ಅನೈತಿಕ ಸಂಬಂಧದ ಆರೋಪ ಹೊರಿಸಿ ಮರಕ್ಕೆ ಕಟ್ಟಿ ಹಲ್ಲೆ- ಯುವಕ ಆತ್ಮಹತ್ಯೆ

ಶೇರ್ ಮಾಡಿ

ಮಹಿಳೆಯೊಬ್ಬಳ ಜೊತೆ ಅನೈತಿಕ ಸಂಬಂಧ ಆರೋಪ ಹೊತ್ತು ಹಲ್ಲೆಗೆ ಒಳಗಾದ ಯುವಕ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.

ಯಾದಗಿರಿ ತಾಲೂಕಿನ ಎಸ್. ಹೊಸಳ್ಳಿ ಗ್ರಾಮದ ಚಂದ್ರಶೇಖರ ರೆಡ್ಡಿ (24) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತನ ಮೇಲೆ ಈರಣ್ಣ ಮತ್ತು ಕುಟುಂಬದವರು ಮಂಗಳವಾರ ರಾತ್ರಿ ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ್ದರು. ಹೀಗಾಗಿ ಮರ್ಯಾದೆಗೆ ಹೆದರಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸಾಯುವ ಮುನ್ನ ಡೆತ್ ನೋಟ್ ಬರೆದಿರುವ ಮೃತ ಚಂದ್ರಶೇಖರ ರೆಡ್ಡಿ ಅದರಲ್ಲಿ ಈರಣ್ಣ ಮತ್ತು 8 ಮಂದಿಯ ಹೆಸರು ಸೇರಿಸಿದ್ದಾನೆ. ಇವರೇ ನನ್ನ ಸಾವಿಗೆ ಕಾರಣ ಅಂತಾನೂ ಆರೋಪಿಸಿದ್ದಾನೆ.

ಮೃತ ಚಂದ್ರಶೇಖರ ಅದೇ ಗ್ರಾಮದ ಈರಣ್ಣ ಎಂಬಾತನ ಪತ್ನಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಆರೋಪವಿತ್ತು. ಇದೇ ಕಾರಣಕ್ಕಾಗಿ ಈರಣ್ಣ ಮತ್ತು ಆತನ ಕುಟುಂಬಸ್ಥರು ಮರಕ್ಕೆ ಹಗ್ಗದಿಂದ ಕಟ್ಟಿ ಮನಸೋ ಇಚ್ಛೆ ಥಳಿಸಿದ್ದರು. ಅಲ್ಲದೇ ಯುವಕನ ಕುಟುಂಬಸ್ಥರ ಮೇಲೆಯೂ ಹಲ್ಲೆ ನಡೆದಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ತನ್ನಿಂದಾಗಿ ಹೀಗೆಲ್ಲ ಆಯಿತು. ಮನೆ ಮಂದಿಯೂ ಹಲ್ಲೆಗೆ ಒಳಗಾದರು ಎಂದು ಮಾನಸಿಕವಾಗಿ ಕುಗ್ಗಿದ್ದ ಚಂದ್ರಶೇಖರ ಇಂದು ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಡೆತ್ ನೋಟ್‍ನಲ್ಲಿ ಎಂಟು ಜನರ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಘಟನೆ ಬಳಿಕ ಈರಣ್ಣನ ಕುಟುಂಬಸ್ಥರು ಗ್ರಾಮದಿಂದ ಪರಾರಿಯಾಗಿದ್ದಾರೆ. ಈರಣ್ಣನ ಕುಟುಂಬಸ್ಥರೇ ಯುವಕನನ್ನು ಕೊಲೆ ಮಾಡಿದ್ದಾರೆ ಎಂದ ಯುವಕನ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!