ಖ್ಯಾತ ಗಾಯಕಿ ಭಾರತದ ನೈಟಿಂಗೇಲ್‌ ಲತಾ ಮಂಗೇಶ್ಕರ್ ವಿಧಿವಶ

ಶೇರ್ ಮಾಡಿ

ನೇಸರ ಫೆ06:ಭಾರತೀಯ ಚಿತ್ರರಂಗದ ಜನಪ್ರಿಯ ಗಾಯಕಿ ಲತಾ ಮಂಗೇಶ್ಕರ್ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಲತಾ ಮಂಗೇಶ್ವರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಇಂದು (ಫೆಬ್ರವರಿ 6) ಗಾಯಕಿ ಲತಾ ಮಂಗೇಶ್ಕರ್ ವಿಧಿವಶರಾಗಿದ್ದಾರೆ. ಲತಾ ಮಂಗೇಶ್ಕರ್ ಅವರಿಗೆ 92 ವರ್ಷ ವಯಸ್ಸಾಗಿತ್ತು.ನ್ಯೂಮೋನಿಯಾದಿಂದ ಬಳಲುತ್ತಿದ್ದ ಲತಾ ಮಂಗೇಶ್ಕರ್ ಅವರನ್ನು ಕಳೆದ ಜನವರಿ ತಿಂಗಳಿನಲ್ಲಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.
ಲತಾ ಮಂಗೇಶ್ಕರ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿ ಎಂದು ಅವರ ಅಸಂಖ್ಯಾತ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದರು. ಆದರೆ, ಕೊನೆಗೂ ಪ್ರಾರ್ಥನೆ ಫಲಿಸಲೇ ಇಲ್ಲ. ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಗಣ್ಯರು ಹಾಗೂ ಇಡೀ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ.
ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಜನಪ್ರಿಯ ಗಾಯಕಿ ಲಯಾ ಮಂಗೇಶ್ಕರ್. ಅವರನ್ನು ‘ನೈಟಿಂಗೇಲ್ ಆಫ್ ಇಂಡಿಯಾ’ ಅಂತಲೇ ಪ್ರೀತಿ ಗೌರವದಿಂದ ಕರೆಯಲಾಗುತ್ತಿತ್ತು. ಸಾವಿರಕ್ಕೂ ಅಧಿಕ ಹಿಂದಿ ಸಿನಿಮಾಗಳಲ್ಲಿ ಹಾಡಿರುವ ಖ್ಯಾತಿ ಲತಾ ಮಂಗೇಶ್ಕರ್ ಅವರದ್ದು. ಹಿಂದಿ, ಮರಾಠಿ ಸೇರಿದಂತೆ 36ಕ್ಕೂ ಅಧಿಕ ಭಾಷೆಗಳಲ್ಲಿ 30 ಸಾವಿರಕ್ಕೂ ಅಧಿಕ ಹಾಡುಗಳಲ್ಲಿ ಲತಾ ಮಂಗೇಶ್ಕರ್ ಗಾನಸುಧೆ ಹರಿಸಿದ್ದರು. 13ನೇ ವಯಸ್ಸಿಗೆ.. ಅಂದ್ರೆ 1942ನೇ ಇಸವಿಯಿಂದ ಸಿನಿಮಾದ ಹಾಡುಗಳಿಗೆ ಲತಾ ಮಂಗೇಶ್ಕರ್ ದನಿಯಾಗುತ್ತಾ ಬಂದಿದ್ದರು.
ಸಿನಿಮಾ ಸಂಗೀತ ಕ್ಷೇತ್ರದಲ್ಲಿ ಲತಾ ಮಂಗೇಶ್ಕರ್ ನೀಡಿರುವ ಅಪಾರ ಕೊಡುಗೆಗಾಗಿ 1989ರಲ್ಲಿ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಗಿದೆ. 1969ರಲ್ಲಿ ಪದ್ಮಭೂಷಣ, 1999ರಲ್ಲಿ ಪದ್ಮವಿಭೂಷಣ, 2001ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ಲತಾ ಮಂಗೇಶ್ಕರ್ ಪಡೆದಿದ್ದರು. ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ, ನಾಲ್ಕು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ, ಎರಡು ಬಾರಿ ಫಿಲ್ಮ್ ಫೇರ್ ಸ್ಪೆಷಲ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಲತಾ ಮಂಗೇಶ್ಕರ್ ಸ್ವೀಕರಿಸಿದ್ದರು

Leave a Reply

error: Content is protected !!