ನೆಲ್ಯಾಡಿ ಗಾಂಧಿ ಮೈದಾನದಲ್ಲಿ 75ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ

ಶೇರ್ ಮಾಡಿ

ಜೆಸಿಐ ಘಟಕ ನೆಲ್ಯಾಡಿ, ವರ್ತಕರ ಮತ್ತು ಕೈಗಾರಿಕಾ ಸಂಘ ನೆಲ್ಯಾಡಿ, ಗ್ರಾಮ ಪಂಚಾಯತ್ ನೆಲ್ಯಾಡಿ ಹಾಗೂ ವಿಶ್ವವಿದ್ಯಾನಿಲಯ ಘಟಕ ಕಾಲೇಜು ನೆಲ್ಯಾಡಿ ವತಿಯಿಂದ ಗಾಂಧಿ ಮೈದಾನದಲ್ಲಿ 75ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.

ಧ್ವಜಾರೋಹಣವನ್ನು ನೆಲ್ಯಾಡಿ-ಕೌಕ್ರಾಡಿ ವರ್ತಕರ ಮತ್ತು ಕೈಗಾರಿಕಾ ಸಂಘ ಅಧ್ಯಕ್ಷರಾದ ಸತೀಶ್ ದುರ್ಗಾಶ್ರೀ ಕೆ.ಎಸ್., ನೆರವೇರಿಸಿ ಭಾರತದ ಸಂವಿಧಾನ ಜಾರಿಗೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ಕುರಿತು ಮಾತನಾಡಿದರು. ಇಡೀ ವಿಶ್ವದಲ್ಲಿಯೇ ನಮ್ಮ ಸಂವಿಧಾನವು ಬೃಹತ್ ಮತ್ತು ಶ್ರೇಷ್ಠ ಸಂವಿಧಾನವಾಗಿದೆ. ಈ ಸಂವಿಧಾನದ ಕರಡು ಸಮಿತಿ ಅಧ್ಯಕ್ಷರಾಗಿದ್ದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರು ಸಂವಿಧಾನ ರಚನೆಯಲ್ಲಿ ವಹಿಸಿದ ಪಾತ್ರ ಮತ್ತು ಶ್ರಮದ ಮಹತ್ವವನ್ನು ಸ್ಮರಿಸಿಕೊಳ್ಳುತ್ತಾ ಅವರ ಬದುಕು ಮತ್ತು ಬರಹಗಳಿಂದ ಪ್ರೇರಣೆ ಪಡೆದುಕೊಳ್ಳಬೇಕೆಂದರು.

ವಿಶ್ವವಿದ್ಯಾನಿಲಯ ಘಟಕ ಕಾಲೇಜಿನ ಉಪನ್ಯಾಸಕರಾದ ಡಾ.ನೂರಂದಪ್ಪ ಅವರು ಮಾತನಾಡುತ್ತಾ, ಭಾರತ ಸ್ವಾತಂತ್ರ್ಯದ ನಂತರ ಅಧಿಕೃತವಾಗಿ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡ ಈ ದಿನವನ್ನು ಅತ್ಯಂತ ಸಂಭ್ರಮದಿಂದ ಸ್ಮರಿಸಿಕೊಳ್ಳುತ್ತಿದ್ದೇವೆ. ಸಂವಿಧಾನವು 1949 ನವೆಂಬರ್ 26ರಂದು ಅಂಗೀಕಾರಗೊಂಡು 1950 ಜನವರಿ 26 ರಂದು ಜಾರಿಗೊಂಡ ಈ ದಿನವು ಅಧಿಕಾರವನ್ನು ಪ್ರಜೆಗಳಿಗೆ ಹಸ್ತಾಂತರಿಸಿದ ಮಹತ್ವದ ದಿನವಾಗಿದೆ. ಅಧಿಕಾರ ವಿಕೇಂದ್ರೀಕರಣದ ಮೂಲಕ ಮನುಷ್ಯನ ಸಾಮಾಜಿಕ ಘನತೆ ಮತ್ತು ಸ್ವಾತಂತ್ರ್ಯದ ಬದುಕನ್ನು ನಮ್ಮದಾಗಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ ನಮ್ಮ ಸಂವಿಧಾನದ ಆಶಯಗಳೊಂದಿಗೆ ಸಾರ್ವಭೌಮ ರಾಷ್ಟ್ರವಾದ ನಮ್ಮ ಭಾರತವನ್ನು ಅಭಿವೃದ್ಧಿಗೊಳಿಸುವ ಜವಾಬ್ದಾರಿಯು ಭಾರತೀಯ ಪ್ರಜೆಗಳಾದ ನಮ್ಮೆಲ್ಲರ ಮೇಲಿದೆ ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಲಾಂ ಬಿಲಾಲ್ ಅವರು ಗಣರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸುತ್ತಾ, ನಮ್ಮ ಸಂವಿಧಾನದ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಭ್ರಾತೃತ್ವ, ಮತ್ತು ಏಕತೆ ಎಂಬ ಅಂಶಗಳೊಂದಿಗೆ ಸರ್ವರ ಏಳಿಗೆಗೆ ಶ್ರಮಿಸುತ್ತಾ ದೇಶದ ಅಭಿವೃದ್ಧಿಗೆ ಶ್ರಮಿಸಬೇಕಿದೆ. ಈ ಹಿನ್ನಲೆಯಲ್ಲಿ ಮೂಲಭೂತ ಹಕ್ಕುಗಳೊಂದಿಗೆ ಮೂಲಭೂತ ಕರ್ತವ್ಯಗಳನ್ನು ಪಾಲಿಸುತ್ತಾ ನಮ್ಮ ದೇಶದ ಹೆಮ್ಮೆಯ ಪ್ರಜೆಗಳಾಗಿ ಬಾಳೋಣ ಎಂದು ಶುಭ ಸಂದೇಶ ನೀಡಿದರು.

ನೆಲ್ಯಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರೇಷ್ಮಾ,, ಪಂಚಾಯತ್ ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಯಾನಂದ ಬಂಟ್ರಿಯಾಲ್, ನೆಲ್ಯಾಡಿ ಜೆಸಿಐ ಅಧ್ಯಕ್ಷರಾದ ಸುಚಿತ್ರಾ. ಜೆ ಬಂಟ್ರಿಯಾಲ್ ಹಾಗೂ ಜೆಸಿಐ ನಿಕಟಪೂರ್ವ ಅಧ್ಯಕ್ಷರಾದ ದಯಾಕರ.ರೈ, ಮೊದಲಾದವರು ಉಪಸ್ಥಿತರಿದ್ದರು.

ನೆಲ್ಯಾಡಿ ಗ್ರಾಮ ಪಂಚಾಯಿತಿನ ಕಾರ್ಯದರ್ಶಿ ಅಂಗು ಕಾರ್ಯಕ್ರಮವನ್ನು ನಿರ್ವಹಿಸಿ ವಂದಿಸಿದರು.

Leave a Reply

error: Content is protected !!