ಜನವರಿ 22 ರಂದು ಆಯೋಧ್ಯೆ ರಾಮಮಂದಿರ ಲೋಕಾರ್ಪಣೆ, ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಹಿನ್ನಲೆ ಗಣ್ಯರಿಗೆ ಆಹ್ವಾನ ಪತ್ರಿಕೆ ನೀಡಲಾಗುತ್ತಿದ್ದು ಇದರ ಬೆನ್ನಲ್ಲೇ ಸಾಮಾನ್ಯ ಜನರಿಗೂ ಆಹ್ವಾನ ಪತ್ರಿಕೆಯನ್ನು ಟ್ರಸ್ಟ್ ವತಿಯಿಂದ ಕಳುಹಿಸಿಕೊಡಲು ಆರಂಭಿಸಿದೆ.
ಆಹ್ವಾನ ಪತ್ರಿಕೆಯಲ್ಲಿ ಏನಿದೆ?
ಆಹ್ವಾನಪತ್ರಿಕೆಯ ಫೋಟೊ ಈಗ ಲಭ್ಯವಾಗಿದ್ದು ಇದರಲ್ಲಿ ಸುದೀರ್ಘ ಹೋರಾಟದ ನಂತರ ಶ್ರೀರಾಮನ ಜನ್ಮಸ್ಥಳದಲ್ಲಿ ಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂಬುದು ನಿಮಗೆ ತಿಳಿದಿದೆ. 22 ಜನವರಿ 2024, ರಾಮಲಲ್ಲನ ಹೊಸ ವಿಗ್ರಹವನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುವುದು. ಮಹತ್ವದ ಘಟ್ಟಕ್ಕೆ ಸಾಕ್ಷಿಯಾಗಲು ಮತ್ತು ಮಹಾನ್ ಐತಿಹಾಸಿಕ ದಿನದ ಘನತೆಯನ್ನು ಹೆಚ್ಚಿಸಲು ನೀವು ಈ ಶುಭ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಉಪಸ್ಥಿತರಾಗಿರಬೇಕು ಎಂಬುದು ನಮ್ಮ ಬಲವಾದ ಬಯಕೆಯಾಗಿದೆ. ಇದಕ್ಕಾಗಿ ಜನವರಿ 21ರ ಮೊದಲು ಅಯೋಧ್ಯೆಗೆ ಭೇಟಿ ನೀಡಲು ನಿಮ್ಮನ್ನು ವಿನಂತಿಸುತ್ತಿದ್ದೇವೆ. ನೀವು ಅಯೋಧ್ಯೆಗೆ ಎಷ್ಟು ಬೇಗ ಬರುತ್ತೀರೋ ಅಷ್ಟು ಅನುಕೂಲವಾಗುತ್ತದೆ. ನೀವು ತಡವಾಗಿ ಬಂದರೆ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹೀಗಾಗಿ ಸಾಧ್ಯವಾದಷ್ಟು ಮುನ್ನ ಅಯೋಧ್ಯೆಗೆ ಬರಬೇಕು ಎಂದು ಮನವಿ ಮಾಡಲಾಗಿದೆ.
ಆಮಂತ್ರಣ ಪತ್ರದ ಬಗ್ಗೆ ಮಾಹಿತಿ ನೀಡಿದ ಟ್ರಸ್ಟ್‌ನ ಅಧಿಕಾರಿಯೊಬ್ಬರು, ಈ ಅದ್ಧೂರಿ ಕಾರ್ಯಕ್ರಮಕ್ಕೆ ಸುಮಾರು 6 ಸಾವಿರ ಜನರಿಗೆ ಆಹ್ವಾನ ಕಳುಹಿಸಲಾಗುವುದು ಎಂದು ಹೇಳಿದರು. ಆರಂಭದ ಹಂತದಲ್ಲಿ ಆಮಂತ್ರಣ ಪತ್ರಿಕೆಯನ್ನು ಅರ್ಚಕರು, ದಾನಿಗಳು ಮತ್ತು ಹಲವಾರು ರಾಜಕಾರಣಿಗಳು ಸೇರಿದಂತೆ 6,000 ಅತಿಥಿಗಳಿಗೆ ಕಳುಹಿಸಲಾಗುತ್ತಿದೆ.
4 ಹಂತದಲ್ಲಿ ಕಾರ್ಯಕ್ರಮ
ನಾಲ್ಕು ಹಂತದಲ್ಲಿ ಕಾರ್ಯಕ್ರಮ ನಡೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು ಮೊದಲ ಹಂತವು ನವೆಂಬರ್ 19 ರಿಂದ ಈಗಾಗಲೇ ಪ್ರಾರಂಭವಾಗಿದ್ದು ಇದು ಡಿಸೆಂಬರ್ 20 ರವರೆಗೆ ಮುಂದುವರಿಯುತ್ತದೆ. ಇದರಲ್ಲಿ ಸಂಪೂರ್ಣ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲಾಗುವುದು ಜತೆಗೆ ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ 10-10 ಜನರ ತಂಡ ರಚಿಸಿ, ಜನರ ಸಂಪರ್ಕಕ್ಕೆ ಕೆಲಸ ಮಾಡಲಿದೆ.
ಎರಡನೇ ಹಂತವು ಜನವರಿ 1 ರಿಂದ ಪ್ರಾರಂಭವಾಗಲಿದ್ದು, ಇದರಲ್ಲಿ 10 ಕೋಟಿ ಕುಟುಂಬಗಳಿಗೆ ಪೂಜಿಸಿದ ಅಕ್ಷತೆ ಮತ್ತು ರಾಮ ವಿಗ್ರಹಗಳ ಕರಪತ್ರಗಳು ಮತ್ತು ಚಿತ್ರಗಳನ್ನು ವಿತರಿಸಲಾಗುತ್ತದೆ. ಅಲ್ಲದೆ ರಾಮನ ಜೀವನದ ಅದ್ಧೂರಿ ಆಚರಣೆಯನ್ನು ಆಚರಿಸಲು ಮನೆ-ಮನೆಗೆ ತೆರಳಿ ಜನರಲ್ಲಿ ಮನವಿ ಮಾಡಲಾಗುತ್ತದೆ.
ಮೂರನೇ ಹಂತವು ಜನವರಿ 22 ರಿಂದ ಪ್ರಾರಂಭವಾಗಲಿದ್ದು, ಇದರಲ್ಲಿ ಪ್ರಧಾನಿ ಮೋದಿ ಅವರು ಭವ್ಯವಾದ ರಾಮ ಮಂದಿರವನ್ನು ಉದ್ಘಾಟಿಸಲಿದ್ದಾರೆ. ಈ ಅವಧಿಯಲ್ಲಿ ದೇಶಾದ್ಯಂತ ಕಾರ್ಯಕ್ರಮಗಳು ನಡೆಯಲಿವೆ.
ನಾಲ್ಕನೇ ಮತ್ತು ಕೊನೆಯ ಹಂತದಲ್ಲಿ ಭಗವಾನ್ ರಾಮನ ದರ್ಶನಕ್ಕಾಗಿ ದೇಶಾದ್ಯಂತ ಅಭಿಯಾನವನ್ನು ಪ್ರಾರಂಭಿಸಲಾಗುವುದು. ಇದರಿಂದಾಗಿ ಹೆಚ್ಚು ಹೆಚ್ಚು ಜನರು ರಾಮನ ದರ್ಶನವನ್ನು ಪಡೆಯಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.