ಭಾರತೀಯ ಪ್ಲಾಂಟೇಶನ್ ಬೆಳೆಗಳ ಸೊಸೈಟಿ ನೀಡುವ ಉತ್ತಮ ಅಡಿಕೆ ಕೃಷಿಕ ಪ್ರಶಸ್ತಿಗೆ ಬೆಳ್ತಂಗಡಿ ತಾಲೂಕಿನ ಬಂದಾರು ಪಂಚಾಯತ್ ವ್ಯಾಪ್ತಿಯ ಮೊಗ್ರು ಗ್ರಾಮದ ಯುವ ಕೃಷಿಕ ದೇವಿಪ್ರಸಾದ್ ಗೌಡ ಕಡಮ್ಮಾಜೆ ಭಾಜನರಾಗಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಅಡಿಕೆ ಕೃಷಿಕನನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರತೀ ವರ್ಷ ನೀಡಲಾಗುತ್ತಿದ್ದು, ಡಿಸೆಂಬರ್ 13ರಂದು ಆಂಧ್ರಪ್ರದೇಶದ ಪೆದವೆಗಿಯಲ್ಲಿರುವ ಭಾರತೀಯ ತಾಳೆ ಸಂಶೋಧನ ಕೇಂದ್ರದಲ್ಲಿ ನಡೆದ ಭಾರತೀಯ ಪ್ಲಾಂಟೇಶನ್ ಬೆಳೆಗಳ ಸೊಸೈಟಿಯ 50ನೇ ವಾರ್ಷಿಕ ಸಭೆಯಲ್ಲಿ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕಡಮ್ಮಾಜೆ ಫಾಮ್ಸ್‌ನಲ್ಲಿ ಅಡಿಕೆಯೊಂದಿಗೆ ಮಿಶ್ರ ಬೆಳೆಯಾಗಿ ಕಾಳುಮೆಣಸು ಮತ್ತು ಬಾಳೆ ಬೆಳೆಯುತ್ತಿರುವ ಇವರು ದನ, ಕೋಳಿ, ಕುರಿ ಮತ್ತು ಹಂದಿ ಸಾಕಣೆ ಮಾಡುತ್ತ ಯುವ ಕೃಷಿಕರಿಗೆ ಪ್ರೇರಣೆಯಾಗಿದ್ದಾರೆ. ಸಂಪೂರ್ಣ ಸಾವಯವ ಕೃಷಿ ಪದ್ಧತಿ ಅವರದು. ಕಾಂಪೋಸ್ಟ್ ಮತ್ತು ಎರೆಗೊಬ್ಬರ ತಯಾರಿಕೆ ಮಾತ್ರವಲ್ಲದೆ ಉಪ್ಪಿನಂಗಡಿ ಪೇಟೆಯ ಹಸಿ ತ್ಯಾಜ್ಯವನ್ನು ಬೇರ್ಪಡಿಸಿ ಕಾಂಪೋಸ್ಟ್ ಮಾಡಿ ಬೆಳೆಗಳಿಗೆ ನೀಡುತ್ತಿದ್ದಾರೆ. 2 ಗೋಬರ್ ಅನಿಲ ಘಟಕಗಳಿದ್ದು, ಗೊಬ್ಬರ ಸ್ವಾವಲಂಬನೆ ಜತೆಗೆ ಇಂಧನ ಸ್ವಾವಲಂಬನೆಯನ್ನೂ ಮಾಡಿಕೊಂಡಿದ್ದಾರೆ.