ಕಳವಾದ ಮೊಬೈಲಲ್ಲಿದ್ದ ಪೋನ್‌ ಪೇ ಆ್ಯಪ್ ಬಳಸಿ ಲಕ್ಷಾಂತರ ಹಣ ಲಪಟಾಯಿಸಿದ ಖದೀಮ

ಶೇರ್ ಮಾಡಿ

ಮಂಗಳೂರು: ಪೋನ್ ಕಳವಾದಾಗ ಸಿಮ್ ಬ್ಲಾಕ್ ಮಾಡುವುದರೊಂದಿಗೆ ಫೋನ್ ಅನ್ನೂ ಬ್ಲಾಕ್ ಮಾಡಿಸಬೇಕು ಎಂದು ಹೇಳುವುದು ಇದಕ್ಕೇ. ಇಲ್ಲವಾದಲ್ಲಿ ಅದರಲ್ಲಿ ಇನ್ ಸ್ಟಾಲ್ ಆಗಿರುವ ಪೇಮೆಂಟ್ ಆ್ಯಪ್ ಗಳನ್ನು ಬಳಸಿ ಸೈಬರ್ ಕಳ್ಳರು ಖಾತೆಗಳಿಗೇ ಕನ್ನ ಹಾಕುವ ಸಾಧ್ಯತೆ ದಟ್ಟವಾಗಿರುತ್ತದೆ ಎಂಬುದಕ್ಕೆ ಮಂಗಳೂರಿನಲ್ಲಿ ನಡೆದಿರುವ ಘಟನೆಯೇ ಉದಾಹರಣೆ. ಫೋನ್ ಸಿಕ್ಕಿದ ವ್ಯಕ್ತಿ ಅದರಲ್ಲಿದ್ದ ಫೋನ್ ಪೇ ಆ್ಯನ್ ಆ್ಯಪ್ ಮೂಲಕ ಖಾತೆಗೆ ಕನ್ನ ಹಾಕಿದ್ದಾನೆ.

ಸೈಬರ್ ಕಳ್ಳರ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಧ್ಯೆಯೇ ಮತ್ತೊಂದು ಸೈಬರ್ ವಂಚನೆ ಜಿಲ್ಲೆಯಲ್ಲಿ ನಡೆದಿದೆ. ಆದರೆ ಇದು ಕರೆಗೆ ಸ್ಪಂದಿಸಿ ಆದ ಸಮಸ್ಯೆಯಲ್ಲ, ಮೊಬೈಲ್ ಕಳೆದುಕೊಂಡದ್ದರಿಂದ ಆಗ ಗಂಡಾಂತರ. ಹೌದು ವ್ಯಕ್ತಿಯೊಬ್ಬರ ಕಳೆದು ಹೋಗಿದ್ದ ಮೊಬೈಲ್‌ ಅನ್ನು ಬಳಸಿ ಖದೀಮನೊಬ್ಬ ಪೋನ್‌ ಪೇ ಮೂಲಕ ಹಣ ವರ್ಗಾಯಿಸಿ ವಂಚಿಸಿರುವ ಘಟನೆ ಜಿಲ್ಲೆಯಿಂದ ವರದಿಯಾಗಿದೆ.

ದೂರುದಾರರು ಡಿ.3ರಂದು ಕಣ್ಣೂರಿಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಎರಡು ಮೊಬೈಲ್‌ ಹ್ಯಾಂಡ್‌ಸೆಟ್‌ಗಳನ್ನು ಕಳೆದುಕೊಂಡಿದ್ದರು. ಈ ಬಗ್ಗೆ ಮರುದಿನ ಕಂಕನಾಡಿ ಠಾಣೆಗೆ ದೂರು ನೀಡಿದ್ದರು.

ಹಿಂದಿಯಲ್ಲಿ ಮಾತನಾಡುತ್ತಿದ್ದ ವಂಚಕ
ದೂರು ನೀಡಿದ ಎರಡು ದಿನಗಳ ಅನಂತರ ಒಂದು ಮೊಬೈಲ್‌ನ ಸಿಮ್‌ ಆನ್‌ ಆಗಿತ್ತು. ಅದಕ್ಕೆ ಸಂಬಂಧಿಕರ ಪೋನ್‌ ಮೂಲಕ ಸಂಪರ್ಕಿಸಿದಾಗ ಕರೆ ಸ್ವೀಕರಿಸಿದ ವ್ಯಕ್ತಿ ಹಿಂದಿ ಭಾಷೆಯಲ್ಲಿ ಮಾತನಾಡಿ ಮಂಗಳೂರಿನ ಪಡೀಲ್‌ನಲ್ಲಿ ಮೊಬೈಲ್‌ ಪೋನ್‌ ಸಿಕ್ಕಿದ್ದು ತಾನು ಕಡಬದಲ್ಲಿದ್ದೇನೆ ಎಂದು ತಿಳಿಸಿದ್ದಾನೆ. ಅಲ್ಲದೆ ನಾಲ್ಕು ದಿನ ಕಳೆದ ಮಂಗಳೂರಿಗೆ ಬಂದು ಮೊಬೈಲ್‌ ತಂದುಕೊಡುವುದಾಗಿಯೂ ಹೇಳಿದ್ದ, ಆದರೆ ಆತ ತಂದುಕೊಟ್ಟಿಲ್ಲ.

ಹಾಗಾಗಿ ದೂರುದಾರರು ಡಿಸೆಂಬರ್ 12ರಂದು ತನ್ನ ಹಳೆಯ ನಂಬರ್‌ನ ಮೊಬೈಲ್‌ ಸಿಮ್‌ನ್ನು ಬ್ಲಾಕ್‌ ಮಾಡಿ ಹೊಸ ಸಿಮ್‌ ಖರೀದಿಸಿದ್ದರು. ಆರೋಪಿ ಡಿಸೆಂಬರ್ 12ರಂದು ದೂರುದಾರರ ಮೊಬೈಲ್‌ನಲ್ಲಿದ್ದ ಪೋನ್‌ ಪೇ ಮೂಲಕ 1.82 ಲಕ್ಷ ರೂಪಾಯಿಗಳನ್ನು ಬೇರೆ ಬೇರೆ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿರುವುದು ಗೊತ್ತಾಗಿದೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಲ್ಲಿ ಇಬ್ಬರು ಮೊಬೈಲ್‌ ಬಂಧನ

ನಗರದ ದಕ್ಕೆಯಲ್ಲಿ ಮೊಬೈಲ್‌ಗಳನ್ನು ಕಳವು ಮಾಡುತ್ತಿದ್ದ ಇಬ್ಬರನ್ನು ಮಂಗಳೂರಿನ ದಕ್ಷಿಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಕುಣ್ಣನ್‌ ಆಲಿಯಾಸ್‌ ಗುಣ(23) ಮತ್ತು ರಾಮಕಿ(25) ಬಂಧಿತರು. ಶುಕ್ರವಾರ ಗೂಡ್ಸ್‌ಶೆಡ್‌ ಬಳಿ ಪೊಲೀಸ್‌ ಉಪನಿರೀಕ್ಷಕ ಮನೋಹರ್‌ ಪ್ರಸಾದ್‌ ಮತ್ತು ಸಿಬ್ಬಂದಿ ರೌಂಡ್ಸ್‌ ಕರ್ತವ್ಯದಲ್ಲಿದ್ದಾಗ ಅನುಮಾನಾಸ್ಪದವಾಗಿ ವರ್ತಿಸಿದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದು, ಆರೋಪಿಗಳು ಪ್ಲಾಸ್ಟಿಕ್‌ ಕವರ್‌ನಲ್ಲಿಇಟ್ಟುಕೊಂಡಿದ್ದ ಒಟ್ಟು 5 ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ದಕ್ಕೆ ಪರಿಸರದಲ್ಲಿ ಕೆಲಸ ಮಾಡಿಕೊಂಡಿದ್ದು ಅಲ್ಲಿಯೇ ಮೊಬೈಲ್‌ಗಳನ್ನು ಕಳವು ಮಾಡಿರುವ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಡುಪಿಯಲ್ಲಿ ಮೊಬೈಲ್ ಕಳ್ಳನ ಬಂಧನ

ಮಣಿಪಾಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕಳೆದ ಜನವರಿಯಿಂದ ಕಳವಾದ ಮೊಬೈಲ್‌ ಫೋನ್‌ಗಳನ್ನು ಸೆಂಟ್ರಲ್‌ ಇಕ್ಯುಪ್‌ಮೆಂಟ್‌ ಐಡೆಂಟಿಟಿ ರಿಜಿಸ್ಟಾರ್‌ (ಸಿಇಐಆರ್‌ ಪೋರ್ಟಲ್‌) ಮೂಲಕ ಪೊಲೀಸರು ಪತ್ತೆ ಹಚ್ಚಿದ್ದು, ಸುಮಾರು 3.5 ಲಕ್ಷ ರೂ. ಮೌಲ್ಯದ ಒಟ್ಟು 18 ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಮೊಬೈಲ್‌ಗಳನ್ನು ಅಪರಿಚಿತ ವ್ಯಕ್ತಿ ಉಪಯೋಗಿಸುತ್ತಿರುವ ಬಗ್ಗೆ ಪೋರ್ಟಲ್‌ನಲ್ಲಿ ಕಂಡು ಬಂದಿದ್ದು, ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಆರೂರು ಗ್ರಾಮದ ದೀಕ್ಷಿತ್‌ (27) ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈತನಿಂದ ಮಣಿಪಾಲ ಠಾಣಾ ವ್ಯಾಪ್ತಿಯ ಬೇರೆ ಬೇರೆ ಕಡೆಗಳಲ್ಲಿ ಕಳವು ಮಾಡಿದ ಒಟ್ಟು 6 ಮೊಬೈಲ್‌ ಫೋನ್‌ಗಳನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ.

ಮಣಿಪಾಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪೋರ್ಟಲ್‌ ಮೂಲಕ ಪತ್ತೆ ಹಚ್ಚಿ ವಶಪಡಿಸಿಕೊಂಡ ಒಟ್ಟು 18 ಮೊಬೈಲ್‌ ಫೋನ್‌ಗಳನ್ನು ಉಡುಪಿ ಜಿಲ್ಲಾಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಎಸ್‌ ಟಿ ಸಿದ್ದಲಿಂಗಪ್ಪ ಶನಿವಾರ ಮಣಿಪಾಲ ಠಾಣೆಯಲ್ಲಿ ವಾರೀಸುದಾರರಿಗೆ ಹಸ್ತಾಂತರಿಸಿದರು.

Leave a Reply

error: Content is protected !!