ಕೊಕ್ಕಡ: ಎಂಡೋಸಲ್ಫಾನ್ ಸಂತ್ರಸ್ಥರಿಂದ ಚುನಾವಣಾ ಬಹಿಷ್ಕಾರಕ್ಕೆ ನಿರ್ಧಾರ: ಚುನಾವಣಾ ಆಯೋಗ ಭೇಟಿ

ಶೇರ್ ಮಾಡಿ

ಕೊಕ್ಕಡ: ಭಾರತ ಚುನಾವಣಾ ಆಯೋಗದ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್ ವಸ್ತ್ರದ್ ಭಾ.ಆ.ಸೇ(ನಿ) ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಕೊಕ್ಕಡಕ್ಕೆ ಭೇಟಿ ನೀಡಿ ಸೌತಡ್ಕ ಸಭಾ ಭವನದಲ್ಲಿ ಮತದಾರರ ಜಾಗೃತಿ ಹಾಗೂ ಮತದಾರರೊಂದಿಗೆ ಸಂವಾದ ನಡೆಸಿದರು.

ಚುನಾವಣೆ ಬಹಿಷ್ಕಾರ:
ಸಭೆಯಲ್ಲಿ ಯುಐಡಿ ಕಾರ್ಡ್ ದೊರೆಯದೆ ಇರುವುದರಿಂದ ಸುಮಾರು 400 ಜನ ಎಂಡೋಸಲ್ಫಾನ್ ಸಂತ್ರಸ್ಥರಿಗೆ ಮಾಶಾಸನ ಸ್ಥಗಿತಗೊಂಡಿದೆ ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ಹಲವು ವರ್ಷಗಳಿಂದ ಅಕ್ರಮ ಸಕ್ರಮ ವಿತರಿಸದೆ ಇರುವುದರಿಂದ ಎಂಡೋಸಲ್ಫಾನ್ ಸಂತ್ರಸ್ಥರು ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ತಿಳಿಸಿದರು.
ತುಕ್ರಪ್ಪ ಶೆಟ್ಟಿ ಎಂಬವರ ಮನೆ ದರೋಡೆಯ ಸಂದರ್ಭದಲ್ಲಿ ಅವರಿಗೆ ಬಂದೂಕನ್ನು ಇರಿಸಿಕೊಳ್ಳಲು ಮನೆಯಲ್ಲಿ ವಿನಾಯಿತಿಯನ್ನು ನೀಡಿದಂತೆ ಈ ಬಾರಿಯೂ ಅವರಿಗೆ ವಿನಾಯತಿ ನೀಡಬೇಕೆಂದು ಕೇಳಿಕೊಂಡಿದ್ದರು ವಿನಾಯತಿ ನೀಡದಿರುವುದಕ್ಕೆ ಅಕ್ರೋಶ ವ್ಯಕ್ತಪಡಿಸಿದರು, 86ವರ್ಷ ದಾಟಿದ ವಯಸ್ಕರಿಗೆ ಮತ್ತು ವಿಕಲಚೇತನರರಿಗೆ ಮನೆಯಿಂದಲೇ ಓಟನ್ನು ಹಾಕುವುದಕ್ಕೆ ಅವಕಾಶ ನೀಡದಿರುವುದರ ಕುರಿತು ಅಕ್ರೋಶ ವ್ಯಕ್ತಪಡಿಸಿದರು.

ಪೋಸ್ಟರ್ ಬಿಡುಗಡೆ:
ಸೌತಡ್ಕ ಸಭಾ ಭವನದಲ್ಲಿ ತಾಲೂಕಿನ ಸ್ವೀಪ್ ಸಮಿತಿ ವತಿಯಿಂದ ಎಲ್ಲಾ ಶಾಲೆಗಳು, ಅಂಗನವಾಡಿ, ಗ್ರಾ.ಪಂ., ಗ್ರಂಥಾಲಯಗಳಿಗಾಗಿ ಸಿದ್ಧಪಡಿಸಿರುವ ಪೋಸ್ಟರ್ ಅನ್ನು ಚುನಾವಣಾ ಆಯೋಗದ ನೋಡೆಲ್ ಅಧಿಕಾರಿ ಬಿಡುಗಡೆ ಮಾಡಿ ಎಂಡೋಸಲ್ಫಾನರ ಮಾಶಾಸನ ಕುರಿತು ಬೆಂಗಳೂರು ಹಾಗೂ ಮಂಗಳೂರು ಮಟ್ಟದಲ್ಲಿ ಸಂಪರ್ಕಿಸಿ ನ್ಯಾಯ ಕೊಡಿಸುವುದಾಗಿ ಹಾಗೂ ನಿಯಾಮಾನುಸಾರ ಯಾರಿಗೆ ಓಟು ಹಾಕಲು ಆಗುವುದಿಲ್ಲ ಅವರಿಗೆ ಮನೆಯಲ್ಲಿಯೇ ಕಲ್ಪಿಸಿಕೊಡುವಂತಹ ಭರವಸೆ ಕೊಟ್ಟರು. ಮತದಾನ ಬಹಿಷ್ಕಾರಿಸುವುದರಿಂದ ಯಾವ ಫಲವೂ ಸಿಗುವುದಿಲ್ಲ, ಬದಲಾಗಿ ಮತದಾನದ ಹಕ್ಕು ಚಲಾಯಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮತದಾರರು ಪ್ರಯತ್ನಿಸಬೇಕೆಂದು ಮನವೊಲಿಸಿದರು. ವಿಶೇಷವಾಗಿ EVM ಮಿಷನ್ ನ ಸದೃಢತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ತಹಶೀಲ್ದಾರ್ ಪೃಥ್ವಿ ಸಾನಿಕಂ, ತಾ.ಸಹಾಯಕ ಚುನಾವಣಾಧಿಕಾರಿ ಕೆಂಪೇಗೌಡ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ವೈಜಣ್ಣ, ತಾ.ಪಂ.ಅಧೀಕ್ಷಕ ಪ್ರಶಾಂತ್ ಡಿ., ರಾಜ್ಯ ಮಟ್ಟದ ಮಾಸ್ಟರ್ ಟ್ರೈನರ್ ಪ್ರಮೀಳಾ ರಾವ್, ದ.ಕ ಜಿಲ್ಲಾ ಸ್ವೀಪ್ ಸಮಿತಿಯ ಮಾಸ್ಟರ್ ಟ್ರೈನರ್ ಯೋಗೇಶ ಹೆಚ್.ಆರ್, ರವಿಕುಮಾರ್, ಕೊಕ್ಕಡ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್, ಉಪಸ್ಥಿತರಿದ್ದರು.

Leave a Reply

error: Content is protected !!