ಸದಾನಂದ ಗೌಡ ಮರು ಸ್ಪರ್ಧೆ ಒತ್ತಾಯದ ಹಿಂದೆ ಇದೆ ಬಿಜೆಪಿಯ ಮತ್ತೊಂದು ಲೆಕ್ಕಾಚಾರ!

ಶೇರ್ ಮಾಡಿ

ಇತ್ತೀಚೆಗಷ್ಟೇ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದ ಬಿಜೆಪಿ ಸಂಸದ ಸದಾನಂದ ಗೌಡ ಅವರು ಇದೀಗ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹಿರಿಯ ನಾಯಕರಿಂದ ಒತ್ತಡ ಹೆಚ್ಚಾಗುತ್ತಿದೆ ಎಂದು ಹೇಳಿರುವುದು ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ. ಸದಾನಂದ ಗೌಡರ ಈ ಹೇಳಿಕೆಯ ಹಿಂದೆ ಬಿಜೆಪಿ (BJP) ನಾಯಕರ ಲೆಕ್ಕಾಚಾರವಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸದಾನಂದ ಗೌಡರು, ಬೆಂಗಳೂರು ಉತ್ತರ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧೆಗೆ ಒತ್ತಡ ಹೆಚ್ಚಾಗಿದೆ. ನಮ್ಮ ಹಿರಿಯ ನಾಯಕರು ಮನೆಗೆ ಬಂದು ಸ್ಪರ್ಧೆ ಮಾಡಿ ಎಂದು ಮನವಿ ಮಾಡಿದ್ದಾರೆ ಎಂದು ಹೇಳಿದ್ದರು.

ಅವರ ಹೇಳಿಕೆಯ ಹಿಂದೆ ಬಿಜೆಪಿ ನಾಯಕರ ಲೆಕ್ಕಾಚಾರವಿದೆ. ನೂತನವಾಗಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿವೈ ವಿಜಯೇಂದ್ರ ಅವರ ತೀರ್ಮಾನಗಳೆಲ್ಲವನ್ನೂ ಒಪ್ಪಿಕೊಳ್ಳಲು ಸಿದ್ಧ ಇಲ್ಲದ ಬಿಜೆಪಿ ನಾಯಕರೇ ಈ ತಂತ್ರ ಹೆಣೆದಿದ್ದಾರೆ ಎನ್ನಲಾಗುತ್ತಿದೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಕಾರಣಕ್ಕಾಗಿ ವಿಜಯೇಂದ್ರ ಅವರ ಕೆಲವು ನಿರ್ಧಾರಗಳು ಒಪ್ಪಿಗೆಯಾಗದಿದ್ದರೂ ವಿರೋಧಿಸಲಾಗದ ಸ್ಥಿತಿ ಪಕ್ಷದ ಹಲವು ನಾಯಕರಲ್ಲಿದೆ. ಇದಕ್ಕಾಗಿ ಕೆಲವು ನಾಯಕರು ಸದಾನಂದ ಗೌಡರನ್ನು ಪರೋಕ್ಷವಾಗಿ ಮುಂದೆ ಬಿಟ್ಟಿದ್ದಾರೆ ಎನ್ನಲಾಗಿದೆ. ಬುಧವಾರ ಸದಾನಂದ ಗೌಡ ಅವರನ್ನು ಭೇಟಿಯಾಗುವುದಕ್ಕೂ ಮುನ್ನ ಮೂವರು ನಾಯಕರು ಮೂರು ಗಂಟೆಗಳ ಕಾಲ ಮಾತುಕತೆ ನಡೆಸಿರುವುದು ಇದಕ್ಕೆ ಪುಷ್ಟಿ ನೀಡಿದೆ.

ವಿಪಕ್ಷ ನಾಯಕ ಆರ್ ಅಶೋಕ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ‌ ಮತ್ತು ಶಾಸಕ ಅಶ್ವಥ್ ನಾರಾಯಣ ಜತೆಗೂಡಿ ಸುಮಾರು ಮೂರು ತಾಸು ಮಾತುಕತೆ ನಡೆಸಿದ್ದರು. ಆ ನಂತರ ಡಿವಿ ಸದಾನಂದ ಗೌಡರ ನಿವಾಸಕ್ಕೆ ತೆರಳಿ ಮರು ಸ್ಪರ್ಧೆಯ ಬಗ್ಗೆ ಒತ್ತಾಯ ಮಾಡಿದ್ದರು. ಮರು ಸ್ಪರ್ಧೆಯ ಮೂಲಕ ಸದಾನಂದ ಗೌಡರನ್ನು ಮುನ್ನೆಲೆಯಲ್ಲಿರಿಸುವ ಪ್ರಯತ್ನ ಈ ನಾಯಕರದ್ದು ಎಂದು ಹೇಳಲಾಗುತ್ತಿದೆ.

ಈ ಎಲ್ಲ ಬೆಳವಣಿಗೆಗಳ ಬಳಿಕ ಸದಾನಂದ ಗೌಡ ಪತ್ರಿಕಾಗೋಷ್ಠಿ ನಡೆಸಿ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು.

ನವೆಂಬರ್ 8ರಂದು ಹಾಸನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಸದಾನಂದ ಗೌಡರು, ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಡಿವಿ ಸದಾನಂದ ಗೌಡರಿಗೆ ಬಿಜೆಪಿ ಅವರಿಗೆ ಟಿಕೆಟ್ ನೀಡುವುದಿಲ್ಲ ಎಂಬ ವದಂತಿಗಳ ಬೆನ್ನಲ್ಲೇ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದರು. ಆದರೆ ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅವರು, ಮರು ಸ್ಪರ್ಧೆಯ ಇಂಗಿತ ವ್ಯಕ್ತಪಡಿಸಿದ್ದಾರೆ.

Leave a Reply

error: Content is protected !!