ಶ್ಯಾಕ್ಸ್ ಎಂಟರ್‌ಪ್ರೈಸಸ್‌ನ ಅಬ್ದುಲ್ ಶಕೀಲ್ ನಿರ್ಮಾಣದ ಬ್ಯಾರಿ ಭಾಷೆಯ ಚಲನಚಿತ್ರ ‘ಮುಸಾಫಿರ್’ಗೆ ‘ಕರ್ನಾಟಕ ನಂದಿ ಫಿಲ್ಮ್ -2023’ ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ‘ಮುಸಾಫಿರ್’ ಸಿನೆಮಾದ ಮುಖ್ಯಪಾತ್ರಧಾರಿ ಮುಹಮ್ಮದ್ ಬಡ್ಡೂರು ಅವರ ಪರವಾಗಿ ಚಲನಚಿತ್ರ ನಿರ್ದೇಶಕ ಅಂಬಳಿಕೆ ರವಿ ಹಾಗೂ ‘ಮುಸಾಫಿರ್’ ಸಿನೆಮಾಕ್ಕೆ ಸಾಹಿತ್ಯ ಬರೆದ ಪತ್ರಕರ್ತ ಹಂಝ ಮಲಾರ್ ಅವರು ‘ಕಾಂತಾರ’ ಸಿನೆಮಾದ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ಹಂಝ ಮಲಾರ್‌ರ ‘ಸೂಫಿ ಬ್ಯಾರಿಯ ಝಕಾತ್ ಯಾತ್ರೆ’ ಕಥೆ ಆಧಾರಿತ ‘ಮುಸಾಫಿರ್’ ಸಿನೆಮಾದಲ್ಲಿ ನಟಿಸಿದ್ದ ಸಾಹಿತಿ ಮುಹಮ್ಮದ್ ಬಡ್ಡೂರ್ ‘ಅಬ್ಬಾ’ ಬ್ಯಾರಿ ಸಿನೆಮಾದಲ್ಲೂ ಮುಖ್ಯಪಾತ್ರದಲ್ಲಿ ನಟಿಸಿದ್ದರು.
ಕನ್ನಡವಲ್ಲದೆ ತುಳು, ಬ್ಯಾರಿ, ಕೊಂಕಣಿ, ಕೊಡವ, ಬಂಜಾರದಂತಹ ರಾಜ್ಯದ ಪ್ರಾದೇಶಿಕ ಭಾಷೆಗಳ ಸಿನೆಮಾವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಚಿತ್ರನಟರಾದ ರವಿಚಂದ್ರನ್, ವಿನೋದ್ ರಾಜ್, ಶ್ರೀನಾಥ್, ಧ್ರುವ ಸರ್ಜಾ, ಉಮಾಶ್ರೀ, ಅನು ಪ್ರಭಾಕರ್, ವಸಿಷ್ಠ ಸಿಂಹ, ಅನಿರುದ್ಧ, ಪ್ರೇಮಾ, ಹರಿಪ್ರಿಯಾ, ಉಲ್ಲಾಸ್ ಹಾಗೂ ಆಯೋಜಕರಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಭಾ.ಮಾ.ಹರೀಶ್, ನಿರ್ಮಾಪಕ ನಂದಳಿಕೆ ನಿತ್ಯಾನಂದ ಪ್ರಭು, ಪದ್ಮಾವತಿ ಚಂದ್ರಶೇಖರ್, ಅನಿತಾ ರೆಡ್ಡಿ, ಭಾ.ಮಾ.ಗಿರೀಶ್, ಹರ್ಷಿತಾ, ನಂದಿತಾ, ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.