ನಡುರಾತ್ರಿ ಮನೆಯಂಗಳಕ್ಕೆ ಬಂದ ಜೀಪ್‌; ನಕ್ಸಲರೆಂದು ಭಾವಿಸಿ ಭೀತರಾದ ಮನೆಮಂದಿ

ಶೇರ್ ಮಾಡಿ

ಕಡಬ ತಾಲೂಕಿನ ಐತ್ತೂರು ಗ್ರಾಮದ ಅಮುಣಿಪಾಲ್‌ನ ಮನೆಯೊಂದರ ಅಂಗಳಕ್ಕೆ ಶನಿವಾರ ತಡರಾತ್ರಿ ಕೇರಳ ನೋಂದಣಿಯ ಜೀಪೊಂದರಲ್ಲಿ ಆಗಮಿಸಿದ ಅಪರಿಚಿತ ವ್ಯಕ್ತಿಗಳು ಮನೆಮಂದಿಯನ್ನು ಎಬ್ಬಿಸಿ ಕೊಣಾಜೆಗೆ ಹೋಗುವ ದಾರಿ ಯಾವುದೆಂದು ಕೇಳಿದ್ದು, ಅವರನ್ನು ನಕ್ಸಲರೆಂದು ಭಾವಿಸಿ ಮನೆಮಂದಿ ಭಯದಿಂದ ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ನಡೆದಿದೆ.

ರಾತ್ರಿ ಸುಮಾರು 1.30ರ ವೇಳೆಗೆ ವಾಹನದ ಹಾರ್ನ್ ಕೇಳಿ ನಿದ್ದೆಯಿಂದ ಎದ್ದು ಬಂದ ಮನೆ ಯಜಮಾನ, ವೃತ್ತಿಯಲ್ಲಿ ಜೀಪು ಚಾಲಕರಾಗಿರುವ ಕುಶಾಲಪ್ಪ ಗೌಡ ಬಾಗಿಲು ತೆರೆದರು. ಅಂಗಳದಲ್ಲಿ ಸ್ವಲ್ಪ ದೂರದಲ್ಲಿ ಜೀಪು ನಿಂತಿರುವುದನ್ನು ಕಂಡು ಗಾಬರಿಯಿಂದ ಬಾಗಿಲು ಹಾಕಿಕೊಳ್ಳಲು ಮುಂದಾಗುವಷ್ಟರಲ್ಲಿ ಜೀಪಿನಿಂದ ಇಳಿದುಬಂದ ವ್ಯಕ್ತಿಯೊಬ್ಬ ಮಲಯಾಳ ಭಾಷೆಯಲ್ಲಿ ಕೊಣಾಜೆಗೆ ಹೋಗುವ ದಾರಿ ಯಾವುದೆಂದು ಕೇಳಿದನು. ಕೊಣಾಜೆಯಲ್ಲಿ ಎಲ್ಲಿಗೆ ಎಂದು ಕೇಳಿದಾಗ ಆತ ತನ್ನ ಮೊಬೈಲ್‌ನಲ್ಲಿ ಯಾರಿಗೋ ಕರೆ ಮಾಡಿ ಕುಶಾಲಪ್ಪ ಗೌಡರಿಗೆ ಕೊಟ್ಟಿದ್ದಾನೆ. ಕರೆ ಸ್ವೀಕರಿಸಿದ ವ್ಯಕ್ತಿ ತುಳುವಿನಲ್ಲಿ ಮಾತನಾಡಲು ಆರಂಭಿಸಿದಾಗ ಕರೆ ಕಡಿತಗೊಂಡಿತು. ಬಳಿಕ ಜೀಪಿನಲ್ಲಿ ಬಂದವರು ಅಲ್ಲಿಂದ ಹೊರಟುಹೋದರು. ಆಷ್ಟರಲ್ಲಿ ಕುಶಾಲಪ್ಪ ಗೌಡರ ಪುತ್ರ ಜೀಪಿನ ನೋಂದಣಿ ಸಂಖ್ಯೆಯನ್ನು ಬರೆದಿಟ್ಟುಕೊಂಡಿದ್ದ. ಜೀಪಿನಲ್ಲಿ ಪಾತ್ರೆ ಪಗಡಿ, ಮರ ಕತ್ತರಿಸುವ ಯಂತ್ರ ಸೇರಿದಂತೆ ಹಲವು ಸಾಮಗ್ರಿಗಳು ಇದ್ದುದನ್ನು ಕಂಡಿದ್ದ ಕುಶಾಲಪ್ಪ ಗೌಡರು ಅವರು ನಕ್ಸಲರಾಗಿರಬಹುದೇ ಎನ್ನುವ ಸಂಶಯದಿಂದ ತನ್ನ ಪರಿಚಿತರಿಗೆ ಮಾಹಿತಿ ನೀಡಿದರು.

ಘಟನೆಯ ಬಗ್ಗೆ ಮಾಹಿತಿ ಪಡೆದ ಕಡಬ ಪೊಲೀಸರು ಜೀಪಿನ ನೋಂದಣಿ ಸಂಖ್ಯೆ ಆಧಾರದಲ್ಲಿ ಜೀಪಿನ ಮಾಲಕರ ವಿಳಾಸ ಮತ್ತು ಮೊಬೈಲ್‌ ಸಂಖ್ಯೆಯನ್ನು ಪತ್ತೆ ಮಾಡಿದಾಗ ಅದು ಕಾಸರಗೋಡು ಮೂಲದ ಟೋಮಿ ಮ್ಯಾಥ್ಯೂ ಅರಿಗೆ ಸೇರಿದ ವಾಹನ ಎಂದು ತಿಳಿದುಬಂದಿತು. ಬಳಿಕ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ ರಬ್ಬರ್‌ ತೋಟದ ಕಳೆ ಕತ್ತರಿಸುವ ಕೆಲಸಗಾರರನ್ನು ಕಡಬದ ಕೊಣಾಜೆಗೆ ಕರೆದೊಯುತ್ತಿದ್ದಾಗ ರಾತ್ರಿ ವೇಳೆ ದಾರಿತಪ್ಪಿದ್ದರಿಂದ ದಾರಿ ಕೇಳುವುದಕ್ಕಾಗಿ ಮನೆಯವರನ್ನು ಎಬ್ಬಿಸಿದ್ದಾಗಿ ಕರೆ ಸ್ವೀಕರಿಸಿದಾತ ತಿಳಿಸಿದ. ಕುಶಾಲಪ್ಪ ಗೌಡರು ಕೂಡ ರವಿವಾರ ಬೆಳಗ್ಗೆ ಕೊಣಾಜೆಯ ತನ್ನ ಪರಿಚಿತರಲ್ಲಿ ವಿಚಾರಿಸಿದಾಗ ರಾತ್ರಿ ವೇಳೆ ಕೇರಳದಿಂದ ರಬ್ಬರ್‌ ತೋಟದ ಕೆಲಸಕ್ಕೆ ಜನ ಬಂದಿರುವುದು ದೃಢಪಟ್ಟಿತು.

ಕೊನೆಗೂ ಪೊಲೀಸರ ಸಕಾಲಿಕ ಕ್ರಮದಿಂದಾಗಿ ಐತ್ತೂರಿಗೆ ಬಂದವರು ನಕ್ಸಲರಲ್ಲ ಎನ್ನುವುದು ತಿಳಿದು ಸ್ಥಳೀಯರು ನಿಟ್ಟುಸಿರುಬಿಟ್ಟರು.

Leave a Reply

error: Content is protected !!