ವಿದ್ಯುತ್ ಕಂಬವನ್ನು ಚರಂಡಿಯೊಳಗೆ ಉಳಿಸಿಕೊಂಡ ಗುತ್ತಿಗೆದಾರ!; ಹಾಸ್ಯಾಸ್ಪದಕ್ಕೆ ಒಳಗಾದ ಗುತ್ತಿಗೆದಾರ

ಶೇರ್ ಮಾಡಿ

ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಯ ಗುತ್ತಿಗೆದಾರ ಸಂಸ್ಥೆಯು 34 ನೆಕ್ಕಿಲಾಡಿಯಲ್ಲಿ ವಿದ್ಯುತ್ ಕಂಬವೊಂದು ಸೇರಿಸಿಕೊಂಡು ಚರಂಡಿಯನ್ನು ನಿರ್ಮಾಣ ಮಾಡಿದ್ದು, ಸಾರ್ವಜನಿಕ ವಲಯದಲ್ಲಿ ಇದು ವ್ಯಾಪಕ ಟೀಕೆ ಹಾಗೂ ಹಾಸ್ಯಾಸ್ಪದಕ್ಕೆ ಒಳಗಾಗಿದೆ.

ಚತುಷ್ಪಥ ಹೆದ್ದಾರಿ ಕಾಮಗಾರಿಯ ನಂತರ ಈಗಿದ್ದ ವಿದ್ಯುತ್ ಕಂಬಗಳು ಸ್ಥಳಾಂತರಗೊಳ್ಳಲಿದ್ದು, ಹೆದ್ದಾರಿಯ ಚರಂಡಿಯನ್ನು ದಾಟಿ ವಿದ್ಯುತ್ ಕಂಬಗಳು ಬರುತ್ತವೆ. 34 ನೆಕ್ಕಿಲಾಡಿ ಹಾಗೂ ಉಪ್ಪಿನಂಗಡಿಯ ಕೆಲ ಭಾಗಗಳಲ್ಲಿ ಈಗಾಗಲೇ ಚತುಷ್ಪಥ ಹೆದ್ದಾರಿಯ ವಿದ್ಯುತ್ ಕಂಬಗಳನ್ನು ಹಾಕಲಾಗಿದೆ. 34 ನೆಕ್ಕಿಲಾಡಿಯಲ್ಲಿಯೂ ಹೀಗೆ ಕಂಬಗಳನ್ನು ಹಾಕಲಾಗಿದ್ದು, ಆ ಬಳಿಕ ಕಾಂಕ್ರೀಟ್ ಚರಂಡಿ ಕಾಮಗಾರಿಯೂ ನಡೆದಿದೆ. ಆದರೆ ಅಲ್ಲಿನ ಸಂತೆಕಟ್ಟೆಯ ಬಳಿ ಮಾತ್ರ ಚರಂಡಿ ಕಾಮಗಾರಿ ನಡೆಸಿಕೊಂಡು ಬರುವಾಗ ಅಲ್ಲಿ ವಿದ್ಯುತ್ ಕಂಬ ಅಡ್ಡ ಬಂದಿದ್ದು, ಆದರೆ ಚತುಷ್ಪಥ ಹೆದ್ದಾರಿ ಗುತ್ತಿಗೆದಾರ ಸಂಸ್ಥೆಯವರು ಅದನ್ನು ತೆರವುಗೊಳಿಸದೇ ಅದನ್ನು ಸೇರಿಸಿಕೊಂಡೇ ಚರಂಡಿ ಕಾಮಗಾರಿ ನಡೆಸಿದ್ದಾರೆ. ಗುತ್ತಿಗೆದಾರ ಸಂಸ್ಥೆಯವರು ಹಾಗೂ ಇದನ್ನು ಗಮನಿಸದ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಗಳ ಈ ಬೇಜವಾಬ್ದಾರಿ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಈ ಬಗ್ಗೆ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ 34 ನೆಕ್ಕಿಲಾಡಿ ಗ್ರಾ.ಪಂ. ಸದಸ್ಯ ಪ್ರಶಾಂತ್ ಎನ್., ವಿದ್ಯುತ್ ಕಂಬ ಹಾಕಿ ಸುಮಾರು ಮೂರು ತಿಂಗಳು ಕಳೆದಿರಬಹುದು. ಆ ಬಳಿಕ ಚರಂಡಿ ಕಾಮಗಾರಿ ನಡೆಸುವಾಗ ಅದರ ನೇರಕ್ಕೆ ವಿದ್ಯುತ್ ಕಂಬವಿರುವುದನ್ನು ಗಮನಿಸಿದ ನಾನು ಅದನ್ನು ಕಾಮಗಾರಿ ಗುತ್ತಿಗೆ ಸಂಸ್ಥೆಯ ಎಂಜಿನಿಯರ್ ಗಳ ಗಮನಕ್ಕೆ ತಂದಿದ್ದೆ. ಆಗ ವಿದ್ಯುತ್ ಕಂಬವನ್ನು ಬಿಟ್ಟು ಚರಂಡಿ ಮಾಡಲಾಗುವುದೆಂದು ಭರವಸೆ ನೀಡಿದ್ದರು. ಆದರೆ ಚರಂಡಿ ನಿರ್ಮಾಣ ಮಾಡುವಾಗ ವಿದ್ಯುತ್ ಕಂಬವನ್ನು ಸೇರಿಸಿಕೊಂಡೇ ಚರಂಡಿಯನ್ನು ನಿರ್ಮಿಸಿದ್ದಾರೆ. ಇದು ಅವರ ನಿರ್ಲಕ್ಷ್ಯತನವನ್ನು ತೋರಿಸುತ್ತದೆ ಎಂದರು.

34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಕಾರ್ಯದರ್ಶಿ ಕಲಂದರ್ ಶಾಫಿ ಮಾತನಾಡಿ, ವಿದ್ಯುತ್ ಕಂಬವನ್ನು ಸೇರಿಸಿಕೊಂಡೇ ಚರಂಡಿ ನಿರ್ಮಾಣ ಮಾಡಿರುವುದರಿಂದ ಚರಂಡಿಯ ಮುಕ್ಕಾಲು ಭಾಗವನ್ನು ಬೃಹದಾಕಾರದ ವಿದ್ಯುತ್ ಕಂಬ ನುಂಗಿದೆ. ಮಳೆಗಾಲದಲ್ಲಿ ಇದರಲ್ಲಿ ಕಸ ಕಡ್ಡಿ ಸಿಲುಕಿ ಚರಂಡಿಯಲ್ಲಿ ನೀರಿನ ಸರಾಗ ಹರಿಯುವಿಕೆಗೆ ತಡೆಯಾದರೆ ಯಾರು ಹೊಣೆ?. ಕಾಮಗಾರಿ ಗುತ್ತಿಗೆ ಸಂಸ್ಥೆಯವರಿಗೆ ಹಾಗೂ ಎಂಜಿನಿಯರ್ ಗಳಿಗೆ ಅಷ್ಟು ಜ್ಞಾನವೂ ಇಲ್ಲವೇ? ಅವರ ನಕ್ಷೆಯ ಪ್ರಕಾರನೇ ಚರಂಡಿ ಎಂದಿದ್ದರೆ, ವಿದ್ಯುತ್ ಕಂಬವನ್ನು ಸ್ಥಳಾಂತರ ಮಾಡಿಸಬೇಕಿತ್ತು. ಆ ಬಳಿಕ ಚರಂಡಿ ನಿರ್ಮಾಣ ಮಾಡಬೇಕಿತ್ತು. ಅದು ಬಿಟ್ಟು ವಹಿಸಿಕೊಟ್ಟ ಕೆಲಸ ಮಾಡಬೇಕೆಂಬ ಅನಿವಾರ್ಯತೆಯಿಂದ ಇವರು ಕಾಮಗಾರಿ ನಡೆಸುತ್ತಿದ್ದಾರೋ? ಅಥವಾ ಜನ ಸಾಮಾನ್ಯರ ಬಗ್ಗೆ, ಕಾಮಗಾರಿಯ ಬಗ್ಗೆ ಕಾಳಜಿ ವಹಿಸಿಕೊಂಡು ಕೆಲಸ ಮಾಡುತ್ತಿದ್ದಾರೋ ತಿಳಿಯದಾಗಿದೆ. ಇಂತಹ ಬೇಜವಾಬ್ದಾರಿ ನಡೆಯನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.

Leave a Reply

error: Content is protected !!