿಚಿತರು ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ 65 ವರ್ಷದ ಮುಸ್ಲಿಂ ವ್ಯಕ್ತಿಗೆ ಚಿತ್ರಹಿಂಸೆ ನೀಡಿದ ಆಘಾತಕಾರಿ ಘಟನೆ ನಡೆದಿದೆ. ಈ ಹಿನ್ನಲೆ ಸಂತ್ರಸ್ತ ಹುಸೇನ್​ ಸಾಬ್​ ಎನ್ನುವವರು ನ.30 ರಂದು ಪೊಲೀಸ್​ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಎಫ್‌ಐಆರ್ ಪ್ರಕಾರ, ಹುಸೇನ್​ ಸಾಬ್​ ನ.25 ರಂದು ರಾತ್ರಿ ಹೊಸಪೇಟೆಯಿಂದ ಗಂಗಾವತಿಗೆ ಬಂದಿದ್ದಾರೆ. ಈ ವೇಳೆ ಚಹಾ ಕುಡಿದು ಆಟೋರಿಕ್ಷಾಕ್ಕಾಗಿ ಕಾಯುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರ ಬಳಿಗೆ ಬಂದು, ಎಲ್ಲಿಗೆ ಹೋಗುತ್ತಿದ್ದೀರಿ ಎಂದ ಅಪರಿಚಿತರು ಡ್ರಾಪ್ ಕೊಡಲು ಮುಂದಾಗಿದ್ದಾರೆ.

ಬೈಕ್ ಚಲಿಸುತ್ತಿದ್ದಂತೆ ಇಬ್ಬರೂ ಹುಸೇನ್‌ಸಾಬ್‌ಗೆ ಥಳಿಸಲು ಆರಂಭಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರಂತೆ. ‘ಇಬ್ಬರು ನನ್ನನ್ನು ಪಂಪಾನಗರ ಪ್ರದೇಶದ ಬಳಿ ಕರೆದೊಯ್ದು ಬೈಕ್​ನಿಂದ ನನ್ನನ್ನು ತಳ್ಳಿ ನಿಂದಿಸಲು ಪ್ರಾರಂಭಿಸಿದರು. ಕತ್ತಲಾಗಿದ್ದರಿಂದ ದಯವಿಟ್ಟು ನನ್ನನ್ನು ಬಿಟ್ಟುಬಿಡಿ ಎಂದು ಮನವಿ ಮಾಡಿದೆ. ಬಳಿಕ ದುಷ್ಕರ್ಮಿಗಳು ಜೈ ಶ್ರೀರಾಮ್ ಎಂದು ಕೂಗುವಂತೆ ಒತ್ತಾಯಿಸಿದರು. ಅವರು ಹೇಳಿದಂತೆ ಮಾಡಿದರೂ ನನ್ನ ಮೇಲೆ ಹಲ್ಲೆ ಮಾಡುವುದನ್ನು ನಿಲ್ಲಿಸಲಿಲ್ಲ ಎಂದು ಹುಸೇನ್​ ಸಾಬ್​ ಹೇಳಿದ್ದಾರೆ.

ಇದಾದ ನಂತರ ಆರೋಪಿಗಳು ಬಿಯರ್ ಬಾಟಲಿಯನ್ನು ಒಡೆದು ಗಾಜಿನ ತುಂಡಿನಿಂದ ಅವರ ಗಡ್ಡವನ್ನು ಕತ್ತರಿಸಲು ಪ್ರಯತ್ನಿಸಿದ್ದು, ಅದು ಆಗದೇ ಇದ್ದಾಗ ಬೆಂಕಿ ಕಡ್ಡಿಯನ್ನು ತೆಗೆದು ಹುಸೇನ್​ ಸಾಬ್​ ಗಡ್ಡವನ್ನು ಸುಟ್ಟಿದ್ದಾರೆ. ಇದರಿಂದ ಸಂತ್ರಸ್ತ ಚಿರಾಡಿದ್ದು, ಕೂಗು ಕೇಳಿದ ನಂತರ ಕೆಲವು ಕುರುಬರು ಎಚ್ಚರಗೊಂಡು ಬಂದಿದ್ದಾರೆ. ಕೂಡಲೇ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ಠಾಣೆಗೆ ದೂರು ದಾಖಲು
ಈ ಸಂಬಂಧ ಪಟ್ಟಣ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇನ್ನು ಹುಸೇನ್​ ಸಾಬ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಸ್ ನಿಲ್ದಾಣ, ಮುಖ್ಯರಸ್ತೆ, ಪಂಪಾನಗರದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸಂತ್ರಸ್ತ ಹುಸೇನಸಾಬ್ ತನ್ನ ಮಗಳೊಂದಿಗೆ ಗಂಗಾವತಿಯ ಪುಟ್ಟ ಮನೆಯಲ್ಲಿ ವಾಸವಾಗಿದ್ದಾನೆ. ದೃಷ್ಟಿ ಹೀನವಾಗುತ್ತಿರುವುದರಿಂದ ಕಳೆದ ಕೆಲ ತಿಂಗಳಿಂದ ಕೊಪ್ಪಳ, ವಿಜಯನಗರ ಜಿಲ್ಲೆಗಳ ಹಲವೆಡೆ ಭಿಕ್ಷಾಟನೆ ನಡೆಸುತ್ತಿದ್ದಾರೆ.

Leave a Reply

error: Content is protected !!