ಅಂಗನವಾಡಿ ಸಿಬ್ಬಂದಿ ಎಡವಟ್ಟು: ಲಸಿಕೆ ಓವರ್ ಡೋಸ್‌ನಿಂದ ಮಗು ಸಾವು, ಪೋಷಕರ ಆರೋಪ

ಶೇರ್ ಮಾಡಿ

ಅಂಗನವಾಡಿ ಕೇಂದ್ರದ ಸಿಬ್ಬಂದಿ ಎಡವಟ್ಟಿನಿಂದ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಹುಬ್ಬಳ್ಳಿಯ ಉಣಕಲ್​ನ ನಿವಾಸಿ ಜಟ್ಟೆಪ್ಪರ ಮೊಮ್ಮಗ ಧ್ರುವ (2 ವರ್ಷ) ಮೃತ ಮಗು. ತಾತ ಹಾಗೂ ಅಜ್ಜಿಯ ಮನೆಯಲ್ಲಿ ಧ್ರುವ ವಾಸವಿದ್ದ. ಒಂದೇ ದಿನ 5 ಲಸಿಕೆ ಹಾಕಿದ್ದ ಪರಿಣಾಮ ಓವರ್ ಡೋಸ್‌ನಿಂದ ಮಗು ಮೃತಪಟ್ಟಿದೆ ಎಂದು ಅಂಗನವಾಡಿ ಕೇಂದ್ರದ ಸಿಬ್ಬಂದಿ ವಿರುದ್ಧ ಆರೋಪಿಸಲಾಗಿದೆ.

ನಿನ್ನೆ ಹುಬ್ಬಳ್ಳಿಯ ಸಾಯಿನಗರದ ಅಂಗನವಾಡಿ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆ ಲಸಿಕೆ ಹಾಕಿದ್ದರು. ಲಸಿಕೆ ಹಾಕಿದ ಬಳಿಕ ತೀವ್ರ ಜ್ವರ, ಹೊಟ್ಟೆ ನೋವಿನಿಂದ ಮಗು ಬಳಲಿದ್ದು, ಕೂಡಲೇ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ಮಗುವಿನ ಅಜ್ಜಿ ದಾಖಲಿಸಿದ್ದರು. ಕಿಮ್ಸ್​ಗೆ ದಾಖಲಾಗುತ್ತಿದ್ದಂತೆಯೇ ಮಗು ಸಾವನ್ನಪ್ಪಿದೆ. ಆಸ್ಪತ್ರೆ ಆವರಣದಲ್ಲಿ ಮಗುವಿನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಹುಬ್ಬಳ್ಳಿಯ ಕಿಮ್ಸ್ ವೈದ್ಯಕೀಯ ಅಧೀಕ್ಷಕ ಅರುಣ್ ಕುಮಾರ್​ ಪ್ರತಿಕ್ರಿಯೆ ನೀಡಿದ್ದು, ಇವತ್ತು 3.25 ಕ್ಕೆ ಮಗು ಕಿಮ್ಸ್​ನಲ್ಲಿ ದಾಖಲಾಗಿತ್ತು. ಮಗು ನಮ್ಮ‌ಲ್ಲಿ ಬಂದಾಗ ಮೃತವಾಗಿತ್ತು. ಮಗುವಿನ ಉಸಿರಾಟ ಇರಲಿಲ್ಲ. ಮಗುವಿಗೆ ತಾಜ ನಗರದಲ್ಲಿ ಲಸಿಕೆ ಹಾಕಿಸಿದ್ದಾರೆ. 16 ರಿಂದ 24 ತಿಂಗಳ ಮಗುವಿಗೆ ಲಸಿಕೆ ಕೊಡಬೇಕು. ಅದೇ ರೀತಿ ಅಂಗನವಾಡಿಯಲ್ಲಿ ಲಸಿಕೆ ಹಾಕಿದ್ದಾರೆ. ಅಕಸ್ಮಾತ್ ಮಗುವಿಗೆ ಲಸಿಕೆ ರಿಯಾಕ್ಷನ್‌ ಆಗಿದ್ದರೆ ನಿನ್ನೆಯೇ ಆಗಬೇಕಿತ್ತು. ಆದರೆ ಲಸಿಕೆ ರಿಯಾಕ್ಟ್‌ ಆಗಿರುವ ತರಹ ಕಾಣುತ್ತಿಲ್ಲ ಎಂದಿದ್ದಾರೆ.

ಇಂದು ಮಧ್ಯಾಹ್ನ ಊಟ ಮಾಡಿದ ಬಳಿಕ ಮಗು ಕುಸಿದುಬಿದ್ದಿತ್ತು. ಮೊದಲು ಖಾಸಗಿ ಆಸ್ಪತ್ರೆಗೆ ಹೋಗಿದ್ದರು, ಅಲ್ಲಿ ಆಕ್ಸಿಜನ್‌ ಇರಲಿಲ್ಲ. ನಮ್ಮಲ್ಲಿ ಬರುವ ಮುನ್ನ ಮಗು ಸಾವನ್ನಪ್ಪಿತ್ತು. ಮಗು ಸಾವಿಗೆ ನಿಖರ ಕಾರಣ ತಿಳಿತಿಲ್ಲ. ಮರೋಣತ್ತರ ಪರೀಕ್ಷೆ ಆದ ಬಳಿಕ ನಿಜವಾದ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ.

Leave a Reply

error: Content is protected !!