ಹೊಸವರ್ಷಕ್ಕೆ ಕಾಲಿಡಲು ಕೇವಲ 3 ದಿನಗಳಷ್ಟೇ ಬಾಕಿ ಉಳಿದಿವೆ. ಈ ಹೊತ್ತಲ್ಲೇ ನರೇಂದ್ರ ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿತಗೊಳಿಸಲು ನಿರ್ಧರಿಸಿದ್ದು, ಜನವರಿಗೂ ಮೊದಲೇ ಪೆಟ್ರೋಲ್ ಬೆಲೆಯಲ್ಲಿ ಪ್ರತೀ ಲೀಟರ್‌ಗೆ 10 ರೂ. ಕಡಿತಗೊಳಿಸುವ ಸಾಧ್ಯತೆಯಿದೆ.
ವರದಿಗಳ ಪ್ರಕಾರ ಪೆಟ್ರೋಲಿಯಂ ಸಚಿವಾಲಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 8 ರೂ. ನಿಂದ 10 ರೂ.ವರೆಗೆ ಕಡಿತವನ್ನು ಒಳಗೊಂಡ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದು, ಇದಕ್ಕೆ ಪ್ರಧಾನಿ ಮೋದಿಯ ಅನುಮೋದನೆ ಸಿಗಬೇಕಿದೆ.
2023-24ರ ಹಣಕಾಸು ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಕೇವಲ 2 ತಿಂಗಳು ಹೊರತುಪಡಿಸಿ ಪ್ರತಿ ಬ್ಯಾರೆಲ್‌ಗೆ ಸರಾಸರಿ 77.14 ಡಾಲರ್ (ಸುಮಾರು 6,415.71 ರೂ.) ಇತ್ತು. ಇನ್ನು ಸೆಪ್ಟೆಂಬರ್‌ನಲ್ಲಿ 93.54 ಡಾಲರ್ (7,779.69 ರೂ.) ಹಾಗೂ ಅಕ್ಟೋಬರ್‌ನಲ್ಲಿ 90.08 ಡಾಲರ್‌ನಷ್ಟು (7,491.92 ರೂ.) ಏರಿಕೆಯಾಗಿದೆ. 2022-23ರ ಹಣಕಾಸು ವರ್ಷದಲ್ಲಿ ಸರಾಸರಿ ಕಚ್ಚಾತೈಲದ ಬೆಲೆ ಬ್ಯಾರೆಲ್‌ಗೆ 93.15 ಡಾಲರ್ (7,747.25 ರೂ.) ಆಗಿತ್ತು.
2022ರ ಏಪ್ರಿಲ್‌ನಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿರುವ ಜೊತೆಗೆ ದರಗಳು ಬದಲಾಗದೇ ಇರುವುದರಿಂದ ಪ್ರಸಕ್ತ ಹಣಕಾಸು ಅವಧಿಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆ ಇದ್ದ ಕಾರಣ ಇಂಡಿಯನ್ ಆಯಿಲ್ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ತೈಲ ಮಾರುಕಟ್ಟೆ ಕಂಪನಿಗಳಿಗೆ ದೊಡ್ಡ ಲಾಭವನ್ನು ನೀಡಿವೆ. ಈ ವರ್ಷದ ಮೊದಲ ಆರು ತಿಂಗಳಲ್ಲಿ ಈ 3 ಕಂಪನಿಗಳು ಒಟ್ಟು 58,198 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.