ರಾಮಮಂದಿರಕ್ಕೆ ಧರ್ಮಸ್ಥಳದಿಂದ ಬೆಳ್ಳಿ ಪೂಜಾ ಪರಿಕರ ಸಮರ್ಪಣೆ

ಶೇರ್ ಮಾಡಿ

ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮಮಂದಿರದಲ್ಲಿ ಜ.22ರಂದು ಪ್ರತಿಷ್ಠಾಪನೆಗೊಳ್ಳುವ ಶ್ರೀರಾಮನ ನಿತ್ಯಪೂಜೆಗೆ ಬಳಸಲು ಶ್ರೀಕ್ಷೇತ್ರ ಧರ್ಮಸ್ಥಳದಿಂದ ವಿವಿಧ ಬೆಳ್ಳಿಯ ಪೂಜಾ ಪರಿಕರಗಳನ್ನು ಇಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಯಾಗಿರುವ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರಿಗೆ ಹಸ್ತಾಂತರಿಸಲಾಯಿತು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಕಳುಹಿಸಿಕೊಟ್ಟ ಈ ಬೆಳ್ಳಿಯ ಪೂಜಾ ಪರಿಕರಗಳನ್ನು ಅವರ ಪರವಾಗಿ ಸಹೋದರ ಡಿ.ಹರ್ಷೇಂದ್ರ ಕುಮಾರ್ ಅವರು ಪೇಜಾವರ ಮಠದಲ್ಲಿ ಶ್ರೀವಿಶ್ವಪ್ರಸನ್ನ ತೀರ್ಥರಿಗೆ ಸೋಮವಾರ ಹಸ್ತಾಂತರಿಸಿದರು. ಧರ್ಮಸ್ಥಳದಿಂದ ಕಳುಹಿಸಲಾದ ಬೆಳ್ಳಿಯ ನಿತ್ಯಪೂಜಾ ಪರಿಕರಗಳಲ್ಲಿ ಬೆಳ್ಳಿಯ ಆರತಿಗಳು, ಲೋಟ, ಬಿಂದಿಗೆ, ಅಭಿಷೇಕ ಶಂಖ, ಹರಿವಾಣ, ತೀರ್ಥಪಾತ್ರೆ ಮುಂತಾದವರು ಸೇರಿವೆ. ಟ್ರಸ್ಟ್‌ನ ಪರವಾಗಿ ಪೂಜಾ ಪರಿಕರಗಳನ್ನು ಸ್ವೀಕರಿಸಿದ ಪೇಜಾವರಶ್ರೀಗಳು, ನಿತ್ಯ ಪೂಜೆಗೆ ಬಳಕೆಯಾಗುವ ಪೂಜಾ ಪರಿಕರಗಳನ್ನು ಕಳುಹಿಸುವ ಮೂಲಕ ಅಯೋಧ್ಯೆ ಮತ್ತು ಧರ್ಮಸ್ಥಳದ ನಡುವಿನ ಸಂಬಂಧ ವೃದ್ಧಿಯಾಗಲಿ, ಇನ್ನಷ್ಟು ಬೆಳಗಲಿ ಎಂದು ಹಾರೈಸಿದರಲ್ಲದೇ, ಪುರಾಣಗಳಲ್ಲಿ ಶ್ರೀರಾಮ ಹಾಗೂ ರುದ್ರ (ಶಿವ)ರ ನಡುವೆ ಅನ್ಯೋನ್ಯತೆ ಇರುವ ಬಗ್ಗೆ ಉಲ್ಲೇಖವಿದೆ ಎಂದರು.

ಡಿ.ಹರ್ಷೇಂದ್ರ ಕುಮಾರ್ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳದಿಂದ ಡಾ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ತಾವು ಬೆಳ್ಳಿಯ ಪೂಜಾ ಪರಿಕರಗಳನ್ನು ಅಯೋದ್ಯೆಯ ಟ್ರಸ್ಟಿಯೂ ಆಗಿರುವ ಪೇಜಾವರಶ್ರೀಗಳ ಮೂಲಕ ರಾಮಮಂದಿರಕ್ಕೆ ಸಮರ್ಪಿಸುತಿದ್ದೇವೆ. ಇವುಗಳಿಗೆ ಬೆಲೆ ಕಟ್ಟಲಾಗದು ಎಂದರು. ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಪ್ರಧಾನ ಅರ್ಚಕ ರಾಮಕೃಷ್ಣ ಕಲ್ಲೂರಾಯ, ಮಣೆಗಾರ ವಸಂತ ಮಂಜಿತ್ತಾಯ, ಪರೀಕ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ವ್ಯವಸ್ಥಾಪಕ ಪ್ರವೀಣ್‌ಕುಮಾರ್, ಪ್ರದೀಪ್‌ಕುಮಾರ್ ಕಲ್ಕೂರ, ಯಕ್ಷಗಾನ ಕಲಾರಂಗದ ಗಣೇಶ ರಾವ್, ಸುಬ್ರಹ್ಮಣ್ಯ ಭಟ್ ಪೆರಂಪಳ್ಳಿ, ವಾಸುದೇವ ಭಟ್ ಮುಂತಾದವರು ಉಪಸ್ಥಿತರಿದ್ದರು.

Leave a Reply

error: Content is protected !!