ಕೊಕ್ಕಡದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಕೃತ ಬ್ಯಾಂಕೊಂದರ ಶಾಖೆಯಲ್ಲಿ ಚಿನ್ನಾಭರಣ ಪರೀಕ್ಷಕರನ್ನು ವಜಾ ಮಾಡಿರುವ ಪ್ರಕರಣದ ನಿಗೂಢತೆಯನ್ನು ಬಯಲು ಮಾಡಬೇಕೆಂದು ಅಗ್ರಹಿಸಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಮಾ.18ರಂದು ಬೃಹತ್ ಪ್ರತಿಭಟನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕೊಕ್ಕಡದ ವೈದ್ಯ ಡಾ.ಗಣೇಶ್ ಪ್ರಸಾದ್ ತಿಳಿಸಿದ್ದಾರೆ.
ಮಾ.12ರಂದು ಕೊಕ್ಕಡದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಊರಿನಲ್ಲಿ ಪ್ರಾಮಾಣಿಕರಾಗಿ ಜನಮೆಚ್ಚುಗೆ ಪಡೆದಿದ್ದ ಚಿನ್ನಾಭರಣ ಪರೀಕ್ಷಕ (ಸರಾಫ) ರೊಬ್ಬರನ್ನು ಬ್ಯಾಂಕೊಂದರಿಂದ ವಜಾ ಮಾಡಲಾಗಿದೆ. ಕಾರಣ ಕೇಳಿದರೆ ನಕಲಿ ಚಿನ್ನಾಭರಣ ಪ್ರಕರಣದಲ್ಲಿ ಅವರು ತಪ್ಪೆಸಗಿದ್ದಾರೆ ಎಂಬ ಉತ್ತರ ಲಭಿಸುತ್ತಿದೆ. ಆದರೆ ನಕಲಿ ಚಿನ್ನಾಭರಣ ತಂದವರು ಯಾರು?, ಅವರು ಎಲ್ಲಿಯವರು? ಯಾವ ಆಧಾರದಲ್ಲಿ ಅವರಿಗೆ ಸಾಲ ನೀಡಲಾಯಿತು? ನಕಲಿ ಚಿನ್ನಾಭರಣವನ್ನು ತಂದು ವಂಚನೆ ಎಸಗಿದವರ ವಿರುದ್ದ ಪೊಲೀಸರಿಗೆ ದೂರು ಸಲ್ಲಿಸಲಾಗಿದೆಯಾ? ಸಲ್ಲಿಸಲಾಗಿದ್ದರೆ ನಕಲಿ ಚಿನ್ನಾಭರಣವನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆಯಾ? ನಕಲಿ ಚಿನ್ನಾಭರಣವನ್ನು ತಂದಿರಿಸಿದವನ ಬಂಧನವಾಗಿದೆಯಾ? ಎಂಬಿತ್ಯಾದಿ ಪ್ರಶ್ನೆಗಳಿಗೆ ಬ್ಯಾಂಕ್ ಅಧಿಕಾರಿಗಳು ಯಾವುದೇ ಸಮರ್ಪಕ ಉತ್ತರ ನೀಡದೆ ಇರುವುದರಿಂದ ಪ್ರಕರಣದಲ್ಲಿ ಬಡಪಾಯಿ ಸರಫಾರನ್ನು ಬಲಿಪಶು ಮಾಡಲಾಗಿರುವ ಶಂಕೆ ಮೂಡಿದೆ ಎಂದು ಅವರು ಆರೋಪಿಸಿದರು.
ಇಲ್ಲಿ ನಡೆದಿದೆ ಎನ್ನಲಾದ ವಂಚನೆ ಪ್ರಕರಣದ ದಾಖಲೀಕರಣವಿಲ್ಲ, ವಂಚಕನ ವಿರುದ್ಧ ಕಾನೂನು ಕ್ರಮವಿಲ್ಲ. ವಂಚನೆಗೆ ಕುಮ್ಮಕ್ಕು ನೀಡಿದವರ ಮೇಲೆ ಶಿಸ್ತು ಕ್ರಮವಿಲ್ಲ. ಆದಾಗ್ಯೂ ಸರಾಫರೊಬ್ಬರೇ ಅಪರಾಧಿ ಎಂದೆಣಿಸಿ ಕರ್ತವ್ಯದಿಂದ ವಜಾಗೊಳ್ಳುವ ನಿಗೂಢ ಪ್ರಕರಣದ ಸತ್ಯಾಸತ್ಯತೆ ಬಯಲುಗೊಳ್ಳಬೇಕೆಂದು ಅಗ್ರಹಿಸಿ ಎಂಟು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಮಾ.18ರಂದು ಕೊಕ್ಕಡದ ಕೆನರಾ ಬ್ಯಾಂಕ್ ಎದುರುಗಡೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜ ಸೇವಕ ತುಕ್ರಪ್ಪ ಶೆಟ್ಟಿ ನೂಜೆ, ಉದ್ಯಮಿ ಇಸ್ಮಾಯಿಲ್, ಪ್ರಗತಿಪರ ಕೃಷಿಕ ಈಶ್ವರ ಭಟ್ ಹಿತ್ತಿಲು, ಗ್ರಾ.ಪಂ. ಮಾಜಿ ಸದಸ್ಯ ಶೀನಪ್ಪ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.