ಚುನಾವಣ ಆಯೋಗ ಮೆಹಂದಿ, ಮದುವೆ ಮೇಲೂ ಹದ್ದಿನ ಕಣ್ಣು

ಶೇರ್ ಮಾಡಿ

ಚುನಾವಣೆ ಘೋಷಣೆಯಾದ ಬಳಿಕ ಮನೆಯಲ್ಲಿ ನಡೆಸುವ ಕೌಟುಂಬಿಕ ಕಾರ್ಯಕ್ರಮಗಳಿಗೂ ಸಮಸ್ಯೆ ಎದುರಾಗಿದೆ. ಇದಕ್ಕೂ ಅನುಮತಿ ಪಡೆಯಬೇಕೆಂದು ನೀತಿ ಸಂಹಿತೆಯಲ್ಲಿ ತಿಳಿಸಲಾಗಿದೆ. ಎಲ್ಲದಕ್ಕೂ ಅನುಮತಿ ನೀಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಾರೆಯಾದರೂ ಅದಕ್ಕಾಗಿ ಅಲೆದಾಡುವುದೇ ದೊಡ್ಡ ತಲೆ ನೋವಾಗಿದೆ.

ಶುಭಕಾರ್ಯಗಳನ್ನು ರಾಜಕೀಯ ಪಕ್ಷದ ನಾಯಕರು, ಕಾರ್ಯಕರ್ತರು ಮತಯಾಚನೆ ವೇದಿಕೆಯಾಗಿ ಮಾಡಿಕೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಮದುವೆ, ಮೆಹಂದಿ, ಔತಣ, ಜನ್ಮ ದಿನಾಚರಣೆ, ಗೃಹಪ್ರವೇಶದಂತಹ ಕೌಟುಂಬಿಕ ಕಾರ್ಯಕ್ರಮಗಳ ಮೇಲೂ ಚುನಾವಣ ಆಯೋಗ ಹದ್ದಿನ ಕಣ್ಣಿರಿಸಿದೆ. ಈ ಕಾರ್ಯಕ್ರಮಗಳನ್ನೂ ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿದೆ.

ಸದ್ಯ ನಗರ, ಗ್ರಾಮಾಂತರ ಭಾಗದಲ್ಲಿ ಈಗಾಗಲೇ ಮದುವೆ, ಗೃಹ ಪ್ರವೇಶ, ನೇಮ, ಬ್ರಹ್ಮ ಕಲಶೋತ್ಸವ ಸಹಿತ ಖಾಸಗಿ ಶುಭ ಕಾರ್ಯ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳ ಸೀಸನ್‌ ಆರಂಭಗೊಂಡಿದೆ. ಹೆಚ್ಚು ಜನ ಸೇರಿಸಿ ಮಾಡುವ ಎಲ್ಲ ಕಾರ್ಯಕ್ರಮಗಳಿಗೆ ಆಯೋಗವು ಅನುಮತಿ ಕಡ್ಡಾಯ ಗೊಳಿಸಿದೆ. ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ಕಾರ್ಯಕ್ರಮ ಸಂಘಟಕರು, ಹೊಟೇಲ್‌, ಸಭಾಂಗಣ, ರೆಸಾರ್ಟ್‌ ಮಾಲಕರಿಗೆ ಆಯೋಗವು ಸೂಚಿಸಿದೆ.

ಮದುವೆ ಮೊದಲಾದ ಕಾರ್ಯ ಕ್ರಮಗಳ ನೆಪದಲ್ಲಿ ನೀತಿ ಸಂಹಿತೆ ಉಲ್ಲಂಘನೆ ನಡೆಯುತ್ತಿದ್ದರೆ ಕಣ್ಗಾವಲಿರಿಸಲು ಜಿಲ್ಲಾಮಟ್ಟದ ಪ್ಲಾಯಿಂಗ್‌ ಸ್ಕ್ವಾಡ್‌ಗೆ ಜವಾಬ್ದಾರಿ ವಹಿಸಲಾಗಿದೆ. ಪ್ರತೀ ಹೋಬಳಿ ಮಟ್ಟದಲ್ಲಿ ನಡೆಯುವ ಎಲ್ಲ ಶುಭ ಕಾರ್ಯಕ್ರಮಗಳ ಮೇಲೆ ಅವರು ನಿಗಾ ವಹಿಸುತ್ತಿದ್ದಾರೆ. ಮದುವೆ, ನಿಶ್ಚಿತಾರ್ಥ, ನಾಮಕರಣ, ರಿಸೆಪ್ಶನ್‌, ಜನ್ಮದಿನಾಚರಣೆ ಎಂದು ಸಭಾಂಗಣವನ್ನು ಬಾಡಿಗೆ ಪಡೆದು, ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡರೆ ಕೂಡಲೇ ಕಟ್ಟಡ ಮಾಲಕರು, ಪೊಲೀಸರ ಗಮನಕ್ಕೆ ತರಬೇಕು. ಲಾಭದ ಆಸೆಗೆ ಸುಮ್ಮನಿದ್ದರೆ ಹೊಟೇಲ್‌, ಕಟ್ಟಡದ ಮಾಲಕರ ವಿರುದ್ದವೂ ಕ್ರಮ ತೆಗೆದು ಕೊಳ್ಳಲಾಗುತ್ತದೆ.

ಅಭ್ಯರ್ಥಿಗಳು, ಮುಖಂಡರ ಮೇಲೆ ನಿಗಾ ?
ಮದುವೆ, ಮೆಹಂದಿ, ಬೀಗರ ಊಟ (ರಿಸೆಪ್ಶನ್‌) ಇನ್ನಿತರ ಶುಭ ಸಮಾರಂಭ, ಸಾಮಾಜಿಕ, ಧಾರ್ಮಿಕ ಸಹಿತ ಕೆಲವು ಕಾರ್ಯಕ್ರಮಗಳಿಗೆ ರಾಜಕೀಯ ಮುಖಂಡರನ್ನು ಅತಿಥಿಗಳಾಗಿ ಆಹ್ವಾನಿಸುವುದು ಪ್ರತಿಷ್ಠೆಯ ಸಂಗತಿಯಾಗಿರುತ್ತದೆ. ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಶುಭಸಮಾರಂಭಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು, ರಾಜಕೀಯ ಮುಖಂಡರು ಬಂದಲ್ಲಿ ಅವರು ಕೇವಲ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದು ಹಾರೈಸಿ ಹೋಗಬೇಕು. ಅದನ್ನು ಹೊರತುಪಡಿಸಿ ರಾಜಕೀಯ ಪಕ್ಷದ ಚಿಹ್ನೆ ಬಳಕೆ ಮಾಡುವುದು, ಮತ ಯಾಚನೆ ಮಾಡುವುದು, ಸೇರಿದಂತೆ ರಾಜಕೀಯ ಚಟುವಟಿಕೆಗಳನ್ನು ಶುಭ ಸಮಾರಂಭದಲ್ಲಿ ನಡೆಸಿದರೆ ನೀತಿ ಸಂಹಿತೆ ಉಲ್ಲಂಘನೆಯಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗ ಸ್ಪಷ್ಟಪಡಿಸಿದೆ.

ಬೆಳ್ತಂಗಡಿ ಕ್ಷೇತ್ರ ವ್ಯಾಪ್ತಿಯವರು ಬೆಳ್ತಂಗಡಿ ತಾಲೂಕು ಆಡಳಿತ ಸೌಧ, ಮೂಡುಬಿದಿರೆಯವರು ತಾಲೂಕು ಆಡಳಿತ ಸೌಧ, ಮಂಗಳೂರು ನಗರ ಉತ್ತರದವರು ಮಂಗಳೂರು ತಾಲೂಕು ಆಡಳಿತ ಸೌಧ, ಮಂಗಳೂರು ದಕ್ಷಿಣ ಕ್ಷೇತ್ರದವರು ಮಂಗಳೂರು ಪಾಲಿಕೆ ಕಚೇರಿ, ಮಂಗಳೂರು ಕ್ಷೇತ್ರದವರು ಜನರು ಉಳ್ಳಾಲ ನಗರಸಭೆ ಕಾರ್ಯಾಲಯ, ಬಂಟ್ವಾಳದವರು ತಾಲೂಕು ಆಡಳಿತ ಸೌಧ, ಪುತ್ತೂರಿನವರು ಪುತ್ತೂರು ತಾಲೂಕು ಆಡಳಿತ ಸೌಧ ಹಾಗೂ ಸುಳ್ಯ ಭಾಗದವರು ಸುಳ್ಯ ಆಡಳಿತ ಸೌಧಕ್ಕೆ ತೆರಳಿ ಅನುಮತಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ದ.ಕ. ಜಿಲ್ಲಾಧಿಕಾರಿ ಕಚೇರಿ ಚುನಾವಣ ಕಂಟ್ರೋಲ್‌ ರೂಂ 1950 ಸಂಪರ್ಕಿಸಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಉತ್ಸವ ವಿವಿಧ, ಸಮಾವೇಶ, ನೇಮ, ಕೋಲ, ಕ್ರಿಕೆಟ್‌, ವಾಲಿಬಾಲ್‌ ಸಹಿತ ವಿವಿಧ ಪಂದ್ಯಾವಳಿ, ಕ್ರೀಡೋತ್ಸವ, ಸಾರ್ವಜನಿಕ ಸ್ಪರ್ಧೆಗಳು, ಜನ ಪ್ರತಿನಿಧಿಗಳನ್ನು ಆಹ್ವಾನಿಸಿ ಮಾಡುವ ವಿವಿಧ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಇದರ ಜತೆಗೆ ಮದುವೆ, ಗೃಹ ಪ್ರವೇಶ, ಮೆಹಂದಿ, ಸಭಾಂಗಣದಲ್ಲಿ ನಡೆಸುವ ನಾಮಕರಣ, ಸಾಮೂಹಿಕ ಪೂಜೆ ಇತ್ಯಾದಿಗಳಿಗೆ ಅನುಮತಿ ಪಡೆಯಬೇಕು. ಎಲ್ಲ ರೀತಿಯ ಸಾರ್ವಜನಿಕ ಕಾರ್ಯಕ್ರಮಗಳಿಗೂ ಅನುಮತಿ ಪಡೆಯಬೇಕು.

ಕುಟುಂಬದ ಸದಸ್ಯರು ಸೀಮಿತವಾಗಿ ಮನೆಯಲ್ಲೇ ನಡೆಸುವ ಕಾರ್ಯಕ್ರಮಗಳಿಗೆ ಅನುಮತಿ ಅಗತ್ಯವಿಲ್ಲ.

Leave a Reply

error: Content is protected !!