ಡ್ರೋನ್‌ ಮೂಲಕ ನಾಲ್ವರು ಶಂಕಿತರ ಶೋಧ ಕಾರ್ಯ

ಶೇರ್ ಮಾಡಿ

ಸುಬ್ರಹ್ಮಣ್ಯ; ಐನೆಕಿದು ಗ್ರಾಮದ ಅರಣ್ಯದಂಚಿನ ಮನೆಯೊಂದಕ್ಕೆ ಶನಿವಾರ ಸಂಜೆ ನಾಲ್ವರು ಶಂಕಿತರು ಭೇಟಿ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಹಾಗೂ ನಕ್ಸಲ್ ನಿಗ್ರಹ ದಳದವರು ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಶಂಕಿತರಲ್ಲಿ ಇಬ್ಬರು ಮಹಿಳೆಯರು, ಇಬ್ಬರು ಪುರುಷರು ಇದ್ದರು. ಮನೆಯಲ್ಲಿ ಸುಮಾರು 45 ನಿಮಿಷ ಕಳೆದಿದ್ದ ಅವರು, ಆ ಮನೆಯಿಂದ ಊಟ, ಅಕ್ಕಿ, ಸಕ್ಕರೆ ಪಡೆದು ಬಂದ ದಾರಿಯತ್ತ ತೆರಳಿದ್ದರು.

ಭಾನುವಾರ ಬೆಳಿಗ್ಗೆ ನಕ್ಸಲ್ ನಿಗ್ರಹ ದಳದ ಡಿವೈಎಸ್‌ಪಿ ರಾಘವೇಂದ್ರ, ಪುತ್ತೂರು ಉಪವಿಭಾಗದ ಡಿವೈಎಸ್‌ಪಿ ಅರುಣ್‌ ನಾಗೇಗೌಡ, ಸುಬ್ರಹ್ಮಣ್ಯ ಪಿಎಸ್‌ಐ ಕಾರ್ತಿಕ್ ಸೇರಿದಂತೆ ನಕ್ಸಲ್ ನಿಗ್ರಹ ದಳದ ಅಧಿಕಾರಿಗಳು, ಸಿಬ್ಬಂದಿ, ಗುಪ್ತದಳದ ಅಧಿಕಾರಿಗಳು ಭೇಟಿ ನೀಡಿ ಮನೆಯವರಿಂದ ಮಾಹಿತಿ ಪಡೆದರು.

ಸಣ್ಣದಾಗಿ ಮಳೆಯಾಗುತ್ತಿದ್ದಾಗ ಅರಣ್ಯ ಪ್ರದೇಶದಿಂದ ಕಾಡಂಚಿನ ಮನೆಯ ಬಳಿಗೆ ಬಂದಿದ್ದ ಶಂಕಿತರಿಗೆ ವ್ಯಕ್ತಿಯೊಬ್ಬರು ಸಿಕ್ಕಿದ್ದು, ಅವರ ಬಳಿ ಮಾತನಾಡಿದ್ದಾರೆ. ಅಲ್ಲಿಂದ ರಸ್ತೆ ಬದಿಯ ಮನೆಯೊಂದಕ್ಕೆ ತೆರಳಲು ಉದ್ದೇಶಿಸಿದ್ದ ಶಂಕಿತರು, ಆ ಮನೆಯ ಜಾಗಕ್ಕೆ ಸೋಲಾರ್ ಬೇಲಿ ಅಳವಡಿಸಿದ್ದರಿಂದ ಬೇರೆ ಮನೆಗೆ ತೆರಳಿದ್ದಾರೆ ಎಂದು ಅಂದಾಜಿಸಲಾಗಿದೆ. ಬಣ್ಣದ ಉಡುಪು ಧರಿಸಿದ್ದ ಶಂಕಿತರು ತಲೆಗೆ ಬಟ್ಟೆ ಕಟ್ಟಿಕೊಂಡಿದ್ದರು. ‘ನಾವು ಯಾರೆಂದು ನಿಮಗೆ ತಿಳಿದಿದೆಯಾ?’ ಎಂದು ಮನೆಯವರಲ್ಲಿ ಕೇಳಿದ್ದರು. ‘ಕಳೆದ ವಾರ ನಮ್ಮ ತಂಡದ ಸದಸ್ಯರೇ ಕೂಜಿಮಲೆ ಎಸ್ಟೇಟ್ ಅಂಗಡಿಗೆ ಹೋಗಿದ್ದು’ ಎಂದೂ ತಿಳಿಸಿದ್ದಾರೆ. ಬಳಿಕ ಕೆಲ ವಿಚಾರಗಳ ಬಗ್ಗೆ ಮನೆಯವರೊಂದಿಗೆ ಮಾತುಕತೆ ನಡೆಸಿದ್ದಾರೆ. ಮನೆಯ ಹೊರಗಿದ್ದ ಕೆಲಸದವರಲ್ಲೂ ಮಾತನಾಡಿದ್ದಾರೆ ಎಂದು ಗೊತ್ತಾಗಿದೆ. ‘ನಾವು ಬರುವ ವೇಳೆ ನಮ್ಮನ್ನು ವ್ಯಕ್ತಿಯೊಬ್ಬರು ನೋಡಿದ್ದು, ಅವರು ಹೊರಗೆ ಮಾಹಿತಿ ನೀಡಬಹುದು. ನಾವು ಇಲ್ಲಿ ತುಂಬ ಹೊತ್ತು ಇರುವುದು ಸರಿಯಲ್ಲ’ ಎಂದು ಅಲ್ಲಿಂದ ಅರಣ್ಯದತ್ತ ತೆರಳಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಶಂಕಿತರ ಜತೆಗಿದ್ದ ಗನ್‌ ಅನ್ನು ಗೋಡೆಗೆ ಒರಗಿಸಿಟ್ಟಿದ್ದರು ಎನ್ನಲಾಗಿದೆ.

Leave a Reply

error: Content is protected !!