ಆಸ್ತಿ ಬರೆಯಲು ನಿರಾಕರಿಸಿದ ಅಮ್ಮನ ಶಿರಚ್ಛೇದ ಮಾಡಿದ ಪಾಪಿ ಪುತ್ರ!

ಶೇರ್ ಮಾಡಿ

ತನ್ನ ಹೆಸರಿಗೆ ಆಸ್ತಿ ವರ್ಗಾಯಿಸಲು ನಿರಾಕರಿಸಿದ ಕಾರಣಕ್ಕೆ ಮಗ ತನ್ನ ತಾಯಿಯ ಶಿರಚ್ಛೇದ ಮಾಡಿ ರುಂಡದೊಂದಿಗೆ ಪರಾರಿಯಾದ ಘಟನೆ ಉತ್ತರಪ್ರದೇಶದ ಸೀತಾಪುರ ಜಿಲ್ಲೆಯ ತಾಳಂಗಾವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜಿಲ್ಲೆಯ ಮೇಜಾಪುರ ಗ್ರಾಮದಲ್ಲಿ ಶನಿವಾರ ಘಟನೆ ನಡೆದಿದ್ದು, ಆರೋಪಿ ದಿನೇಶ್ ಪಾಸಿ (35) ತನ್ನ ತಾಯಿ ಕಮಲಾ ದೇವಿಯನ್ನು (65) ಕೃಷಿ ಬ್ಲೇಡ್‌ನಿಂದ ಹತ್ಯೆಗೈದು ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಸೀತಾಪುರ ಪೊಲೀಸ್ ವರಿಷ್ಠಾಧಿಕಾರಿ ಚಕ್ರೇಶ್ ಮಿಶ್ರಾ ಮಾಹಿತಿ ನೀಡಿದ್ದಾರೆ.

ದಿನೇಶ್ ಮದ್ಯವ್ಯಸನಿಯಾಗಿದ್ದ. ಈತ ಪ್ರತಿದಿನ ಕುಡಿದು ಬಂದು ತಾಯಿಯೊಂದಿಗೆ ಜಗಳವಾಡುತ್ತಿದ್ದು, ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಕಿರುಕುಳ ನೀಡುತ್ತಿದ್ದ. ಅದೇ ರೀತಿ ಶನಿವಾರವೂ ಇವರಿಬ್ಬರ ಮಧ್ಯೆ ಜಗಳ ನಡೆದಿದ್ದು, ಜಗಳ ವಿಕೋಪಕ್ಕೆ ತಿರುಗಿ ತಾಯಿಯ ರುಂಡವನ್ನು ಕತ್ತರಿಸಿದ್ದಾನೆ. ರುಂಡವಿಲ್ಲದ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿ ಪತ್ತೆಗಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಮಿಶ್ರಾ ತಿಳಿಸಿದ್ದಾರೆ.

Leave a Reply

error: Content is protected !!