ಕೊಲ್ಯ ಸಾರಸ್ವತ ಕಾಲನಿ ಜಾಯ್ ಲ್ಯಾಂಡ್ ಶಾಲೆ ಬಳಿ ಬುಧವಾರ ರಾತ್ರಿ ನಡೆದ ವರುಣ್ ಗಟ್ಟಿ(28) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ರವಿರಾಜ್ (40) ಹಾಗೂ ಸೂರಜ್ (28) ಬಂಧಿತ ಆರೋಪಿಗಳು.
ಘಟನೆ ವಿವರ:
ಬುಧವಾರ ರಾತ್ರಿ 10:45ರ ವೇಳೆಗೆ ಜಾಯ್ ಲ್ಯಾಂಡ್ ಆಂಗ್ಲ ಮಾಧ್ಯಮ ಶಾಲೆಯ ಎದುರುಗಡೆಯ ಕಟ್ಟೆಯೊಂದರಲ್ಲಿ ಕುಳಿತಿದ್ದ ಆರೋಪಿಗಳಾದ ಸೂರಜ್ ಮತ್ತು ರವಿರಾಜ್ ಎಂಬವರು ಬಿಯರ್ ಕುಡಿದು ಬಾಟಲಿಯನ್ನು ರಸ್ತೆಗೆ ಎಸೆದಿದ್ದರೆನ್ನಲಾಗಿದೆ. ಇದನ್ನು ಗಮನಿಸಿದ ವರುಣ್ ಮತ್ತು ಆತನ ಸ್ನೇಹಿತ ಅಕ್ಷಯ್ ಶಾಲೆಯ ಮುಂದೆ ಬಿಯರ್ ಬಾಟಲಿ ಯಾಕೆ ಎಸೆಯುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಈ ವಿಚಾರವಾಗಿ ಇತ್ತಂಡಗಳ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ದುಷ್ಕರ್ಮಿಗಳು ವರುಣ್ ಬೆನ್ನಿಗೆ ಹರಿತವಾದ ಆಯುಧದಿಂದ ಇರಿದಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ವರುಣ್ ಮೃತಪಟ್ಟಿದ್ದರು. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಕೊಲ್ಯ ಸರಸ್ವತಿ ಕಾಲನಿ ನಿವಾಸಿ ರವಿರಾಜ್ ಮತ್ತು ಸೂರಜ್ ರನ್ನು ಗುರುವಾರ ವಶಕ್ಕೆ ಪಡೆದಿದ್ದ ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಆರೋಪಿಗಳು ವರುಣ್ ಜೊತೆ ಹಳೇ ವೈಷಮ್ಯವಿದ್ದು, ಇದೇ ದ್ವೇಷದಿಂದ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.