ಸುಳ್ಯದಲ್ಲಿ ಸಹಕಾರಿ ಸಂಸ್ಥೆಯೊಂದರಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪಟ್ಟೆ ನಿವಾಸಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಪಟ್ಟೆ ಮಾನಿಂಜೆ ಆನಂದ ಗೌಡ-ಪಾರ್ವತಿ ದಂಪತಿಯ ಮಗ ಪ್ರೀತಂ ಎನ್.(26ವ.)ಆತ್ಮಹತ್ಯೆ ಮಾಡಿಕೊಂಡವರು.
ಕಳೆದ ಐದು ವರ್ಷಗಳಿಂದ ಪರಿವಾರ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯಲ್ಲಿ ಉದ್ಯೋಗದಲ್ಲಿದ್ದ ಪ್ರೀತಂ ಅವರು ಮೂರು ವರ್ಷಗಳಿಂದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಒಂದೂವರೆ ವರ್ಷ ಮಂಗಳೂರು ಶಾಖೆಯಲ್ಲಿ ವ್ಯವಸ್ಥಾಪಕರಾಗಿದ್ದು ಕಳೆದೊಂದು ವರ್ಷದಿಂದ ಸುಳ್ಯದ ನೂತನ ಶಾಖೆಯಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಪ್ರೀತಂ ಅವರು ದ.2ರಂದು ಕೆಲಸ ಮುಗಿಸಿ ಸಂಜೆ 4 ಗಂಟೆಗೆ ಪಟ್ಟೆ ಮನೆಗೆ ಬಂದಿದ್ದರು. ಮನೆಯಲ್ಲಿ ಎಲ್ಲರೂ ಊಟ ಮಾಡಿ ರಾತ್ರಿ 10.30 ಗಂಟೆಗೆ ಮಲಗಿದ್ದರು. ನಾಳೆ ಮೂಡಬಿದರೆಯಲ್ಲಿ ತರಬೇತಿ ಇದ್ದು ಬೇಗ ಎಬ್ಬಿಸುವಂತೆ ತಾಯಿಗೆ ತಿಳಿಸಿ ಪ್ರೀತಂ ಅವರ ಕೋಣೆಯಲ್ಲಿ ಮಲಗಿದ್ದರು. ದ.3ರಂದು ಬೆಳಿಗ್ಗೆ 6 ಗಂಟೆಗೆ ಮಗ ಪ್ರೀತಮ್ ಅವರನ್ನು ಎಬ್ಬಿಸಲೆಂದು ತಾಯಿ ಆತ ಮಲಗಿದ್ದ ಕೋಣೆಗೆ ಹೋದಾಗ ಅಲ್ಲಿ ಪ್ರೀತಂ ಇರಲಿಲ್ಲ. ಆತಂಕಗೊಂಡ ಅವರು ಮನೆಯ ಸುತ್ತಮುತ್ತ ಹುಡಿಕಾಡಿ ನಂತರ ಮನೆಯ ಅಂಗಳದ ಬಾವಿಗೆ ಹೋಗಿ ನೋಡಲಾಗಿ ಪಕ್ಕದಲ್ಲಿ ಪ್ರೀತಂ ಅವರ ಚಪ್ಪಲಿ ಮತ್ತು ಮೊಬೈಲ್ ಫೋನ್ ಕಂಡು ಬಂದಿತ್ತು. ಬಾವಿಯಲ್ಲಿ ನೋಡಿದಾಗ ಏನೂ ಕಾಣದೇ ಇದ್ದುದರಿಂದ ಅವರು ನೆರೆ ಮನೆಯ ವಿಠಲ ಸಾಲ್ಯಾನ್ ಅವರನ್ನು ಕರೆದು ಬಳಿಕ ಪುತ್ತೂರು ಅಗ್ನಿ ಶಾಮಕದವರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಅವರು ಬಂದು ಬಾವಿಗಿಳಿದು ನೋಡಿದಾಗ ಪ್ರೀತಂ ಅವರ ಮೃತ ದೇಹ ಪತ್ತೆಯಾಗಿತ್ತು.
ಪ್ರೀತಂ ಅವರು ಯಾವುದೋ ಕಾರಣಕ್ಕೆ ಮನನೊಂದು, ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸದ್ರಿ ಮರಣದಲ್ಲಿ ಬೇರಾವುದೇ ಸಂಶಯವಿರುವುದಿಲ್ಲ ಎಂದು ಮೃತರ ತಂದೆ ಆನಂದ ಗೌಡ ಅವರು ನೀಡಿರುವ ದೂರಿನ ಮೇರೆಗೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತರು ಅವಿವಾಹಿತರಾಗಿದ್ದು ತಂದೆ, ತಾಯಿ ಹಾಗೂ ಬೆಂಗಳೂರುನಲ್ಲಿ ಉದ್ಯೋಗದಲ್ಲಿರುವ ಸಹೋದರ ಮೋಹಿತ್ ಅವರನ್ನು ಅಗಲಿದ್ದಾರೆ.