ದೇಶದಲ್ಲಿ ಇಂಡಿಯಾ ಕೂಟದ ಸರ್ಕಾರ ಬರಬೇಕು: ಬಿ.ಎಂ. ಭಟ್

ಶೇರ್ ಮಾಡಿ

ಪುತ್ತೂರು: ಇಂಡಿಯಾ ಕೂಟದ ಅಭ್ಯರ್ಥಿಗಳ ಗೆಲವಿಗಾಗಿ ಸಿಪಿಐಎಂ ವತಿಯಿಂದ ರಾಜ್ಯದ ಎಲ್ಲೆಡೆ ಇಂದಿನಿಂದ ಚುನಾವಣಾ ಪ್ರಚಾರ ಆರಂಭಿಸಲಾಗುತ್ತಿದೆ. ಬಿಜೆಪಿ ಸೋಲಿಸುವುದು ಅತ್ಯಂತ ಅನಿವಾರ್ಯ ಎಂಬುದನ್ನು ಜನರಿಗೆ ಮನವರಿಕೆ ಮಾಡುತ್ತಿದ್ದೇವೆ. ಇದಕ್ಕಾಗಿ `ಬಿಜೆಪಿ ಸೋಲಿಸಿ ಭಾರತ ರಕ್ಷಿಸಿ’ ಎಂಬ ಆಂದೋಲನ ನಡೆಸಲಾಗುತ್ತಿದೆ ಎಂದು ಸಿಪಿಐಎಂ ಮುಖಂಡ ನ್ಯಾಯವಾದಿ ಬಿ.ಎಂ. ಭಟ್ ಹೇಳಿದರು.

ಅವರು ರವಿವಾರ ಸಂಜೆ ಪುತ್ತೂರು ನಗರದಲ್ಲಿ ಬಿಜೆಪಿ ಸೋಲಿಸಿ ಭಾರತ ರಕ್ಷಿಸಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು. ಸಾಮಾನ್ಯ ಜನರ ಹಕ್ಕು ಸವಲತ್ತುಗಳನ್ನು ಕಿತ್ತುಕೊಂಡು ಕಾರ್ಪೋರೇಟ್‍ಗಳನ್ನು ರಕ್ಷಿಸುವ ಕೆಲಸ ಬಿಜೆಪಿ ಮಾಡುತ್ತಿದ್ದು, ಇನ್ನೊಮ್ಮೆ ಬಿಜೆಪಿ ಗೆದ್ದು ಅಧಿಕಾರ ಪಡೆದುಕೊಂಡಲ್ಲಿ ಅದು ಜನ ಜೀವನಕ್ಕೆ ಗಂಡಾಂತರವಾಗಲಿದೆ. ದೇಶದ ಅತೀ ದೊಡ್ಡ ಹಗರಣ ಚುನಾವಣಾ ಬಾಂಡ್ ಹಗರಣವಾಗಿದ. ಈ ಹಗರಣದಲ್ಲಿ ತೊಡಗಿಸಿಕೊಂಡಿರುವ ಬಿಜೆಪಿ ಚುನಾವಣೆಯ ಹೆಸರಿನಲ್ಲಿ ಪಕ್ಷಕ್ಕೆ ಹಣ ಮಾಡುತ್ತಾ ಜೊತೆಗೆ ಕಾರ್ಪೋರೇಟ್‍ಗಳಿಗೆ ಸಹಾಯ ನೀಡುತ್ತಿದೆ. ಅವರಿಗಿದ್ದ ಶೇ.30 ಆದಾಯ ತೆರಿಗೆಯನ್ನು ಶೇ.27 ಕ್ಕೆ ಇಳಿಸಿದೆ. ಅವರ ರೂ. 15.5ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದೆ. ನಾನು ತಿನ್ನುವುದಿಲ್ಲ ಇನ್ನೊಬ್ಬರನ್ನು ತಿನ್ನಲು ಬಿಡುವುದಿಲ್ಲ ಎಂದು ಹೇಳಿದ್ದ ಪ್ರಧಾನಿ ಮೋದಿ ಇಂದು ತಾನೊಬ್ಬ ತಿನ್ನತ್ತೇನೆ. ಇನ್ನೊಬ್ಬರಿಗೆ ತಿನ್ನಲು ಬಿಡುವುದಿಲ್ಲ ಎಂಬ ಕೆಲಸ ಮಾಡುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಬಿಡುವುದಿಲ್ಲ ಎಂದ ಮೋದಿ ಇದೀಗ ಭ್ರಷ್ಟರನ್ನು ತನ್ನ ಪಕ್ಷಕ್ಕೆ ಸೇರಿಸಿಕೊಂಡು ಅವರು ಪಕ್ಷಕ್ಕೆ ಬಂದಲ್ಲಿ ಬ್ರಷ್ಟಾಚಾರ ತೊಳೆದು ಹೋಗುತ್ತದೆ. ಬಿಜೆಪಿಗೆ ಹೋದಾಗ ಅವರು ಶುದ್ದಹಸ್ತರಾಗುತ್ತಿದ್ದಾರೆ ಎಂದು ಮಾಡುತ್ತಿದ್ದಾರೆ. ಭ್ರಷ್ಟರನ್ನು ತನ್ನೊಳಗೆ ಸೇರಿಸಿಕೊಂಡು ತಾನೊಬ್ಬ ರಾಷ್ಟ್ರಭಕ್ತ ನಾನೊಬ್ಬ ರಾಮಭಕ್ತ ಎಂದು ಹೇಳುತ್ತಾ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ, ಆರೋಗ್ಯ ಲಾಭಿಗಳು ಶ್ರೀಮಂತರ ಪರವಾಗಿದೆ. ಜಿಲ್ಲೆಯಲ್ಲಿ ನಿರಂತರವಾಗಿ ಕಳೆದ 35 ವರ್ಷದಿಂದ ಬಿಜೆಪಿ ಗೆಲುವು ಪಡೆಯುತ್ತಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಇದಕ್ಕಾಗಿ ಜಿಲ್ಲೆಯಲ್ಲಿ ಇಂಡಿಯಾ ಕೂಟ ಗೆಲುವು ಪಡೆಯಬೇಕು. ದೇಶದಲ್ಲಿ ಇಂಡಿಯಾ ಕೂಟದ ಸರ್ಕಾರ ಬರಬೇಕು ಎಂದು ಜನ ಬಯಸುತ್ತಿದ್ದಾರೆ. ನಿಮ್ಮ ಸಮಸ್ಯೆಗಳಿಗೆ ರಾಮ ಎಂದು ಹೇಳುವ ಪ್ರಧಾನಿ ನಮಗೆ ಬೇಕಾಗಿಲ್ಲ. ರಾಮನ ಬಗ್ಗೆ ತಿಳಿಸಲು ನಮ್ಮ ಅಪ್ಪ ಇದ್ದಾರೆ. ಪ್ರಜಾಪ್ರಭುತ್ವಕ್ಕೆ ಅವಕಾಶವಿಲ್ಲದ ಸರ್ವಾಧಿಕಾರಿ ಸರ್ಕಾರ ಇಲ್ಲಿದೆ. ಸಂವಿಧಾನ ಬದಲಾಯಿಸುತ್ತೇವೆ ಎನ್ನುವ ಇವರು ಮತ್ತೊಮ್ಮೆ ಗೆದ್ದು ಬಂದಲ್ಲಿ ಇಲ್ಲಿ ಚುನಾವಣೆ ಇಲ್ಲದಂತೆ ಮಾಡುತ್ತಾರೆ. ಗೋಹತ್ಯೆ ನಿಷೇಧ ಅನ್ನುವ ಇವರು ದನದ ಮಾಂಸ ರಫ್ತು ಮಾಡುವಲ್ಲಿ ನಂಬರ್ ಒನ್ ಆಗಿದ್ದಾರೆ. ಅಡಕೆ ಮಾತ್ರವಲ್ಲದೆ ಶಾಸಕರನ್ನೂ ಆಮದು ಮಾಡುವ ಸರ್ಕಾರ ಬಿಜೆಪಿ ಎಂಬುದನ್ನು ಆಂದೋಲನದಲಿ ಜನರಿಗೆ ಮನವರಿಕೆ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಸಿಪಿಐಎಂ ಮುಖಂಡ ನ್ಯಾಯವಾದಿ ಬಿ.ಎಂ.ಭಟ್, ಸಿಪಿಐಎಂ ಪುತ್ತೂರು ತಾಲೂಕು ಕಾರ್ಯದರ್ಶಿ ನ್ಯಾಯವಾದಿ ಪಿ.ಕೆ.ಸತೀಶನ್, ಫಾರೂಕ್ ಮಡಂಜೋಡಿ, ಜನಾರ್ಧನ ಗೌಡ ಪುತ್ತೂರು, ಕೃಷ್ಣ , ದೇವಪ್ಪ, ಹರೀಶ್, ಗುರುಪ್ರಸಾದ್, ಬಾಬು ಮತ್ತಿತರರು ಉಪಸ್ಥಿತರಿದ್ದರು.

Leave a Reply

error: Content is protected !!