
ಅಕ್ರಮ ಮರಳುಗಾರಿಕೆ ಕುರಿತು ಅತಿ ಹೆಚ್ಚಿನ ದೂರು ಬರುತ್ತಿದ್ದ ಪ್ರದೇಶಗಳಲ್ಲಿ ಸಿಸಿ ಕೆಮರಾ ಮೂಲಕ ಕಣ್ಣಿಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮುಂದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 30 ಕಡೆಗಳಲ್ಲಿ ಇಲಾಖೆಯು ಸೋಲಾರ್ ವಿದ್ಯುತ್ ಆಧಾರಿತ ಸಿಸಿ ಕೆಮರಾಗಳನ್ನು ಅಳವಡಿಸಿದೆ.
ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ 4 ಕಡೆ ಹಾಗೂ ಉಳಿದಂತೆ ಮಂಗಳೂರು ಕಮಿಷನರೆಟ್ ವ್ಯಾಪ್ತಿಯ 26 ಕಡೆಗಳಲ್ಲಿ ಅಕ್ರಮ ಮರಳುಗಾರಿಕೆ/ಸಾಗಾಟದ ಕುರಿತು ಗಣಿ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಒಂದು ಕಂಬವನ್ನು ಅಳವಡಿಸಿ ಅದರ ಮೇಲೆ ಪೆಟ್ಟಿಗೆಯ ಒಳಭಾಗದಲ್ಲಿ ಕೆಮರಾ ಅಳವಡಿಸಿ ಪೆಟ್ಟಿಗೆಯ ಮೇಲ್ಭಾಗದಲ್ಲಿ ಸೋಲಾರ್ ಪ್ಯಾನಲ್ ಇಡಲಾಗಿದೆ. ಕೆಮರಾಗಳ ದೃಶ್ಯದ ಮೇಲೆ ಇಲಾಖೆ ನಿರಂತರ ನಿಗಾ ಇಡಲಿದ್ದು, ಅಕ್ರಮ ಸಾಗಾಟಕ್ಕೆ ಸಂಬಂಧಿಸಿ ಲಾರಿಯ ನಂಬರ್ ಆಧಾರದಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿದೆ.
ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯ ಬಂಟ್ವಾಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಪುದುವಿನ ದೇವರಪಾಲು, ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆ, ಸಜೀಪನಡುವಿನ ಮಿತ್ತಪಡು³ ಸರ್ಕಲ್ ಕೋಟೆಕಣಿ, ನೇತ್ರಾವತಿ ನದಿ ಕಿನಾರೆ ಜುಮಾ ಮಸೀದಿ ಬಳಿ ಕೆಮರಾ ಅಳವಡಿಸಲಾಗಿದೆ.
ಉಳಿದಂತೆ ಮಂಗಳೂರು ಕಮಿಷನರೆಟ್ ವ್ಯಾಪ್ತಿಯ ಕೊಣಾಜೆ ಠಾಣೆ ವ್ಯಾಪ್ತಿಯ ಅಂಬ್ಲಿಮೊಗರು ಬಸ್ತಿಕಟ್ಟೆ ಬಸ್ ನಿಲ್ದಾಣ, ಮುನ್ನೂರು ಗ್ರಾಮದ ಸೋಮನಾಥೇಶ್ವರ ಉಳಿಯ ಮಹಾದ್ವಾರ, ಎಲ್ಯಾರ್‌ಪದವು ಚರ್ಚ್ ಬಳಿ, ಹರೇಕಳ ಕಡವಿನ ಬಳಿ, ಇನೋಳಿಪದವು, ಉಳ್ಳಾಲ ಠಾಣೆ ವ್ಯಾಪ್ತಿಯ ತಲಪಾಡಿ ಟೋಲ್ ಆಟೋ ನಿಲ್ದಾಣದ ಬಳಿ, ಉಳ್ಳಾಲ ಸೋಮೇಶ್ವರ ಮಹಾದ್ವಾರ, ಮೂಲ್ಕಿ ಠಾಣೆ ವ್ಯಾಪ್ತಿಯ ಹಳೆಯಂಗಡಿ ಬಸ್ ನಿಲ್ದಾಣದ ಬಳಿ, ಹಳೆಯಂಗಡಿ ಬ್ರಹ್ಮಶ್ರೀ ನಾರಾಯಣ ಗುರು ರಸ್ತೆ ಕೆಮರಾ ಅಳವಡಿಸಲಾಗಿದೆ.
ಮಂಗಳೂರು ಗ್ರಾಮಾಂತರ ಠಾಣೆ ವ್ಯಾಪ್ತಿಯ ಅರ್ಕುಳ ವಳಚ್ಚಿಲ್ ಮಸೀದಿ ಬಳಿ, ವಳಚ್ಚಿಲ್, ಅಡ್ಯಾರ್ ಸಹ್ಯಾದ್ರಿ ಕಾಲೇಜು ಬಳಿ, ಉಳಾಯಿಬೆಟ್ಟು, ಮಲ್ಲೂರು ಇಡ್ಮಾ, ಕಂಕನಾಡಿ ನಗರ ಪೊಲೀಸ್ ವ್ಯಾಪ್ತಿಯ ಕಣ್ಣೂರು ಮಸೀದಿ ಬಳಿ, ಕಣ್ಣೂರು ಬಡ್ಲ, ಬಜಾಲ್ ಫೈಸಲ್‌ನಗರ, ಜಪ್ಪಿನಮೊಗರು ಕಡೇಕಾರು, ತಾರೆದೋಲ್ಯ, ಪೆರ್ಮನ್ನೂರು ಆಡಂಕುದ್ರು, ಬಜಪೆ ಠಾಣೆ ವ್ಯಾಪ್ತಿಯ ಅದ್ಯಪಾಡಿ ಮರವೂರು ಸೇತುವೆ, ಅದ್ಯಪಾಡಿ, ಅಡ್ಡೂರು ಜಂಕ್ಷನ್, ಕಾವೂರು ಠಾಣೆ ವ್ಯಾಪ್ತಿಯ ಪಡುಶೆಡ್ಡೆ ರೈಲ್ವೇ ಅಂಡರ್‌ಪಾಸ್ ಸಮೀಪ, ಪಡುಶೆಡ್ಡೆ ಓಜಲಾಯ ದೈವಸ್ಥಾನದ ಬಳಿ ಕೆಮರಾ ಅಳವಡಿಸಲಾಗಿದೆ.



