ಎಳನೀರು ನೈಸರ್ಗಿಕ ಗ್ಲುಕೋಸ್ ಅಂಶವನ್ನು ಒಳಗೊಂಡಿರುವುದರಿಂದ ಇದನ್ನು ಸೇವಿಸಿದರೆ ತಕ್ಷಣ ಎನರ್ಜಿ ಸಿಗುತ್ತದೆ. ಹೀಗಾಗಿ, ನಮಗೆ ತೀರಾ ಬಾಯಾರಿಕೆಯಾದಾಗ ಅಥವಾ ಹಸಿವಾದಾಗ ಎಳನೀರು ಕುಡಿಯುವುದು ಉತ್ತಮ. ಕೆಲವರು ಉಪವಾಸದ ಸಂದರ್ಭದಲ್ಲೂ ದೇಹ ನಿರ್ಜಲೀಕರಣಗೊಳ್ಳುವುದನ್ನು ತಡೆಯಲು ಮತ್ತು ವೀಕ್ನೆಸ್ ಕಡಿಮೆ ಮಾಡಲು ಎಳನೀರು ಸೇವಿಸುತ್ತಾರೆ. ಎಳನೀರು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ದೇಹವನ್ನು ಹೈಡ್ರೇಟ್ ಮಾಡಿ, ದೇಹದ ಎಲೆಕ್ಟ್ರೋಲೈಟ್ ಸಮತೋಲನವನ್ನು ಮರುಸ್ಥಾಪಿಸುತ್ತದೆ. ಆದರೆ, ಮಧ್ಯಂತರ ಅಥವಾ ದೀರ್ಘಾವಧಿಯ ಉಪವಾಸದ ಸಂದರ್ಭದಲ್ಲಿ ಎಳನೀರೊಂದನ್ನೇ ಅವಲಂಬಿಸುವುದು ಆರೋಗ್ಯಕರವಲ್ಲ. ಏಕೆಂದರೆ, ಇದು ದೇಹದಲ್ಲಿ ಸಕ್ಕರೆಯ ಅಂಶದ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಎಲ್ಲಾ ದೇಹಗಳು ಒಂದೇ ರೀತಿ ಇರುವುದಿಲ್ಲ. ಮಧುಮೇಹದಿಂದ ಬಳಲುತ್ತಿರುವವರು ಎಳನೀರನ್ನು ಮಿತವಾಗಿ ಬಳಸುವುದು ಉತ್ತಮ. ಹಾಗೇ, ಮೂತ್ರಪಿಂಡದ ಕಾಯಿಲೆ ಇರುವವರಿಗೆ ಕೂಡ ಎಳನೀರು ಸೂಕ್ತವಲ್ಲ. ಎಳನೀರು ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಇದರ ನಿಯಮಿತ ಸೇವನೆಯು ದೇಹದಲ್ಲಿ ಆರೋಗ್ಯಕರ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ.
ಇದರಾಚೆಗೆ, ಎಳನೀರು ಜೀರ್ಣಕಾರಿ ಆರೋಗ್ಯಕ್ಕೆ ಉಪಯುಕ್ತವಾಗಿದೆ. ಇದು ಜಠರಗರುಳಿನ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದಲ್ಲದೆ, ರಕ್ತದೊತ್ತಡದ ವಿಷಯದಲ್ಲಿ ಎಳನೀರು ನಮ್ಮ ದೇಹಕ್ಕೆ ಗಣನೀಯ ಪ್ರಮಾಣದ ಪೊಟ್ಯಾಸಿಯಮ್ ಅನ್ನು ಒದಗಿಸುತ್ತದೆ, ರಕ್ತದೊತ್ತಡವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಾಳೆಹಣ್ಣಿನ 420 ಮಿಲಿ ಗ್ರಾಂಗೆ ಹೋಲಿಸಿದರೆ ಒಂದು ಕಪ್ ಎಳನೀರು ಸುಮಾರು 600 ಮಿಲಿ ಗ್ರಾಂ ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ. ಎಳನೀರಲ್ಲಿ ಸಮೃದ್ಧವಾಗಿರುವ ಉತ್ಕರ್ಷಣ ನಿರೋಧಕ ಅಂಶ ಆಕ್ಸಿಡೇಟಿವ್ ಒತ್ತಡ ಮತ್ತು ಜೀವಕೋಶದ ಹಾನಿಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ.
ಎಳನೀರು ಕಿಡ್ನಿ ಸ್ಟೋನ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಮೂತ್ರದ ಪೊಟ್ಯಾಸಿಯಮ್, ಕ್ಲೋರೈಡ್ ಮತ್ತು ಸಿಟ್ರೇಟ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ವ್ಯಾಯಾಮ ಅಥವಾ ವರ್ಕ್ಔಟ್ ಮಾಡಿದ ನಂತರ ಎಳನೀರು ಕುಡಿಯುವುದರಿಂದ ನಮ್ಮ ದೇಹ ಹೈಡ್ರೇಟ್ ಆಗುತ್ತದೆ. ಬೇರೆ ಎನರ್ಜಿ ಡ್ರಿಂಕ್ಗಳನ್ನು ಸೇವಿಸುವುದಕ್ಕಿಂತ ಎಳನೀರು ಕುಡಿಯವುದು ಹೆಚ್ಚು ಆರೋಗ್ಯಕರ.
ಆದರೆ, ನೀವು ವೈದ್ಯಕೀಯ ಸಮಸ್ಯೆಗಳನ್ನು ಹೊಂದಿದ್ದರೆ ದಯವಿಟ್ಟು ನಿಮ್ಮ ವೈದ್ಯರ ಬಳಿ ಅನುಮತಿ ಪಡೆದು ದಿನಕ್ಕೆ ಒಂದು ಕಪ್ ಎಳನೀರು ಸೇವಿಸಿ. ಎಳನೀರಿಗೆ ಹಣ್ಣುಗಳನ್ನು ಹಾಕಿ ಕೂಡ ಸೇವಿಸಬಹುದು.