ಮಂಗಳೂರು: ಲಂಚ ಸ್ವೀಕಾರ ಮಾಡುತ್ತಿದ್ದ ಸರ್ವೆಯರ್ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಗುರುವಾರ ನಡೆದಿದೆ.
ತಾಲೂಕು ಕಚೇರಿಯ ಭೂಮಾಪನ ಇಲಾಖೆಯ ಸರ್ವೆಯರ್ ಶೀತಲ್ ರಾಜ್ 4 ಸಾವಿರ ರೂ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದು, ಹಣ ಸಮೇತ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ನೀರುಮಾರ್ಗದ 72 ವರ್ಷದ ಅನಾರೋಗ್ಯಕ್ಕೆ ಗುರಿಯಾಗಿದ್ದ ವೃದ್ಧೆಯೊಬ್ಬರು ಸಂಬಂಧಿಯೊಬ್ಬರ ಮೂಲಕ ತತ್ಕಾಲ್ ಪೋಡಿ ಮಾಡಿಕೊಡಲು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಪಹಣಿ ವಿಭಾಗದಲ್ಲಿ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಿ 1500 ರೂ ಹಣವನ್ನು ಆನ್ಲೈನ್ ಮೂಲಕ ಪಾವತಿ ಮಾಡಿ ರಶೀದಿ ಪಡೆದಿದ್ದರು. ಫೆಬ್ರವರಿ 29 ರಂದು ಮಂಗಳೂರಿನ ಸರ್ವೆ ಇಲಾಖೆಯ ಶೀತಲ್ ರಾಜ್ ಜಮೀನಿನ ಸರ್ವೆ ನಡೆಸಿ ಸ್ಥಳ ಮಹಜರು ಮಾಡಿಕೊಂಡಿದ್ದು, ನಕ್ಷೆ ನೀಡಲು 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗಿತ್ತು. ಬೇಡಿಕೆಯನ್ನು ಕೊನೆಗೆ ನಾಲ್ಕು ಸಾವಿರ ರೂಪಾಯಿಗೆ ಇಳಿಸಿದ್ದ.