ಸುದೀಪ್ ಸರ್, ನೀವು ಹೇಳಿದ್ದೇನು? ಆಗುತ್ತಿರುವುದೇನು: ಸಂಗೀತಾ ಸಹೋದರ ಪ್ರಶ್ನೆ

ಶೇರ್ ಮಾಡಿ

ಬಿಗ್​ಬಾಸ್ ಕನ್ನಡ ಸೀಸನ್ 10ರ ಇತ್ತೀಚೆಗಿನ ಎಪಿಸೋಡ್​ಗಳ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಸ್ಪರ್ಧಿಗಳು ಹಿಂಸಾತ್ಮಕವಾಗಿ ವರ್ತಿಸುತ್ತಿದ್ದಾರೆ, ಪರಸ್ಪರರ ಬಗ್ಗೆ ಕಠೋರ ಮಾತುಗಳನ್ನಾಡುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ. ಇದರ ನಡುವೆ ಇತ್ತೀಚೆಗಿನ ಟಾಸ್ಕ್ ಒಂದರಲ್ಲಿ ಎದುರಾಳಿ ಸ್ಪರ್ಧಿಗಳು ಹಿಂಸಾತ್ಮಕವಾಗಿ ಆಡಿದ ಕಾರಣ ಸಂಗೀತಾ ಹಾಗೂ ಡ್ರೋನ್ ಪ್ರತಾಪ್​ ಅವರುಗಳಿಗೆ ಗಾಯವಾಗಿದೆ. ಈ ಬಗ್ಗೆ ಸಂಗೀತಾರ ಸಹೋದರ ಸುದೀಪ್​ ಅವರನ್ನು ಸಾಮಾಜಿಕ ಜಾಲತಾಣದ ಮೂಲಕ ಪ್ರಶ್ನೆ ಮಾಡಿದ್ದಾರೆ.

‘‘ಕಿಚ್ಚ ಸುದೀಪ್, ಬಿಗ್​ಬಾಸ್ ಮನೆ ಸ್ವರ್ಗದಷ್ಟೆ ಸುರಕ್ಷಿತವಾದದ್ದು, ಯಾವ ಕಾರಣಕ್ಕೂ ಅಪಾಯಕ್ಕೆ ಆಸ್ಪದವೇ ಇಲ್ಲ ಎಂದು ನೀವು ಭರವಸೆ ನೀಡಿದ್ದಿರಿ. ಆದರೆ ನೀವು ಕೊಟ್ಟ ಭರವಸೆಯನ್ನು ಈಗ ಬಿಗ್​ಬಾಸ್ ಮನೆಯೊಳಗೆ ನಡೆದಿರುವ ಘಟನೆಗಳು ಮುರಿದು ಹಾಕಿವೆ. ಒಂದೊಮ್ಮೆ ಕೌಟುಂಬಿಕ ಕಾರ್ಯಕ್ರಮ ಆಗಿದ್ದ ಬಿಗ್​ಬಾಸ್ ಈಗ ಆಕ್ರಮಣಕಾರಿ ಮತ್ತು ತಡೆಯಿಲ್ಲದ ಹಿಂಸೆಗೆ ವೇದಿಕೆ ಆದಂತಾಗಿದೆ. ಕುಟುಂಬಗಳು ಆತಂಕದಲ್ಲಿವೆ. ಹೇಗೆತಾನೆ ನಾವು ಒಟ್ಟಿಗೆ ಕೂತು ಈ ಆಕ್ರಮಣಶೀಲತೆ, ಹಿಂಸೆಯನ್ನು ನೋಡಲು ಸಾಧ್ಯ’’ ಎಂದು ಪ್ರಶ್ನೆ ಮಾಡಿದ್ದಾರೆ ಸಂಗೀತಾರ ಸಹೋದರ ಸಂತೋಷ್ ಕುಮಾರ್.

ಮುಂದುವರೆದು, ಕಲರ್ಸ್ ಕನ್ನಡ ಚಾನೆಲ್​ ಅನ್ನು ಸಹ ಪ್ರಶ್ನೆ ಮಾಡಿರುವ ಸಂತೋಷ್ ಕುಮಾರ್, ‘‘ಮನೆಯಲ್ಲಿ ಆಗಿರುವ ಸಮಸ್ಯೆಗಳನ್ನು ಪರಿಹರಿಸಲು, ಬುದ್ಧಿಹೇಳಲು ಸುದೀಪ್ ಅವರೇ ಬರಬೇಕು ಎಂದು ಕಾಯುವುದು ಏಕೆ? ಸ್ಪರ್ಧಿಗಳು ಮಾಡಿದ ತಪ್ಪನ್ನು ಸ್ಥಳದಲ್ಲಿಯೇ ಬಿಗ್​ಬಾಸ್ ಸರಿ ಮಾಡಬಹುದಲ್ಲವೇ? ಏಕೆ ಮಾಡುತ್ತಿಲ್ಲ’’ ಎಂದು ಸಹ ಪ್ರಶ್ನೆ ಮಾಡಿದ್ದಾರೆ.

ಬಿಗ್​ಬಾಸ್ ಮನೆಯಲ್ಲಿ ಈ ವಾರ ಅತಿಯಾದ ಹಿಂಸೆ ನಡೆದಿದೆ. ಕಾರ್ತಿಕ್ ಹಾಗೂ ವಿನಯ್ ಪರಸ್ಪರ ಕೈ-ಕೈ ಮಿಲಾಯಿಸುವ ಹಂತಕ್ಕೆ ಜಗಳವಾಡಿದರು. ಸಂಗೀತಾ-ನಮ್ರತಾ ಜಗಳವೂ ಸಹ ಕರ್ಣ ಕಠೋರವಾಗಿತ್ತು. ಶುಕ್ರವಾರದ ಎಪಿಸೋಡ್​ನಲ್ಲಂತೂ ವಿನಯ್, ಮೈಖಲ್, ನಮ್ರತಾ, ಪವಿ ಹಾಗೂ ವರ್ತೂರು ಅವರುಗಳು ಮಾನವೀಯತೆಯ ಗಡಿ ಮೀರಿ ವರ್ತಿಸಿದರು. ಕುರ್ಚಿಯಲ್ಲಿ ಕೂತಿದ್ದ ಸಂಗೀತಾ ಹಾಗೂ ಡ್ರೋನ್ ಪ್ರತಾಪ್​ರನ್ನು ಎಬ್ಬಿಸಲು ಸೋಲು, ಡೆಟಾಲ್, ಖಾರದ ಪುಡಿ ಇನ್ನಿತರೆ ಬೆರೆಸಿದ ನೀರನ್ನು ಸತತವಾಗಿ ಮತ್ತು ಬಲವಾಗಿ ಎಸೆದರು. ಇದರಿಂದ ಸಂಗೀತಾ ಹಾಗೂ ಡ್ರೋನ್ ಪ್ರತಾಪ್ ಮುಖ, ಕಣ್ಣಿಗೆ ಹಾನಿಯಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯ್ತು.

ಶನಿವಾರ ಸುದೀಪ್​ ವಾರದ ಪಂಚಾಯ್ತಿ ನಡೆಸಲಿದ್ದಾರೆ. ಟಾಸ್ಕ್​ಗಳಲ್ಲಿ ತಪ್ಪು ಮಾಡಿದವರಿಗೆ ಇಂದು ಶಿಕ್ಷೆಯಾಗುವ ನಿರೀಕ್ಷೆ ಇದೆ. ಜೊತೆಗೆ ಈ ವಾರ ಯಾರು ಹೊರಗೆ ಹೊಗುತ್ತಾರೆ, ಯಾರು ಉಳಿದುಕೊಳ್ಳುತ್ತಾರೆ ಎಂಬ ಕುತೂಹಲಕ್ಕೂ ಅರ್ಧ ಉತ್ತರ ಸಿಗಲಿದೆ.

Leave a Reply

error: Content is protected !!