ಕೊಕ್ಕಡದಿಂದ ಮುಂಡೂರುಪಳಿಕೆವರೆಗೆ 3 ಫೇಸ್ ವಿದ್ಯುತ್ತನ್ನು ನೀಡುವಂತೆ ಆಗ್ರಹಿಸಿ; ಮೆಸ್ಕಾಂ ವ್ಯವಸ್ಥಾಪಕರಿಗೆ ಮನವಿ

ಶೇರ್ ಮಾಡಿ

ಕೊಕ್ಕಡದಿಂದ ಮುಂಡೂರುಪಳಿಕೆ ವರೆಗೆ ನೆಲ್ಯಾಡಿ ಸಬ್‌ ಸ್ಟೇಷನಿಂದ 3 ಫೇಸ್ ವಿದ್ಯುತ್ತನ್ನು ನೀಡುವಂತೆ ಆಗ್ರಹಿಸಿ, ನೆರವೇರಿಸದಿದ್ದಲ್ಲಿ ಹಕ್ಕೋತ್ತಾಯ ಕಾರ್ಯಕ್ರಮವನ್ನು ನಡೆಸುವಂತೆ ಬೆಳ್ತಂಗಡಿ ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಮೂಲಕ ಮಂಗಳೂರು ಮೆಸ್ಕಾಂ ವ್ಯವಸ್ಥಾಪಕರಿಗೆ ಮಾ.26 ರಂದು ಮನವಿ ನೀಡಲಾಯಿತು.

ಕೊಕ್ಕಡ ಗ್ರಾಮವು ಹೋಬಳಿ ಕೇಂದ್ರವಾಗಿದ್ದು, ಅಸಮರ್ಪಕ ವಿದ್ಯುತ್ ಸರಬರಾಜಿನಿಂದಾಗಿ ರೈತರ ಪಾಡು ಹೇಳತೀರದಾಗಿದೆ. ಪಂಚಾಯತಿನ ಕುಡಿಯುವ ನೀರಿನ ವ್ಯವಸ್ಥೆಗೊ ಅಡಚಣೆಯಾಗಿ ಜನಜೀವನ ಅಸ್ತವ್ಯಸ್ಥವಾಗಿದೆ. ಕೇವಲ 12ಗಂಟೆ 3 ಫೇಸ್ ವಿದ್ಯುತ್ತನ್ನು ನೀಡುವ ಭರವಸೆಯನ್ನು ನೀಡಿ ರಾತ್ರಿ 11ರಿಂದ ಮಧ್ಯಾಹ್ನ 12ರ ವರೆಗೆ ವಿದ್ಯುತ್ ನೀಡುತ್ತಿದ್ದೇವೆ ಎಂದು ಹೇಳುತ್ತಿರುವ ತಮ್ಮ ಸಂಸ್ಥೆಯು ಕೊಕ್ಕಡ ಗ್ರಾಮದ ಕೃಷಿ ವಿದ್ಯುತ್ ಬಳಕೆದಾರರಿಗೆ ಗುಣಮಟ್ಟದ 1 ಗಂಟೆ ವಿದ್ಯುತ್ತನ್ನು ನೀಡುವುದಿಲ್ಲ. ರೈತರು ಮತ್ತು ಅಡಿಕೆ ಬೆಳೆಗಾರರು ಸಾಲ ಮಾಡಿ ಕೃಷಿ ಮಾಡಿದ್ದು ಈ ವರ್ಷದ ಅಸಮರ್ಪಕ ವಿದ್ಯುತ್ ಸರಬರಾಜಿನ ಕಾರಣ ಅಪಾರ ನಷ್ಟಕ್ಕೊಳಗಾಗಿ ಅವರ ಬದುಕು ಬೀದಿಗೆ ಬರುವಂತಾಗಿದೆ. ಪ್ರತಿ 5 ನಿಮಿಷಕ್ಕೊಮ್ಮೆ ಫೀಡರಲ್ಲಿ ಟ್ರಿಪ್ ಆಗುತ್ತಿರುವ ಕಾರಣ ರೈತರ ಪಂಪ್ ಹಾಳಾಗುವುದರ ಜೊತೆಗೆ ಪಂಪ್ ಸೆಟ್‌ಗೆ ಅಲೆದು ಸುಸ್ತಾಗಿದ್ದಾರೆ. ಕೃಷಿಕರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ಬಂದು ನಿಂತಿದ್ದಾರೆ. ಪ್ರಸ್ತುತ ನೆಲ್ಯಾಡಿ ಸಬ್‌ಸ್ಟೇಷನಿಂದ ಕೊಕ್ಕಡ ಹೈಸ್ಕೂಲ್ ಟಿಸಿ ತನಕ ಗುಣಮಟ್ಟದ ವಿದ್ಯುತ್ ಸಂಪರ್ಕವಿರುತ್ತದೆ. ಅದನ್ನು ಮುಂಡೂರುಪಳಿಕೆಯವರೆಗೆ ವಿಸ್ತರಿಸಬೇಕೆಂದು ಆಗ್ರಹಿಸುತ್ತೇವೆ. ಇದು ಬರಗಾಲದ ಸಮಯವಾಗಿರುವುದರಿಂದ ಪಂಚಾಯತಿನಿಂದ ಕುಡಿಯುವ ನೀರಿನ ಸರಬರಾಜಿಗು ಅನ್ವಯಿಸುವಂತೆ ಮತ್ತು ರೈತರ ಕೃಷಿಯನ್ನು ಉಳಿಸಿಕೊಳ್ಳುವಂತಾಗಲು ತಕ್ಷಣ ಈ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಬೇಕು ಮತ್ತು ಮಾ.29 ರೊಳಗೆ ನೆರವೇರಿಸದಿದ್ದಲ್ಲಿ ಮಾ.30 ರಂದು ಕೊಕ್ಕಡ ಮೆಸ್ಕಾಂ ಜೆಇ ಕಛೇರಿ ಎದುರು ವಿದ್ಯುತ್ ಬಳಕೆದಾರರು ಸ್ವಯಂ ಪ್ರೇರಿತರಾಗಿ ಹಕ್ಕೋತ್ತಾಯ ಕಾರ್ಯಕ್ರವನ್ನು ನಡೆಸಲಿದ್ದೇವೆ ಎಂದು ಮಂಗಳೂರು ವ್ಯವಸ್ಥಾಪಕ ನಿರ್ದೇಶಕರು ಮಾ.30ರಂದು ಬೆಳಗ್ಗೆ 10.30ಕ್ಕೆ ಉಪಸ್ಥಿತರಿದ್ದು ಅಹವಾಲುಗಳನ್ನು ಸ್ವೀಕರಿಸಿ ಬೇಡಿಕೆಗಳನ್ನು ಈಡೇರಿಸಿಕೊಡಬೇಕಾಗಿ ಮನವಿ ಮೂಲಕ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕೊಕ್ಕಡ ಗ್ರಾ.ಪಂ. ನಿಕಟಪೂರ್ವಾಧ್ಯಕ್ಷ ಹಾಗೂ ರೈತರಾದ ಯೋಗೀಶ್ ಆಲಂಬಿಲ, ಎಂಡೋಸಲ್ಫಾನ್ ಹೋರಾಟ ಸಮಿತಿಯ ಅಧ್ಯಕ್ಷ ಹಾಗೂ ರೈತರಾದ ಶ್ರೀಧರ ಕೆಂಗೇಡೇಲು, ದಿನಕರ ಕೇಚೋಡಿ, ಮೋಹನ ಬಡಕೈಲು, ಸುಂದರ ಗೌಡ ಹಳ್ಳಿಂಗೇರಿ ಉಪಸ್ಥಿತರಿದ್ದರು.

Leave a Reply

error: Content is protected !!