ಕೊಳವೆ ಬಾವಿಯಲ್ಲಿ ತಲೆ ಕೆಳಗಾಗಿ ಬಿದ್ದು ಸತತ 21 ಗಂಟೆ ಕಾರ್ಯಾಚರಣೆ ಬಳಿಕ ಬದುಕಿ ಬಂದಿರುವ ಬಾಲ ಸಾತ್ವಿಕಗೆ ಸಿದ್ಧಲಿಂಗ ಮಹಾರಾಜರ ಹೆಸರನ್ನು ಮರುನಾಮಕರಣ ಮಾಡಲು ಹೆತ್ತವರು ನಿರ್ಧಸಿದ್ದಾರೆ.
ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಮುಜಗೊಂಡ ಕುಟುಂಬದ ಪೂಜ ಹಾಗೂ ಸತೀಶ ದಂಪತಿಗೆ ಸಾತ್ವಿಕ ಒಬ್ಬನೇ ಮಗ.14 ತಿಂಗಳ ಮಗು ಸಾತ್ವಿಕ ಏಕಾಏಕಿ ತಮ್ಮದೇ ಜಮೀನಿನಲ್ಲಿ ಕೊರೆಸಿದ್ದ ಕೊಳವೆ ಬಾವಿಗೆ ಬಿದ್ದಿದ್ದ. ಇದರಿಂದ ಕಂಗಾಲಾಗಿದ್ದ ಮುಜಗೊಂಡ ಕುಟುಂಬದವರು ತಮ್ಮ ಮಗ ಸುರಕ್ಷಿತವಾಗಿ ಬದುಕಿ ಬರಲೆಂದು ಹಲವು ರೀತಿಯಲ್ಲಿ ಹರಕೆ ಹೊತ್ತಿದ್ದರು.ಹೆತ್ತವರ ಹರಕೆಯಂತೆ ಮಗು ಸಾತ್ವಿಕ್ ಸುರಕ್ಷಿತವಾಗಿ ಬದುಕಿದ್ದು, ಸ್ಥಳೀಯ ದೈವೀಶಕ್ತಿಯಾದ ಸಿದ್ಧಲಿಂಗ ಮಹಾರಾಜರ ಪವಾಡ ಹಾಗೂ ಕೃಪೆ ಎಂದು ಕುಟುಂಬ ಸಂಭ್ರಮಿಸುತ್ತಿದೆ.
ಈ ಮಧ್ಯೆ ತನಗಿದ್ದ ಒಬ್ಬನೇ ಮಗ ಸಾತ್ಚಿಕ ಪುನರ್ಜನ್ಮ ಪಡೆದು ಬದುಕಿ ಬಂದಿರುವುದಕ್ಕೆ ಮಗುವಿನ ತಾಯಿ ಪೂಜಾ ದೀರ್ಘದಂಡ ನಮಸ್ಕಾರ ಹಾಕುವ ಹರಕೆ ತೀರಿಸಲು ಮುಂದಾಗಿದ್ದಾರೆ. ತಮ್ಮ ಮಗ ಯಮನ ದವಡೆ ಸಾವಿನ ಸುಳಿಯಿಂದ ಪಾರಾಗಿರುವುದು ಲಚ್ಯಾಣ ಸಿದ್ಧಲಿಂಗ ಮಹಾರಾಜರ ಕೃಪೆಯಿಂದ. ಹೀಗಾಗಿ ನಮ್ಮ ಮನೆಯಿಂದ ಸಿದ್ಧಲಿಂಗ ಮಹಾರಾಜರ ಮಠದ ವರೆಗೆ ದೀರಗಘದಂಡ ನಮಸ್ಕಾರ ಹಾಕುವ ಹರಕೆ ತೀರಿಸುವುದಾಗಿ ಹೇಳಿದ್ದಾರೆ.
ಲಚ್ಯಾಣ ಸಿದ್ಧಲಿಂಗ ಮಹಾರಾಜರ ಕೃಪೆ ಹಾಗೂ ಪವಾಡದಿಂದ ನನ್ನ ಮಗ ಸಾತ್ವಿಕ ಮರುಜನ್ಮ ಪಡೆದಿದ್ದಾನೆ ಎಂದು ಮಗುವಿನ ತಂದೆ ಸತೀಶ ಸಂತಸ ವ್ಯಕ್ತಪಡಿಸಿದ್ದಾರೆ. ತಲೆ ಮೇಲಾಗಿ ಬಿದ್ದ ಮಕ್ಕಳೇ ವಾರಗಟ್ಟಲೆ ಕಾರ್ಯಾಚರಣೆ ಬಳಿಕವೂ ಬದುಕಿಲ್ಲ. ಅಂಥದ್ದರಲ್ಲಿ ನಮ್ಮ ಮಗ ಸಾತ್ವಿಕ ತಲೆ ಕೆಳಗಾಗಿ ಬಿದ್ದರೂ ಕೇವಲ 21 ಗಂಟೆಯ ಕಾರ್ಯಾಚರಣೆಯಲ್ಲಿ ಸುರಕ್ಷಿತವಾಗಿ ಬದುಕಿ ಹೊರ ಬರುವಲ್ಲಿ ಸಿದ್ಧಲಿಂಗ ಮಹಾರಾಜರ ಅನುಗ್ರಹವೇ ಕಾರಣ ಎಂದು ಹೇಳಿದ್ದಾರೆ. ಹೀಗಾಗಿ ಸಿದ್ಧಲಿಂಗ ಮಹಾರಾಜರ ದಯೆಯಿಂದ ಮರುಜನ್ಮ ಪಡೆದ ಮಗನ ಹೆಸರನ್ನು ಸಾತ್ವಿಕ ಬದಲಾಗಿ ಸಿದ್ಧಲಿಂಗ ಎಂದು ಮರುನಾಮಕರಣ ಮಾಡುವುದಾಗಿ ಸಾತ್ವಿಕನ ತಂದೆ ಸತೀಶ ಹೇಳಿದ್ದಾರೆ.