ಬೆಳ್ತಂಗಡಿ ತಾಲೂಕಿನ ಮೂಲಕ ಹಾದು ಹೋಗುವ ಹೆದ್ದಾರಿ ರಸ್ತೆ ಅಭಿವೃದ್ಧಿಗೆ ಕೇಂದ್ರ ಸರಕಾರದಿಂದ ಅನುಮೋದನೆ ದೊರಕಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ, ಸೌತಡ್ಕ ಸೇರಿದಂತೆ ಇಲ್ಲಿಯ ಪ್ರೇಕ್ಷಣೀಯ ಸ್ಥಳಗಳಿಗೆ ಬರುವ ಪ್ರವಾಸಿಗರಿಗೆ ಹಾಗೂ ಈ ರಸ್ತೆಗಳ ಮೂಲಕ ಇತರ ಕಡೆಗಳಿಗೆ ಸಂಚರಿಸುವ ವಾಹನಸವಾರರಿಗೆ ಭಾರಿ ಅನುಕೂಲವಾಗಲಿದೆ.
ಬೆಂಗಳೂರು,ಸುಬ್ರಮಣ್ಯ ಹಾಗೂ ಇತರಡೆಗಳಿಂದ ಉಜಿರೆ- ಧರ್ಮಸ್ಥಳಕ್ಕೆ ಬರುವ ರಸ್ತೆ ಪ್ರಸ್ತುತ ವಾಹನ ಸವಾರರಿಗೆ ಸವಾಲಾಗಿದೆ. ಅಗಲ ಕಿರಿದಾಗಿದ್ದು ಅಲ್ಲಲ್ಲಿ ಹೊಂಡ-ಗುಂಡಿಗಳು, ಕಿರು ಸೇತುವೆಗಳು, ರಸ್ತೆಗೂ ರಸ್ತೆ ಬದಿಗೂ ಹಲವು ಅಡಿ ಅಂಣರ ಇರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಅತ್ಯಂತ ಅಪಾಯಕಾರಿ, ತಕ್ಷಣಕ್ಕೆ ಗಮನಕ್ಕೆ ಬರದ ತಿರುವುಗಳ ಮೂಲಕ ಇಲ್ಲಿ ವಾಹನ ಓಡಿಸುವುದೆಂದರೆ ಅದೊಂದು ಸಾಹಸವೇ ಸರಿ.ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರಮುಖ ಸಂಪರ್ಕ ರಸ್ತೆಗಳಲ್ಲಿ ಇದು ಒಂದು. ಅಲ್ಲದೆ ಇಲ್ಲಿನ ಗ್ರಾಮೀಣ ಭಾಗಗಳ ಜನರಿಗೂ ಈ ರಸ್ತೆ ಮುಖ್ಯ ರಸ್ತೆಯಾಗಿದೆ. ಕೆಲವೊಂದು ಕಿರು ಸೇತುವೆ, ತಡೆಬೇಲಿ ಇಲ್ಲದ ಕಂದಕ ಜಾಗಗಳು ಅಪಘಾತಗಳಿಗೂ ಕಾರಣವಾಗುತ್ತಿದೆ. ಈ ರಸ್ತೆ ಅಭಿವೃದ್ಧಿಗೆ ಕೇಂದ್ರದಿಂದ 613 ಕೋಟಿ ರೂಗಿಂತ ಅಧಿಕ ಮೊತ್ತದ ಅನುದಾನ ಮಂಜೂರು ಗೊಂಡಿದ್ದು, 28.5ಕಿಮೀ ರಸ್ತೆ ಅಭಿವೃದ್ಧಿ ಹೊಂದಲಿದೆ
ಪೆರಿಯಶಾಂತಿ ಸಂಪರ್ಕ ರಸ್ತೆಗಳು ಅಗಲಗೊಳ್ಳುವುದರಿಂದ ಈಗಿರುವ ಪೇಟೆ ಪ್ರದೇಶಗಳ ಚಿತ್ರಣ ಸಂಪೂರ್ಣ ಬದಲಾಗಲಿದೆ. ಪ್ರಮುಖ ಪೇಟೆಗಳ ಅವ್ಯವಸ್ಥಿತ ಪಾರ್ಕಿಂಗ್ ಗೂ ಕಡಿವಾಣ ಬೀಳಲಿದೆ. ಹಲವಡೆ ಸರ್ವಿಸ್ ರಸ್ತೆಯು ನಿರ್ಮಾಣಗೊಳ್ಳುವುದು ಅನುಕೂಲ ನೀಡಲಿದ್ದು, ಪೇಟೆಗಳ ವ್ಯಾಪಾರ ವ್ಯವಹಾರಗಳು ಬದಲಾವಣೆಯಾಗುವ ಸಾಧ್ಯತೆ ಇದೆ. ಹೆದ್ದಾರಿಗಳ ಅಭಿವೃದ್ಧಿಗೆ ಪ್ರಾಥಮಿಕ ಹಂತದ ಸಮೀಕ್ಷೆಗಳು ನಡೆದಿದ್ದು, ಇನ್ನಷ್ಟು ಹೆಚ್ಚಿನ ಸಮೀಕ್ಷೆಗಳು ಸದ್ಯವೇ ನಡೆಯಲಿವೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.