ಖ್ಯಾತ ಜನಪದ ವಿದ್ವಾಂಸ, ಹಿರಿಯ ಸಾಹಿತಿ ಅಮೃತ ಸೋಮೇಶ್ವರ್ ನಿಧನ

ಶೇರ್ ಮಾಡಿ

ಕರಾವಳಿ ತೀರದ ಯಕ್ಷಗಾನ ಪ್ರಸಂಗ ಕರ್ತೃ, ಸಂಶೋಧಕ, ಅನುವಾದಕ, ವಿಮರ್ಶಕ, ಜಾನಪದ ತಜ್ಞ, ಕವಿ, ಕಥೆಗಾರ ಅಮೃತ ಸೋಮೇಶ್ವರ ಅವರು ಇಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಅವರಿಗೆ 89 ವರ್ಷ ವಯಸ್ಸಾಗಿತ್ತು

ದಕ್ಷಿಣ ಕನ್ನಡ ಜಿಲ್ಲೆಯ ಕೋಟೆಕಾರು ಸಮೀಪದ ಅಡ್ಯ ಎಂಬಲ್ಲಿ 1935 ಸೆಪ್ಟಂಬರ್ 27 ರಂದು ಜನಿಸಿದ ಅವರು. ಪ್ರಾರಂಭಿಕ ಶಿಕ್ಷಣ ಕೋಟೆಕಾರಿನ ಸ್ಟೆಲ್ಲಾ ಮೇರಿ ಕಾನ್ವೆಂಟ್‌ನಲ್ಲಿ ಮುಗಿಸಿದ ಅವರು ಪ್ರೌಢ ಶಿಕ್ಷಣವನ್ನ ಆನಂದಾಶ್ರಮದಲ್ಲಿ ಮಾಡಿದ್ದಾರೆ. ಆನಂತರ ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜಿನಲ್ಲಿ ಪದವಿ ಪಡೆದು, ಮದರಾಸು ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ತಾವು ಓದಿದ ಅಲೋಷಿಯಸ್ ಕಾಲೇಜಿನಲ್ಲಿಯೇ ಅಧ್ಯಾಪಕರಾಗಿ ಕೆಲಸ ಆರಂಭಿಸಿದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಎಂ.ಎ.ಪದವಿ ಪಡೆದ ನಂತರ ಪುತ್ತೂರಿನ ಸೇಂಟ್ ಫಿಲೋಮಿನ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನಂತರ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ, 1993ರಲ್ಲಿ ನಿವೃತ್ತಿ ಹೊಂದಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯದ ಯಕ್ಷಗಾನ ಮಾಹಿತಿ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿದರು. ಯಕ್ಷಗಾನದಲ್ಲಿ ಪ್ರಸಂಗ ಕರ್ತೃವಿಗೆ ಸ್ವಾತಂತ್ರ್ಯ ಕಡಿಮೆಯೆ. ಆದರೂ ಕಲೆಯ ಮೂಲಕ ವೈಚಾರಿಕತೆಯನ್ನೂ ಪ್ರತಿಪಾದಿಸಿ ಯಕ್ಷಗಾನ ಪ್ರಸಂಗಗಳಿಗೆ ಹೊಸ ಆಯಾಮ ನೀಡಿದರು.

ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದ ಬಗ್ಗೆ ಒಲವು ಬೆಳೆದಿದ್ದು ಕಥೆ , ಕವನಗಳ ರಚನೆಗೆ ತೊಡಗಿಸಿಕೊಂಡು ಯಕ್ಷಗಾನ ಪ್ರಸಂಗವೊಂದನ್ನೂ ರಚಿಸಿದ್ದರು. ಅಮರ ಶಿಲ್ಪಿ ವೀರ ಕಲ್ಕುಡ, ಘೋರ ಮಾರಕ, ಸಹಸ್ರ ಕವಚ ಮೋಕ್ಷ, ಕಾಯಕಲ್ಪ, ಅಮರ ವಾಹಿನಿ, ತ್ರಿಪುರ ಮಥನ, ಆದಿಕವಿ ವಾಲ್ಮೀಕಿ, ಚಾಲುಕ್ಯ ಚಕ್ರೇಶ್ವರ ಮುಂತಾದ ಮೂವತ್ತಕ್ಕೂ ಹೆಚ್ಚು ಕೃತಿ ರಚಿಸಿದ್ದರು.

ಕನ್ನಡ ಸಂಘ, ಯಕ್ಷಗಾನ ಸಂಘ ಇಂತಹ ಕೂಟಗಳನ್ನು ಆರಂಭಿಸಿ ತುಳು ಭಾಷೆಯ ಬೆಳವಣಿಗೆಗಾಗಿ ಶ್ರಮಿಸಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದ್ದ ಇವರು ತುಳುನಾಡಿನ ಸಂಸ್ಕ್ರತಿ ಮತ್ತು ಕಲೆಯ ಬಗೆಗೆ ವಿಶೇಷ ಒಲವುಳ್ಳವರು.

Leave a Reply

error: Content is protected !!