ಸೇರ್ಪಡೆ ಪ್ರಕ್ರಿಯೆಗೆ ವಿರೋಧ; ಬಿಜೆಪಿ ಕಚೇರಿಯಲ್ಲಿ ಬಾಗಿಲು ಮುಚ್ಚಿ ಸಭೆ

ಶೇರ್ ಮಾಡಿ

ಹಿಂದೂ ಮುಖಂಡ ಅರುಣ್‌ ಕುಮಾರ್‌ಪುತ್ತಿಲ ಶುಕ್ರವಾರ ಸಂಜೆ ಮಂಗಳೂರಿನಲ್ಲಿ ಅಧಿಕೃತವಾಗಿ ಪಕ್ಷ ಸೇರ್ಪಡೆಗೆ ಕ್ಷಣಗಣನೆ ನಡೆಯುತ್ತಿದ್ದ ಹೊತ್ತಲ್ಲೆ ಪುತ್ತೂರು ಬಿಜೆಪಿ ಕಚೇರಿಯಲ್ಲಿ ತುರ್ತು ಸಭೆ ನಡೆದು ಸೇರ್ಪಡೆ ಕಾರ್ಯಕ್ರಮವೇ ಮುಂದೂಡಲ್ಪಟ್ಟ ವಿದ್ಯಮಾನ ನಡೆದಿದೆ.

ಗುರುವಾರ ಸಂಜೆ ಪುತ್ತಿಲ ಪರಿವಾರ ಹಾಗೂ ಜಿಲ್ಲಾ, ತಾಲೂಕು ಬಿಜೆಪಿ ಮುಖಂಡರು ಜಂಟಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಭೇಟಿಯಾಗಿ ಪಕ್ಷ ಸೇರ್ಪಡೆಗೆ ಮುಹೂರ್ತ ನಿಗದಿಪಡಿಸಿದ್ದರು. ಮಾ.15ರಂದು ಸಂಜೆ 6 ಗಂಟೆಗೆ ಮಂಗಳೂರಿನ ಪಕ್ಷದ ಕಚೇರಿಯಲ್ಲಿ ಸೇರ್ಪಡೆ ಕಾರ್ಯ ನಡೆಯಲಿದೆ ಎಂದು ಅರುಣ್‌ ಪುತ್ತಿಲ ಅವರಿಗೆ ಮಾಹಿತಿ ನೀಡಲಾಗಿತ್ತು ಎನ್ನಲಾಗಿದೆ.

ಈ ಮಧ್ಯೆ ಪುತ್ತಿಲ ಸೇರ್ಪಡೆಗೆ ಪುತ್ತೂರಿನ ಕೆಲ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು ಎನ್ನಲಾಗಿದ್ದು, ಹೀಗಾಗಿ ಸಂಜೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಅವರು ಪುತ್ತೂರು ಕಚೇರಿಗೆ ದಿಢೀರ್‌ ಭೇಟಿ ನೀಡಿ ಸಭೆ ನಡೆಸಿದರು. ಈ ವೇಳೆ ಕೆಲ ಕಾರ್ಯಕರ್ತರು, ಮುಖಂಡರು ಪುತ್ತಿಲ ಸೇರ್ಪಡೆಯ ವಿಧಾನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕರ್ತರ ತೀರ್ಮಾನದಂತೆಯೇ ಪಕ್ಷಕ್ಕೆ ಸೇರುವುದಾದರೆ ಸೇರಲಿ, ಬೇರೆ ರೀತಿ ಬೇಡ ಎಂದು ಪಟ್ಟು ಹಿಡಿದರೆನ್ನಲಾಗಿದೆ.

ಸಭೆಯಲ್ಲಿ ಜಿಲ್ಲಾ ವಿಭಾಗ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಮಾಜಿ ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್‌ ಅರುವಾರ, ಪುತ್ತೂರು ಗ್ರಾಮೀಣ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ ಜಿ ಜಗನ್ನಿವಾಸ ರಾವ್‌, ಬಿಜೆಪಿ ಚುನಾವಣಾ ಉಸ್ತುವಾರಿ ಸುಲೋಚನಾ ಭಟ್‌, ಹಿರಿಯ ಹಿಂದೂ ಮುಖಂಡ ಡಾ| ಎಮ್‌.ಕೆ.ಪ್ರಸಾದ್‌, ಮಾಜಿ ತಾಲೂಕು ಪಂಚಾಯತ್‌ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌, ನಗರ ಸಭೆಯ ಮಾಜಿ ಅಧ್ಯಕ್ಷ ಜೀವಂಧರ್‌ ಜೈನ್‌, ಪುಡಾದ ಮಾಜಿ ಅಧ್ಯಕ್ಷ ಭಾಮಿ ಅಶೋಕ್‌ ಶೆಣೈ, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್‌ ಬನ್ನೂರು ಮತ್ತಿತ್ತರರು ಉಪಸ್ಥಿತರಿದ್ದರು. ಕಚೇರಿ ಬಾಗಿಲು ಮುಚ್ಚಿ ತುರ್ತು ಸಭೆ ನಡೆಸಲಾಯಿತು.

ಸಭೆಯ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಸತೀಶ್‌ ಕುಂಪಲ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲು ಕೆಲಸ ಮಾಡುವ ಬಗ್ಗೆ ಚರ್ಚಿಸಲು ಸಭೆ ಮಾಡಿದ್ದೇವೆ. ಕ್ಷೇತ್ರದಲ್ಲಿ ಮೂರೂವರೆಯಿಂದ ನಾಲ್ಕು ಲಕ್ಷ ಮತಗಳ ಅಂತರದ ಗೆಲುವು ಪಡೆಯಲು ಎಲ್ಲ ಪರಿವಾರ ಸಂಘಟನೆಗಳು ಒಟ್ಟಿಗೆ ಇದ್ದು ಕೆಲಸ ಮಾಡಲಿದ್ದೇವೆ ಎಂದರು.
ಅರುಣ್‌ ಕುಮಾರ್‌ಪುತ್ತಿಲ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿ, ಪುತ್ತಿಲರ ಸೇರ್ಪಡೆ ವಿಷಯ ನಾವು ಮಾಡಿದ್ದಲ್ಲ. ಅದು ಮಾಧ್ಯಮದವರು ಬಿಂಬಿಸಿದ್ದು. ಪುತ್ತಿಲರ ಬಗ್ಗೆಯೂ ಚರ್ಚಿಸಿದ್ದೇವೆ. ಒಟ್ಟು ಪರಿವಾರದ ಸಂಘಟನೆ ಮತ್ತು ಬಿಜೆಪಿಯ ಎಲ್ಲರ ಒಮ್ಮತದ ಅಭಿಪ್ರಾಯ ಆಧಾರದ ಮೇಲೆ ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂದು ಹೇಳಿದರು.

ಪುತ್ತೂರು ಬಿಜೆಪಿ ಕಚೇರಿಯಲ್ಲಿ ನಡೆಯಬೇಕಿದ್ದ ಜಂಟಿ ಸಭೆ ಮತ್ತು ಮಂಗಳೂರು ಬಿಜೆಪಿ ಕಚೇರಿಯಲ್ಲಿ ನಡೆಯಬೇಕಾಗಿದ್ದ ಸೇರ್ಪಡೆ ಕಾರ್ಯಕ್ರಮ ಪುತ್ತೂರು ಬಿಜೆಪಿಯ ಕೆಲವರ ಅಸಹಕಾರದಿಂದ ಮುಂದೂಡಲ್ಪಟ್ಟಿದೆ. ಮುಂದಿನ ನಡೆ ಬಗ್ಗೆ ನಾಳೆ ತಿಳಿಸುವುದಾಗಿ ಪುತ್ತಿಲ ಪರಿವಾರವು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.

Leave a Reply

error: Content is protected !!