ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಹೆತ್ತ ಮಕ್ಕಳನ್ನು ಕೊಂದು ತಾಯಿ ನೇಣಿಗೆ ಶರಣು

ಶೇರ್ ಮಾಡಿ

ಹೆತ್ತ ತಾಯಿಯೇ ಇಬ್ಬರು ಮಕ್ಕಳನ್ನು ಕೊಂದು, ಬಳಿಕ ತಾನು ನೇಣಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಯಾದಲಘಟ್ಟ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಯಾದಲಗಟ್ಟ ಗ್ರಾಮದ ಲತಾ ಹಾಗೂ ಪತಿ ತಿಪ್ಪೇಸ್ವಾಮಿಗೆ ಇಬ್ಬರು ಮಕ್ಕಳಿದ್ದು, ಬೆಳಗ್ಗೆ ಎಂದಿನಂತೆ ತಿಪ್ಪೇಸ್ವಾಮಿ ಜಮೀನಿಗೆ ತೆರಳಿದ್ದರು. ಹೀಗಾಗಿ ಎಂದಿನಂತೆ ಪತ್ನಿ ಊಟ ತೆಗೆದುಕೊಂಡು ಬರುವಳೆಂಬ ನಿರೀಕ್ಷೆಯಲ್ಲಿದ್ದ ಪತಿಗೆ ಮನೆಯಲ್ಲಿ ನಡೆದಿರುವ ಘಟನೆ ಕೇಳಿ ಶಾಕ್ ಆಗಿದೆ. ಗ್ರಾಮಸ್ಥರಿಂದ ವಿಷಯ ತಿಳಿದು ಮನೆಗೆ ಧಾವಿಸಿ, ಗಮನಿಸಿದಾಗ ಪತ್ನಿ ಲತಾ ಹಾಗೂ ಇಬ್ಬರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ.

ತಾಯಿ ಲತಾ (25) ಮಗಳು ಪ್ರಣೀತ(5), ಪುತ್ರ ಜ್ಞಾನೇಶ್ವರ ಮೃತರೆಂದು ಗುರುತಿಸಲಾಗಿದೆ. ಲತಾ ಮೊದಲಿಗೆ ತನ್ನ ಇಬ್ಬರು ಮಕ್ಕಳನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಹತ್ಯೆಗೈದಿದ್ದು ಬಳಿಕ ತಾನು ಸಹ ನೇಣಿಗೆ ಶರಣಾಗಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಆದರೆ ಈವರೆಗೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೌಟಂಬಿಕ ಕಲಹದ ಶಂಕೆ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಲತಾಳ ಪತಿ ತಿಪ್ಪೇಸ್ವಾಮಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಪೊಲೀಸರ ತನಿಖೆ ಬಳಿಕ ಸತ್ಯಾಸತ್ಯತೆ ಹೊರಬೀಳಲಿದೆ. ಸ್ಥಳದಲ್ಲಿ ಮೃತರ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ.

Leave a Reply

error: Content is protected !!