ನೀತಿ ಸಂಹಿತೆ ಅವಧಿಯಲ್ಲಿ ಕಾಮಗಾರಿ ಆರಂಭ ಸಮರ್ಪಕವಲ್ಲ -ಹರೀಶ್ ಎಸ್.ಇಂಜಾಡಿ

ಶೇರ್ ಮಾಡಿ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಹಿಂದಿನ ಆಡಳಿತ ಮಂಡಳಿಯ ಕೊನೆಯ ದಿನಗಳಲ್ಲಿ ದಾನಿಗಳ ಸಹಕಾರದಲ್ಲಿ ಆಶ್ಲೇಷ ಬಲಿ ಮಂಟಪ ನಿರ್ಮಿಸಲು ಉದ್ದೇಶಿಸಿರುವುದು ಶ್ಲಾಘನೀಯ. ಆದರೆ, ಮಂಟಪ ನಿರ್ಮಾಣಕ್ಕೆ ನಿಗದಿ ಪಡಿಸಿದ ಸ್ಥಳ ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ ಹೇಳಿದರು.

ಸುಬ್ರಹ್ಮಣ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಂಬೂಲ ಪ್ರಶ್ನಾ ಚಿಂತನೆ ನಡೆಸದೆ ಷಣ್ಮುಖ ಪ್ರಸಾದ ಭೋಜನ ಶಾಲೆಯ ಪಕ್ಕದಲ್ಲಿ ಧಾರ್ಮಿಕ ಕಟ್ಟಡ ಮಾಡಲು ಸ್ಥಳ ನಿಗದಿ ಮಾಡಿ ಶಿಲಾನ್ಯಾಸ ಮಾಡಿರುವುದು ಸರಿಯಲ್ಲ. ಇದೀಗ ನೀತಿ ಸಂಹಿತೆ ಇರುವಾಗ ದಾನಿಗಳ ಮೂಲಕ ಆಶ್ಲೇಷ ಬಲಿ ಮಂಟಪ ನಿರ್ಮಾಣ ಕಾಮಗಾರಿ ಆರಂಭಿಸಲಾಗಿರುವುದೂ ಸಮರ್ಪಕವಲ್ಲ. ನೀತಿ ಸಂಹಿತೆ ಮುಗಿದ ತಕ್ಷಣ ಕಾಮಗಾರಿ ಪ್ರಾರಂಭಿಸಬೇಕು. ಕ್ಷೇತ್ರದ ಭಕ್ತರ ಧಾರ್ಮಿಕ ಭಾವನೆಗಳಿಗೆ ಬೆಲೆ ನೀಡಿ ಪ್ರಶ್ನಾ ಚಿಂತನೆ ನಡೆಸಿ ಸೂಕ್ತ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಅವರು ಆಗ್ರಹಿಸಿದರು.

ನೀತಿ ಸಂಹಿತೆ ಇರುವಾಗ ಅಭಿವೃದ್ಧಿ ಕಾರ್ಯ ನಡೆಸಬಾರದು ಎಂಬ ನಿಯಮ ಇದೆ. ಈ ಬಗ್ಗೆ ದೇವಳದ ಆಡಳಿತಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಯಾದ ಪುತ್ತೂರು ಉಪ ವಿಭಾಗಾಧಿಕಾರಿಗೆ ದೂರು ನೀಡಲಾಗಿದೆ. ಆಶ್ಲೇಷ ಬಲಿ ಮಂಟಪ ನಿರ್ಮಾಣಕ್ಕೆ ಮುಂದೆ ಬಂದ ದಾನಿಗಳು ನಿರ್ದಿಷ್ಟ ಪಕ್ಷಕ್ಕೆ ಸೇರಿದ್ದು, ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದರು. ಈ ಕಾರಣದಿಂದ ಕಟ್ಟಡ ನಿರ್ಮಾಣ ಕಾರ್ಯವನ್ನು ನೀತಿ ಸಂಹಿತೆ ಮುಗಿಯುವವರೆಗೆ ಸ್ಥಗಿತಗೊಳಿಸಬೇಕು ಎಂದರು.

ದೇವಳದ ಯಶಸ್ವಿ ಆನೆಯ ಮಾವುತರಾಗಿ ನಿವೃತ್ತರಾದ ಶ್ರೀನಿವಾಸ್ ಅವರನ್ನು ಮತ್ತೆ ಮಾವುತರಾಗಿ ತೆಗೆದುಕೊಳ್ಳಲಾಗಿದೆ. ಅನುಭವ ಇಲ್ಲದ, ದೇವಳದ ಸಿಬ್ಬಂದಿಯನ್ನು ಮಾವುತನಾಗಿ ನಿಯುಕ್ತಿಗೊಳಿಸಲಾಗಿದೆ. ಈ ಹಿಂದೆ ಯಶಸ್ವಿಗೆ ಮಾವುತನಾಗಿ ಅನುಭವ ಹೊಂದಿರುವ ಶಿವ ಕುಮಾರ್ ಎ.ವಿ. ಎಂಬುವರನ್ನು ಮಾವುತನ ಕರ್ತವ್ಯದಿಂದ ಭದ್ರತಾ ಕರ್ತವ್ಯಕ್ಕೆ ನಿಯುಕ್ತಿಗೊಳಿಸಲಾಗಿದೆ. ಶೀಘ್ರವೇ ಶಿವಕುಮಾರ್ ಅವರನ್ನು ಮಾವುತನನ್ನಾಗಿ ನೇಮಿಸಬೇಕು. ನಿವೃತ್ತರಾದ ಶ್ರೀನಿವಾಸ್ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಕೃಷ್ಣಮೂರ್ತಿ ಭಟ್ ಆಗ್ರಹಿಸಿದರು.

ದೇವಳದಿಂದ ವಾಲಗದಕೇರಿ ಸಮೀಪ ನಿರ್ಮಿಸಿರುವ ಒಳಚರಂಡಿ ಘಟಕ ಸಮರ್ಪಕವಾಗಿಲ್ಲ. ಘಟಕದ ಅವ್ಯವಸ್ಥೆಯಿಂದ ಈ ಭಾಗದಲ್ಲಿ ನಿವಾಸಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಒಳಚರಂಡಿ ಘಟಕದಲ್ಲಿ ಕೊಳಚೆ ನೀರನ್ನು ಶುದ್ಧೀಕರಿಸುವ ವ್ಯವಸ್ಥೆ ಸರಿಯಾಗಬೇಕು. ಇದನ್ನು ಸಮರ್ಪಕಗೊಳಿಸದೆ ಇದ್ದರೆ ಪ್ರತಿಭಟನೆ ಮಾಡಲಾಗುವುದು. ಈ ವಿಚಾರಗಳ ಬಗ್ಗೆ ಶನಿವಾರದಿಂದ ಇ–ಮೇಲ್‌ ಚಳವಳಿ ನಡೆಸಲಾಗುವುದು ಎಂದು ಕುಕ್ಕೆ ದೇವಳದ ಮಾಸ್ಟರ್ ಪ್ಲಾನ್ ಸಮಿತಿ ಮಾಜಿ ಸದಸ್ಯ ಶಿವರಾಮ ರೈ ಹೇಳಿದರು.

ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಪವನ್ ಎಂ.ಡಿ., ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಮಾಧವ ಡಿ., ಪಕ್ಷದ ಪ್ರಮುಖರಾದ ಬಾಲಕೃಷ್ಣ ಮರೀಲ್, ರವೀಂದ್ರ ಕುಮಾರ್ ರುದ್ರಪಾದ, ಎ.ಸುಬ್ರಹ್ಮಣ್ಯ ರಾವ್, ಭಾರತಿ, ಶೇಷಕುಮಾರ್ ಶೆಟ್ಟಿ, ಭರತ್ ಕಲ್ಲಗುಡ್ಡೆ ಭಾಗವಹಿಸಿದ್ದರು.

Leave a Reply

error: Content is protected !!