ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ 5ನೇ ಗ್ಯಾರಂಟಿ ಯುವ ನಿಧಿ ಯೋಜನೆ ಜಾರಿಗೆ ದಿನಗಣನೆ ಆರಂಭವಾಗಿದೆ.
ಡಿಸೆಂಬರ್ 21 ರಿಂದ ಯುವ ನಿಧಿಗೆ ನೋಂದಣಿ ಪ್ರಕ್ರಿಯೆ ಆರಂಭವಾಗಲಿದ್ದು, ಸಂಕ್ರಾಂತಿ ವೇಳೆಗೆ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ.
ಈ ಬಗ್ಗೆ ಮಾತನಾಡಿರುವ ಡಿ.ಕೆ ಶಿವಕುಮಾರ್ ಯುವ ನಿಧಿ ಜಾರಿಗೆ ಬೇಕಾದ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಕೌಶಲ್ಯ ಅಭಿವೃದ್ಧಿ ಸಚಿವರು ಅದಕ್ಕೆ ಬೇಕಾದ ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ ಎಂದರು.
ಈ ಬೆನ್ನಲ್ಲೇ ಕೌಶಲ್ಯಾಭಿವೃದ್ಧಿ ಸಚಿವರೂ ಆಗಿರುವ ಶರಣ ಪ್ರಕಾಶ್ ಪಾಟೀಲ್, ಜನವರಿಯಲ್ಲಿ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಾಗುವುದು. ಯುವಜನತೆಗೆ ಬೆನ್ನೆಲುಬಾಗಲಿರುವ ಈ ಯೋಜನೆಯಿಂದ ಸುಮಾರು 5 ಲಕ್ಷ ಪದವೀಧರರ ಖಾತೆಗೆ ನೇರವಾಗಿ ಹಣ ತಲುಪಲಿದೆ ಅಂದಿದ್ದಾರೆ. ಪದವೀಧರರು ಪದವಿ ಪೂರೈಸಿ 6 ತಿಂಗಳು ನಿರುದ್ಯೋಗಿಗಳಾಗಿದ್ದರೆ ಮಾಸಿಕ 3,000 ರೂ. ಹಾಗೂ ಡಿಪ್ಲೋಮಾ ಪದವೀಧರರಿಗೆ 1,500 ರೂ. ಸಿಗಲಿದೆ ಎಂದು ನುಡಿದರು.
2023ರ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿಗಳನ್ನ ಘೋಷಣೆ ಮಾಡಿತ್ತು. ಅದರಲ್ಲಿ ಯುವ ನಿಧಿ ಯೋಜನೆ ಅತ್ಯಂತ ಪ್ರಮುಖವಾದುದಾಗಿದೆ. ಯುವ ನಿಧಿ ಯೋಜನೆಯನ್ನು 2022-23ರಲ್ಲಿ ತೇರ್ಗಡೆ ಹೊಂದಿದ ವೃತ್ತಿ ಶಿಕ್ಷಣ ಸೇರಿದಂತೆ ಎಲ್ಲಾ ಪದವಿ ಪೂರೈಸಿದ ಯುವಕ ಯುವತಿಯರಿಗೆ ನೀಡಲು ತೀರ್ಮಾನಿಸಲಾಗಿದೆ. ನೋಂದಣಿ ಮಾಡಿಕೊಂಡ ದಿನದಿಂದ 2 ವರ್ಷದ ವರೆಗೆ ಪ್ರತಿ ತಿಂಗಳು 3 ಸಾವಿರ ರೂ., ಡಿಪ್ಲೊಮಾ ಪದವೀಧರರಿಗೆ 1,500 ರೂ. ನೀಡಲಾಗುತ್ತದೆ. ಅಷ್ಟರೊಳಗೆ ಉದ್ಯೋಗ ಪಡೆದವರು ಘೋಷಿಸಿಕೊಳ್ಳಬೇಕು. 24 ತಿಂಗಳ ಒಳಗೆ ಉದ್ಯೋಗ ಸಿಕ್ಕರೆ ಈ ಯೋಜನೆ ರದ್ದಾಗುತ್ತದೆ. ಯುವಕ, ಯುವತಿ ಹಾಗೂ ತೃತೀಯ ಲಿಂಗಿಗಳಿಗೂ ಈ ಯೋಜನೆ ಅನ್ವಯ ಆಗಲಿದೆ.