ಶಿಥಿಲಾವಸ್ಥೆಯಲ್ಲಿ ನೆಲ್ಯಾಡಿ ಗ್ರಾಮ ಆಡಳಿತ ಅಧಿಕಾರಿ ಕಚೇರಿ

ಶೇರ್ ಮಾಡಿ

ಭಯದ ವಾತಾವರಣದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳು

ನೆಲ್ಯಾಡಿಯಲ್ಲಿ ಬಿರುಕು ಬಿಟ್ಟ ಗೋಡೆ, ಮುರಿದ ಪಕ್ಕಾಸಿ ಮೇಲ್ಚಾವಣಿ, ಬೀಳುತ್ತಿರುವ ಹಂಚುಗಳು ದುರಸ್ತಿಯನ್ನೇ ಕಾಣದ 50 ವರುಷ ಹಳೆಯದಾದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ನೆಲ್ಯಾಡಿ ಆಡಳಿತ ಅಧಿಕಾರಿ ಕಚೇರಿ .

ಕಡಬ ತಾಲೂಕಿನ ಪ್ರಮುಖ ಪಟ್ಟಣ ನೆಲ್ಯಾಡಿಯಾಗಿದೆ. ಈ ಹಿಂದೆ ಪ್ರಬಲವಾದ ಕೂಗು ಕೇಳಿ ಬರುತ್ತಿದ್ದ ತಾಲೂಕುಗಳಲ್ಲಿ ಒಂದಾದ ಈ ಊರು, ರಾಷ್ಟ್ರೀಯ ಹೆದ್ದಾರಿ 75ರ ಮಧ್ಯೆ ವಿಶಾಲವಾಗಿ ಹರಡಿಕೊಂಡು, ಹೆಚ್ಚಿನ ಜನಸಂಖ್ಯೆ ಹೊಂದಿರುವ ಗ್ರಾಮ ಇದಾಗಿದೆ. ಆದುದರಿಂದ ಸಂಬಂಧಪಟ್ಟ ಗ್ರಾಮದ ಜನರು ಗ್ರಾಮ ಆಡಳಿತ ಅಧಿಕಾರಿ ಕಚೇರಿಗೆ ಬರುತ್ತಲೇ ಇರುತ್ತಾರೆ. ಆದರೆ ಇಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಾದುರಸ್ತಿಯಲ್ಲಿರುವ ಬೀಳುವ ಹಂತದಲ್ಲಿರುವ ಕಟ್ಟಡದೊಳಗೆ ಜೀವಭಯದಲ್ಲಿ ಅನಿವಾರ್ಯತೆಯಿಂದ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.

ಅರ್ಧ ಶತಮಾನದ ಹಳೆಯ ಕಟ್ಟಡ:
ಸುಮಾರು 50 ವರ್ಷದ ಹಿಂದೆ ಈ ಕಟ್ಟಡವನ್ನು ಸ್ಥಳೀಯ ಗ್ರಾಮಸ್ಥರೇ ಸೇರಿ ನಿರ್ಮಾಣ ಮಾಡಿದ್ದರು. ಈ ಕಟ್ಟಡವು ಗ್ರಾಮ ಪಂಚಾಯತ್ ಜಾಗದಲ್ಲಿ ಇದೆ. ಇದಕ್ಕೆ ಹೊಂದಿಕೊಂಡಂತೆ ಗ್ರಾಮ ಪಂಚಾಯತಿನ ಕಟ್ಟಡವು ಇದ್ದು ಅದರಲ್ಲಿ ಈ ಹಿಂದೆ ಗ್ರಂಥಾಲಯವು ಇತ್ತು. ಇದೀಗ ಗ್ರಂಥಾಲಯ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು ಇಲ್ಲಿ ವಿಕಲಚೇತನರ ಪುನರ್ವಸತಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಎರಡು ವರುಷದ ಹಿಂದೆ ಗ್ರಾಮ ಪಂಚಾಯಿತಿಯಿಂದ ಈ ಕಟ್ಟಡದ ದುರಸ್ತಿ ಮಾಡಲಾಗಿತ್ತು. ಆದರೆ ಇದೀಗ ಕಟ್ಟಡದ ಗೋಡೆ ಬಿರುಕು ಬಿಟ್ಟಿದ್ದು ಹಂಚು ಹಾಗೂ ಪಕ್ಕಾಸುಗಳು ಮುರಿದು ಬೀಳುತ್ತಿದೆ.

ಸಾವಿರಾರು ದಾಖಲೆಗಳ ಸಂಗ್ರಹ:
ತಿಥಿಲಾವಸ್ಥೆಯಲ್ಲಿರುವ ಈ ಕಟ್ಟಡದ ಬಾಗಿಲು, ಕಿಟಕಿಗಳು ಅಲುಗಾಡುತ್ತಿದ್ದು, ಗೋಡೆಗಳು ಸಂಪೂರ್ಣ ಬಿರುಕು ಬಿಟ್ಟಿದೆ. ಈ ಕಚೇರಿಯ ಒಳಗಡೆ ನೆಲ್ಯಾಡಿ ಗ್ರಾಮಕ್ಕೆ ಸಂಬಂಧಿಸಿದ ಅಮೂಲ್ಯ ದಾಖಲೆಗಳ ಸಂಗ್ರಹವಿದೆ. ಸದ್ಯದಲ್ಲೇ ಮುರಿದು ಬೀಳುವ ಹಂತದಲ್ಲಿರುವ ತಿಥಿಲಾವಸ್ಥೆಯಲ್ಲಿರುವ ಕಟ್ಟಡಕ್ಕೆ ಶೀಘ್ರವೇ ಕಾಯಕಲ್ಪ ನೀಡದೆ ಇದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಜನರಿಗೆ ಅತಿ ಅವಶ್ಯವಾಗಿರುವ ಆಡಳಿತ ಅಧಿಕಾರಿ ಕಚೇರಿಯನ್ನು ಬೇರೆ ಕಟ್ಟಡಕ್ಕೆ ಶೀಘ್ರ ಸ್ಥಳಾಂತರಕ್ಕೆ ಇಲ್ಲವೇ ಕಟ್ಟಡದ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮುರಿದು ಬಿದ್ದ ಮೇಲ್ಚಾವಣಿಯ ಪಕ್ಕಾಸು:
ಮಂಗಳವಾರದಂದು ಬೆಳಗ್ಗೆ ಕಚೇರಿಯೊಳಗೆ ಗ್ರಾಮ ಸಹಾಯಕ ಚರಣ್ ಅವರು ಕೆಲಸ ನಿರ್ವಹಿಸುತ್ತಿರುವ ಸಂದರ್ಭ ಮೇಲ್ಚಾವಣಿಯ ಪಕ್ಕಾಸು ತುಂಡೊಂದು ಮುರಿದು ಬಿದ್ದು ಅಪಾಯದಿಂದ ಪಾರಾದ ಘಟನೆ ನಡೆದಿದೆ. ಬಳಿಕ ಆಡಳಿತ ಅಧಿಕಾರಿ ಕಚೇರಿಗೆ ಬೀಗ ಹಾಕಲಾಗಿದ್ದು. ಆಡಳಿತ ಅಧಿಕಾರಿ ಲಾವಣ್ಯ ಅವರು ಪಕ್ಕದ ವಿಕಲಚೇತನರ ಪುನರ್ ವಸತಿ ಕೇಂದ್ರದಲ್ಲಿ ಹಾಗೂ ಗ್ರಾಮ ಪಂಚಾಯಿತಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಟ್ಟಡ ಅಪಾಯ ಸ್ಥಿತಿಯಲ್ಲಿ ಇರುವ ಬಗ್ಗೆ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಪಂಚಾಯಿತಿನಿಂದ ಬೇರೆ ಕಟ್ಟಡದಲ್ಲಿ ಕಚೇರಿಗೆ ಅವಕಾಶ ಮಾಡಿಕೊಡುವ ಭರವಸೆ ಸಿಕ್ಕಿದೆ ಎಂದು ಆಡಳಿತ ಅಧಿಕಾರಿ ಲಾವಣ್ಯ ತಿಳಿಸಿದ್ದಾರೆ.

ಗ್ರಾಮ ಆಡಳಿತ ಅಧಿಕಾರಿಯ ಗೋಡೆ ಬಿರುಕು ಬಿಟ್ಟಿದ್ದು ಬೀಳುವ ಹಂತದಲ್ಲಿರುವ ಬಗ್ಗೆ ಮಾಹಿತಿ ದೊರೆತಿದೆ. ಗ್ರಾಮ ಪಂಚಾಯಿತಿನ ಹಳೆಯ ಕಟ್ಟಡದ ಕಚೇರಿಯಲ್ಲಿ ಗ್ರಾಮ ಆಡಳಿತ ಅಧಿಕಾರಿ ಕಚೇರಿಗೆ ಎರಡು ದಿನಗಳಲ್ಲಿ ವ್ಯವಸ್ಥೆ ಮಾಡುತ್ತೇವೆ.
– ಸಲಾಂ ಬಿಲಾಲ್ ಅಧ್ಯಕ್ಷರು ಗ್ರಾಮ ಪಂಚಾಯಿತಿನಲ್ಲಿ

ಗ್ರಾಮ ಪಂಚಾಯಿತಿನ ಸಾಮಾನ್ಯ ಸಭೆ ನಡೆಸುತ್ತಿದ್ದ ಕೊಠಡಿಯನ್ನು ಗ್ರಾಮ ಆಡಳಿತ ಅಧಿಕಾರಿಯ ಕಚೇರಿ ನಡೆಸಲು ನೀಡುವುದಾಗಿ ನಿರ್ಣಯಿಸಿಕೊಂಡಿದ್ದೇವೆ. ಇದೀಗ ಈ ಕೊಠಡಿಗೆ ಪೈಂಟಿಂಗ್ ಮಾಡಲಾಗಿದೆ.
-ಆನಂದ.ಎ., ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೆಲ್ಯಾಡಿ ಗ್ರಾಮ ಪಂಚಾಯತ್

Leave a Reply

error: Content is protected !!