ತುಳುನಾಡ ಕೊರಗಜ್ಜ ಸ್ವಾಮಿಗೆ ಮದ್ಯದ ಸಮಾರಾಧನೆ ಎಂದರೆ ಬಹಳ ಅಚ್ಚುಮೆಚ್ಚು. ಜೊತೆಗೆ ಚಕ್ಕುಲಿ, ಬೀಡಾ ಕೊಟ್ಟರಂತೂ ಇನ್ನೂ ಪ್ರೀತಿ. ವ್ಯಕ್ತಿಯೊಬ್ಬರು ತಾನು ಹೊತ್ತ ಹರಕೆ ಈಡೇರಿಸಿದರು ಎಂಬ ಕಾರಣಕ್ಕೆ ಕೊರಗಜ್ಜನಿಗೆ ಬರೋಬ್ಬರಿ 1002 ಬಾಟಲಿ ಮದ್ಯದ ಸಮಾರಾಧನೆ ಮಾಡಿದ್ದಾರೆ! ಉಡುಪಿಯಲ್ಲಿ ನಡೆದ ಅಪರೂಪದ ಹರಕೆ ತೀರಿಸುವ ಕಾರ್ಯಕ್ರಮದ ಬಗ್ಗೆ ಒಂದು ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.
ಕರಾವಳಿಯ ದೈವರಾದನೆಯು ಜನರ ನಂಬಿಕೆಯ ಮೇಲೆ ನಿಂತಿದೆ. ಭಕ್ತರ ಬೇಡಿಕೆಯನ್ನು ಕ್ಷಣಮಾತ್ರದಲ್ಲಿ ಈಡೇರಿಸುವ ಕಾರ್ಣಿಕ ಮೆರೆಯುತ್ತಿರುವ ತುಳುನಾಡಿನ ಮೆಚ್ಚಿನ ದೈವ, ಸ್ವಾಮಿ ಕೊರಗಜ್ಜನಿಗೆ ಭಕ್ತರ ಹರಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕರಾವಳಿ ಮಾತ್ರವಲ್ಲದೆ ರಾಜ್ಯದ ಮೂಲೆ ಮೂಲೆಗಳಿಂದಲೂ ಸ್ವಾಮಿ ಕೊರಗಜ್ಜರ ಭಕ್ತರು ಕ್ಷೇತ್ರಗಳಿಗೆ ಬರುತ್ತಾರೆ. ಉಡುಪಿ ಜಿಲ್ಲೆ ಕಟಪಾಡಿ ಪೇಟೆಬೆಟ್ಟು ಭಗವಾನ್ ಶ್ರೀ ಬಬ್ಬು ಸ್ವಾಮಿ ದೈವಸ್ಥಾನ ಮತ್ತು ಶ್ರೀ ಸ್ವಾಮಿಕೊರಗಜ್ಜ ಸನ್ನಿಧಿಯಲ್ಲಿ ಹರಕೆ ಹೊತ್ತ ವ್ಯಕ್ತಿಯೊಬ್ಬರು ಪವಾಡವೋ ಎಂಬಂತೆ ತನ್ನ ಬಯಕೆಯನ್ನು ಈಡೇರಿಸಿಕೊಂಡಿದ್ದಾರೆ.
ಉಡುಪಿಯ ಜಿಲ್ಲೆಯ ಸಾಲಿಗ್ರಾಮದ ರವಿಚಂದ್ರ ದಂಪತಿಗಳಿಗೆ ಮದುವೆಯಾಗಿ ವರ್ಷಗಳೆ ಕಳೆದರು ಸಂತಾನ ಪ್ರಾಪ್ತಿಯಾಗಿರುವುದಿಲ್ಲ, ಹಾಗಾಗಿ ಉಡುಪಿಜಿಲ್ಲೆಯ ಕಾಪು ತಾಲೂಕಿನ ಕಟಪಾಡಿಯ ಪೇಟೆಬೆಟ್ಟು ಬಬ್ಬುಸ್ವಾಮಿ ಮತ್ತು ಕೊರಗಜ್ಜ ದೈವಸ್ಥಾನಕ್ಕೆ ಬಂದು ಕೊರಗಜ್ಜ ಗುಡಿಯ ಮುಂದೆ ಸಂತಾನ ಪ್ರಾಪ್ತಿಗಾಗಿ ಒಂದು ಸಾವಿರದ ಎರಡು ಮಧ್ಯದ ಬಾಟಲಿಗಳ ಹರಕೆಯನ್ನು ಸಲ್ಲಿಸುತ್ತೆವೆ ಎಂದು ದಂಪತಿಗಳು ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ರವಿಚಂದ್ರ ದಂಪತಿಗಳು ಎಣಿಸಿಕೊಂಡ ಕೆಲಸವನ್ನು ಹರಕೆ ಹೊತ್ತ ಕ್ಷಣಮಾತ್ರದಲ್ಲಿ ಸ್ವಾಮಿ ಕೊರಗಜ್ಜ ಮಾಡಿಕೊಟ್ಟಿದ್ದಾರೆ ಎಂಬ ನಂಬಿಕೆ ಈ ಭಕ್ತರದ್ದು. ಹಾಗಾಗಿ ತಾನು ಹರಕೆ ಹೊತ್ತಂತೆ, ಒಂದು ಸಾವಿರದ ಎರಡು ಮದ್ಯದ ಬಾಟಲಿಗಳನ್ನು ತಂದು ಕೊರಗಜ್ಜನ ಸನ್ನಿಧಾನಕ್ಕೆ ಅರ್ಪಿಸಿದ್ದಾರೆ.
ಪೇಟೆ ಬೆಟ್ಟು ಶ್ರೀ ಭಗವಾನ್ ಶ್ರೀ ಬಬ್ಬು ಸ್ವಾಮಿ ದೇವಸ್ಥಾನ ಕಟಪಾಡಿ ಇಲ್ಲಿಗೆ ದಿನನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ಪ್ರತಿ ದಿನ ಭಕ್ತರು ಹರಕೆಯ ರೂಪದಲ್ಲಿ ಚಕ್ಕುಲಿ, ಬೀಡಾ, ವೀಳ್ಯದೆಲೆ, ಮದ್ಯದ ಬಾಟಲಿ ಸಲ್ಲಿಸುತ್ತಾರೆ. ಹರಕೆಯ ರೂಪದಲ್ಲಿ ಸಮರ್ಪಿಸಲಾದ ಮದ್ಯವನ್ನು ನಂತರ ಪ್ರಸಾದ ರೂಪದಲ್ಲಿ ಮದ್ಯ ಸೇವಿಸುವ ಭಕ್ತರಿಗೆ ಮನೆಗೆ ತೆಗೆದುಕೊಂಡು ಹೋಗುವಂತೆ ನೀಡಲಾಗುತ್ತದೆ. ಉಳಿದ ಮದ್ಯವನ್ನು ಕೊರಗಜ್ಜ ದೈವದ ಗುಡಿಯ ಹತ್ತಿರ ಸಮರ್ಪಿಸಲಾಗುತ್ತದೆ.