ಬ್ರೇಕ್ ಫೇಲ್ಯೂರ್ ಆಗಿ ಸಿಮೆಂಟ್ ಬಲ್ಕರ್ ಲಾರಿಯೊಂದು ರೈಲ್ವೆ ಹಳಿ ಮೇಲೆ ಅಡ್ಡಲಾಗಿ ನಿಂತ ಘಟನೆ ಚಿಕ್ಕಬಳ್ಳಾಪುರ ನಗರ ಹೊರವಲಯದ ಬಿಬಿ ರಸ್ತೆಯ ಅಪ್ಪಾಲು ಪೆಟ್ರೋಲ್ ಬಂಕ್ ಹಿಂಭಾಗ ನಡೆದಿದೆ.
ಬೆಂಗಳೂರು ಕಡೆಯಿಂದ ಚಿಕ್ಕಬಳ್ಳಾಪುರದ ಕಡೆಗೆ ಬರುತ್ತಿದ್ದ ಲಾರಿ ಇಳಿಜಾರಿನಲ್ಲಿ ಬ್ರೇಕ್ ಫೇಲ್ಯೂರ್ ಆಗಿದ್ದು, ಚಾಲಕ ರವಿ ಕೂಡಲೇ ಎಡಬದಿಗೆ ಎಳೆದುಕೊಂಡಿದ್ದಾರೆ. ಇದರಿಂದ ಲಾರಿ ಪೆಟ್ರೋಲ್ ಬಂಕ್ ಹಾಗೂ ಟಾಟಾ ಶೋ ರೂಂ ಪಕ್ಕದ ಖಾಲಿ ಜಾಗದಲ್ಲಿ ನುಗ್ಗಿ ರೈಲ್ವೆ ಹಳಿ ಮೇಲೆ ನಿಂತಿದೆ. ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಹೊರಡಲು ಸಜ್ಜಾಗಿ ನಿಂತಿದ್ದ ಪ್ಯಾಸೆಂಜರ್ ರೈಲು ಇನ್ನೇನು ಬಿಡಬೇಕು ಅನ್ನುವಷ್ಟರಲ್ಲಿ ಈ ಘಟನೆ ನಡೆದಿದೆ.
ಅದೃಷ್ಟವಶಾತ್ ಕೂಡಲೇ ವಿಷಯ ಮುಟ್ಟಿಸಿ ರೈಲು ಸಂಚಾರ ನಿಲ್ಲಿಸಲಾಗಿದೆ. ಇನ್ನೂ ಘಟನೆಯಿಂದ 1 ಗಂಟೆಗೆ ಹಾಗೂ 1:40ಕ್ಕೆ ತೆರಳಬೇಕಿದ್ದ ಎರಡು ರೈಲುಗಳ ಸಂಚಾರ ಗಂಟೆಗಟ್ಟಲೇ ಸ್ಥಗಿತವಾಗಿತ್ತು. ಇನ್ನೂ ಒಂದೂವರೆ ಗಂಟೆ ನಂತರ ಕ್ರೇನ್ ಮೂಲಕ ಲಾರಿ ಪಕ್ಕಕ್ಕೆ ಸರಿಸಿ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಒಂದೆರೆಡು ನಿಮಿಷ ತಡವಾಗಿದ್ರೂ ರೈಲು ಸಂಚಾರ ಆರಂಭಿಸಿದ್ದರೂ ಲಾರಿಗೆ ಡಿಕ್ಕಿ ಹೊಡೆದು ಅನಾಹುತ ಸಂಭವಿಸುತ್ತಿತ್ತು. ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಲಾರಿ ಚಾಲಕ ರವಿ ಸಹ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.