ಅರ್ಜುನನ ಅಂತ್ಯಸಂಸ್ಕಾರಕ್ಕೆ ಅಡ್ಡಿ – ಪೊಲೀಸರಿಂದ ಲಾಠಿ ಪ್ರಹಾರ, ದಿಕ್ಕಾಪಾಲಾಗಿ ಓಡಿದ ಜನ

ಶೇರ್ ಮಾಡಿ

ಪುಂಡಾನೆ ಸೆರೆ ಕಾರ್ಯಾಚರಣೆ ವೇಳೆ ವೀರಮರಣವನ್ನಪ್ಪಿದ ಕ್ಯಾಪ್ಟನ್ ಅರ್ಜುನನ ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸಿದ ವೇಳೆ ಲಘು ಲಾಠಿ ಪ್ರಹಾರ ನಡೆದಿದೆ.

ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ, ಯಸಳೂರು, ಬಾಳೆಕೆರೆ ಅರಣ್ಯದಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನ ವೀರಮರಣವನ್ನಪ್ಪಿತು. ಅರ್ಜುನನ ಕಳೇಬರವನ್ನು ಮೈಸೂರಿಗೆ ಕರೆತರುವಂತೆ ಕೆಲ ಸಂಘಟನೆಯ ಪ್ರಮುಖರು ಒತ್ತಾಯಿಸಿದ್ದರು. ಆದ್ರೆ ಅರಣ್ಯ ಇಲಾಖೆ ಅಧಿಕಾರಿಗಳು ಮೃತಪಟ್ಟ ಸ್ಥಳದಲ್ಲೇ ಅಂತ್ಯಕ್ರಿಯೆ ನೆರವೇರಿಸಲು ಮುಂದಾದರು.

ಅರ್ಜುನನ ಅಂತ್ಯ ಸಂಸ್ಕಾರಕ್ಕೆ ಗುಂಡಿ ತೆಗೆಯುತ್ತಿದ್ದ ವೇಳೆ ಕೆಲ ಸಂಘಟನೆಯ ಕಾರ್ಯಕರ್ತರು ಅಡ್ಡಿಪಡಿಸಿದರು. ಇದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಪೊಲೀಸರು ಲಾಠಿ ಚಾರ್ಜ್ಗೆ ಮುಂದಾಗುತ್ತಿದ್ದಂತೆ ಸ್ಥಳದಲ್ಲಿದ್ದ ಜನ ದಿಕ್ಕಾಪಾಲಾಗಿ ಓಡಿದರು. ಓಡುವ ಬರದಲ್ಲಿ ಕೆಲವರು ಬಿದ್ದು ಕೈಕಾಲಿಗೆ ಪೆಟ್ಟಾಗಿಸಿಕೊಂಡಿದ್ದಾರೆ.

ವೀರಮರಣವನ್ನಪ್ಪಿದ ಕ್ಯಾಪ್ಟನ್ ಅರ್ಜುನ ಅಂತ್ಯಕ್ರಿಯೆಗೂ ಮುನ್ನ ಮೂರು ಸುತ್ತು ಕುಶಾಲತೋಪು ಹಾರಿಸಿ, ಸಕಲ ಪೊಲೀಸ್ ಗೌರವವನ್ನೂ ಸಲ್ಲಿಸಲಾಯಿತು. ರಾಜಮನೆತನದ ಪುರೋಹಿತ ಪ್ರಹ್ಲಾದ್ ತಂಡದಿಂದ ಪೂಜಾ ವಿಧಿವಿಧಾನ ನೇರವೇರಿಸಲಾಯಿತು.

ರಾಜಮನೆತನದ ಪುರೋಹಿತ ಪ್ರಹ್ಲಾದ್ ಅರ್ಜುನನಿಗೆ ಅಂತಿಮ ವಿಧಿವಿಧಾನ ನೇರವೇರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ನಮ್ಮ ದುರದೃಷ್ಟ ಇವತ್ತು ಅರ್ಜುನನ್ನು ಕಳೆದುಕೊಂಡಿದ್ದೇವೆ. ಹುಟ್ಟು ಸಹಜ, ಸಾವು ಖಚಿತ, ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನ ಮೃತಪಟ್ಟಿದ್ದಾನೆ. ಅರಮನೆಗೆ ಬಂದಾಗಿನಿಂದ ನಾನೇ ಪೂಜೆ ಮಾಡುತ್ತಿದ್ದೆ. ನನ್ನ ಒಬ್ಬ ಸಹೋದರನನ್ನು ಕಳೆದುಕೊಂಡಂತಾಗಿದೆ. ರಾಷ್ಟ್ರಪತಿಗೆ ಕೊಡುವ ಗೌರವ ಕೊಟ್ಟು ದಸಾರೆಯಲ್ಲಿ ಭಾಗಿಯಾಗುತ್ತಿದ್ದ ಸಾಕಾನೆಗಳನ್ನು ಅರಮೆನೆ ಒಳಗೆ ಕರೆದುಕೊಳ್ಳುತ್ತಿದ್ದೆವು. ರಾಜ ಗಾಂಭಿರ್ಯದಿಂದ ಅಂಬಾರಿ ಹೊತ್ತುಕೊಂಡು ಹೋಗಬೇಕಾದರೆ ನೋಡುವುದೇ ಒಂದು ಸಂತೋಷ. ಆದರೀಗ ಅರ್ಜುನನನ್ನು ಕಳೆದುಕೊಂಡಿರುವುದು ಅತೀವ ನೋವು ತಂದಿದೆ ಎಂದರು.

ಅಲ್ಲದೇ ಅರ್ಜುನ ಇಲ್ಲಿಯೇ ಮೃತಪಟ್ಟಿದ್ದಾನೆ, ಇದೇ ಜಾಗದಲ್ಲಿ ಅಂತ್ಯಸಂಸ್ಕಾರವಾಗಲಿ, ಆನಂತರ ಇಲ್ಲಿ ಸ್ಮಾರಕ ಭವನ ನಿರ್ಮಾಣ ಮಾಡಲಿ ಎಂದು ಮನವಿ ಮಾಡಿದರು.

Leave a Reply

error: Content is protected !!