ನೆಲ್ಯಾಡಿ ವಿವಿ ಘಟಕ ಕಾಲೇಜಿನ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ

ಶೇರ್ ಮಾಡಿ

ಕಡಬ ತಾಲ್ಲೂಕು ಉಪತಹಸೀಲ್ದಾರ ಗೋಪಾಲ.ಕೆ. ಅವರು ಮಾತನಾಡಿ ಕೌಟುಂಬಿಕ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಸಂಸ್ಕಾರಯುತ ಜೀವನ ರೂಪಿಸಿಕೊಳ್ಳುವ ಮೂಲಕ ಭಾರತಮಾತೆಯ ಪುಣ್ಯಭೂಮಿಯಲ್ಲಿ ಎಲ್ಲರೂ ಒಂದೇ ತಾಯಿಯ ಮಕ್ಕಳಾಗಿ ಜೀವನ ನಡೆಸಲು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವು ಮಹತ್ವದ ಪಾತ್ರ ವಹಿಸುತ್ತದೆ. ತಾಯ್ತನದ ಪ್ರೀತಿ, ತಂದೆಯ ಮಮತೆಯ ಮಹತ್ವ, ಕೂಡು ಕುಟುಂಬದ, ಸರ್ವ ಸದಸ್ಯರನ್ನು ಒಳಗೊಂಡ ಸಹಬಾಳ್ವೆಯ ಬದುಕಿನ ಕಲೆಯನ್ನು ಈ ಏಳು ದಿನದ ಶಿಬಿರದಲ್ಲಿ ಶಿಬಿರಾರ್ಥಿಗಳು ಪಡೆದುಕೊಂಡಿದ್ದೀರಿ. ಈ ನಡತೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾರಂಪರಿಕ ಕೌಟುಂಬಿಕ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತಾ ದೇಶದ ಅಭಿವೃದ್ಧಿಗೆ ಶ್ರಮಿಸಿ ಎಂದು ಶಿಬಿರಾರ್ಥಿಗಳಿಗೆ ಕರೆ ಕೊಟ್ಟರು.

ನೆಲ್ಯಾಡಿ ಮೆಸ್ಕಾಂನ ಶಾಖಾಧಿಕಾರಿ ರಮೇಶ್.ಬಿ., ಅವರು ಇಂದಿನ ವಿದ್ಯಾರ್ಥಿಗಳೇ ನಾಳಿನ ನಮ್ಮ ದೇಶದ ಸಂಪತ್ತು. ಭಾರತದ ನಮ್ಮ ಈ ಯುವ ಸಮುದಾಯವೆಂಬ ಸಂಪತ್ತು ಸಮಾಜದ ಸಂಪತ್ತಾಗಿ ಪರಿವರ್ತನೆಯಾಗಬೇಕು. ಕಚ್ಚಾ ವಸ್ತುಗಳೆಲ್ಲ ಸೇರಿ ಒಂದು ಬೆಲೆಬಾಳುವ ಸಿದ್ಧ ವಸ್ತುವಾಗಿ ಹೇಗೆ ರೂಪಗೊಳ್ಳುತ್ತದೆಯೋ ಹಾಗೆ ಇಂದಿನ ವಿದ್ಯಾರ್ಥಿಗಳು ಮೌಲ್ಯಯುತ ವ್ಯಕ್ತಿತ್ವದ ಮೂಲಕ ದೇಶದ ಸಂಪತ್ತಾಗಿ ಬೆಳೆಯಬೇಕು. ಈ ಬೆಳವಣಿಗೆಯಲ್ಲಿ ಎನ್.ಎಸ್.ಎಸ್ ಶಿಬಿರವು ಮಹತ್ವದ ಮಾರ್ಗವಾಗಿದೆ. ಈ ಏಳು ದಿನದ ಶಿಬಿರಕ್ಕೆ ಮನೆ ಬಿಟ್ಟು ಬರುವ ಮುನ್ನ ಶಿಬಿರಾರ್ಥಿಗಳಲ್ಲಿ ಆತಂಕ ಕುತೂಹಲಗಳು ಮರೆಯಾಗಿ ಎಲ್ಲರೂ ಒಂದಾಗಿ ಬದುಕುವ ಸವಿಯನ್ನು ನಿಮ್ಮದಾಗಿಸಿಕೊಂಡ ಕಾರಣ ಇಂದು ನಿಮ್ಮಲ್ಲಿ ಹೊಸ ಚೈತನ್ಯ ಮೂಡಿದೆ‌. ಇದೇ ನಿಜವಾದ ಪರಿವರ್ತನೆಯಾಗಿದೆ. ಮನುಷ್ಯನು ಕೇವಲ ಕುಟುಂಬ ಜೀವಿಯಲ್ಲ, ಸಮಾಜ ಜೀವಿಯಾಗಿ, ರಾಷ್ಟ್ರಜೀವಿಯಾಗಿ ವಿಶ್ವಕ್ಕೆ ಸಲ್ಲಬೇಕು. ಮನೆಯನ್ನು ಗೆದ್ದು, ಮಂದಿಯನ್ನು ಗೆದ್ದು, ವಿಶ್ವವನ್ನು ಗೆಲ್ಲಲು ಸ್ಪೂರ್ತಿ ತುಂಬುವುದೇ ಈ ಶಿಬಿರದ ಮೂಲ ಉದ್ದೇಶ. ಇಂತಹ ಸೇವಾ ಮನೋಭಾವ ಮತ್ತು ವ್ಯಕ್ತಿತ್ವ ವಿಕಸನದ ದಾರಿಗಳಿಂದ ಮುಂದೆ ಶಿಬಿರಾರ್ಥಿಗಳ ಜೀವನ ಯಶಸ್ವಿಯಾಗಲಿ ಎಂದರು.

ಅಧ್ಯಕ್ಷತೆಯನ್ನು ವಿವಿ ಘಟಕ ಕಾಲೇಜಿನ ಸಹ ಸಂಯೋಜಕ ಡಾ.ಸೀತಾರಾಮ್ ಪಿ. ವಹಿಸಿದ್ದರು. ನೆಲ್ಯಾಡಿ-ಕೌಕ್ರಾಡಿ ವರ್ತಕರ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್, ನೆಲ್ಯಾಡಿಯ ಜನಜಾಗೃತಿ ವೇದಿಕೆಯ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಸ್ವಾಗತ ಸಮಿತಿಯ ಅಧ್ಯಕ್ಷ ಭಾಸ್ಕರ ಎಸ್.ಗೌಡ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವಸಂತ್ ಬಿಜೇರು, ನೆಲ್ಯಾಡಿ-ಕೌಕ್ರಾಡಿ ಕಟ್ಟಡ ಮಾಲೀಕರ ಸಂಘದ ಕಾರ್ಯದರ್ಶಿ ರವಿಚಂದ್ರ ಹೊಸವಕ್ಲು, ಮುಖ್ಯಶಿಕ್ಷಕಿ ಜಯಶ್ರೀ, ಯೋಜನಾಧಿಕಾರಿ ಶ್ರುತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ಶಿಬಿರದ ಸ್ವಾಗತ ಸಮಿತಿಯ ಅಧ್ಯಕ್ಷ, ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಭಾಸ್ಕರ ಎಸ್.ಗೌಡ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವಸಂತ ಬಿಜೇರು, ಸದಸ್ಯ ಸತೀಶ್ ಪಳಿಕೆ, ಶಿಬಿರಾರ್ಥಿಗಳಿಗೆ ಸಲಹೆಗಳನ್ನು ನೀಡಿದ ಅರ್ಥಶಾಸ್ತ್ರ ಉಪನ್ಯಾಸಕ ಸಚಿನ್ ಎನ್.ಟಿ.,ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಶಿಬಿರಾರ್ಥಿಗಳಾದ ಯಕ್ಷಿತಾ, ವಿನಯ್, ಕಾವ್ಯ ಅವರು ಏಳು ದಿನದ ಶಿಬಿರದ ಅಭಿಪ್ರಾಯಗಳನ್ನು ಹಂಚಿಕೊಂಡರು. ಶಿಬಿರಾಧಿಕಾರಿ ಶ್ರುತಿ ಶಿಬಿರದ ವರದಿ ವಾಚಿಸಿದರು. ಕನ್ನಡ ಉಪನ್ಯಾಸಕ ಡಾ.ನೂರಂದಪ್ಪ ಸ್ವಾಗತಿಸಿದರು. ಸಹ ಶಿಬಿರಾಧಿಕಾರಿ ಚಂದ್ರಕಲಾ ಬಿ. ವಂದಿಸಿದರು. ವಾಣಿಜ್ಯ ಉಪನ್ಯಾಸಕಿ ದಿವ್ಯಶ್ರೀ.ಜಿ ನಿರೂಪಿಸಿದರು.

Leave a Reply

error: Content is protected !!