ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪ್ರಚಾರದ ರ್ಯಾಲಿ ವೇಳೆ ಓರ್ವ ವ್ಯಕ್ತಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಬೆಂಗಳೂರಿನ ಕೆ.ಆರ್.ಪುರದ ಗಣೇಶ ದೇಗುಲದ ಬಳಿ ಇಂದು (ಏಪ್ರಿಲ್ 08) ಈ ದುರ್ಘಟನೆ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ಕೆ.ಆರ್.ಪುರದ ಟಿ.ಸಿ.ಪಾಳ್ಯದ ಪ್ರಕಾಶ್(55) ಎಂದು ಗುರುತಿಸಲಾಗಿದೆ.
ಇಂದು ಬೆಳಗ್ಗೆ ಹೋಂಡಾ ಆ್ಯಕ್ಟಿವ ಬೈಕ್ ನಲ್ಲಿ ಪ್ರಕಾಶ್ ತೆರಳುತ್ತಿದ್ದರು. ಈ ವೇಳೆ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಬಿಜೆಪಿ ಮುಖಂಡರೊಬ್ಬರು ಕಾರು ರಸ್ತೆಯಲ್ಲಿ ಪಾರ್ಕ್ ಮಾಡಿ ಹಿಂದೆ ಮುಂದೆ ನೋಡದೇ ಏಕಾಏಕಿ ಬಾಗಿಲು ತೆರೆದಿದ್ದು, ಅದು ಬೈಕ್ಗೆ ತಾಗಿದೆ. ಪರಿಣಾಮ ಪ್ರಕಾಶ್ ಕೆಳಗೆ ಬಿದ್ದಿದ್ದಾನೆ. ಬಳಿಕ ಹಿಂದಿನಿಂದ ಬರುತ್ತಿದ್ದ ಖಾಸಗಿ ಬಸ್ ಕೆಳಗೆ ಬಿದ್ದಿದ್ದ ಪ್ರಕಾಶ್ ಅವರ ಮೇಲೆ ಹರಿದಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಪ್ರಕಾಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ. ಇನ್ನು ಈ ಬಗ್ಗೆ K.R.ಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೋಭಾ ಕರಾಂದ್ಲಾಜೆ ಹೇಳಿದ್ದೇನು?
ಇನ್ನು ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಅಭ್ಯರ್ಥಿ ಶೋಭಾ ಕರಾಂದ್ಲಾಜೆ, ನಮ್ಮ ಕಾರ್ಯಕರ್ತ ಪ್ರಕಾಶ್ ಗೆ ಆಕ್ಸಿಡೆಂಟ್ ಆಗಿದೆ. ನಾವು ರ್‍ಯಾಲಿ ಯಲ್ಲಿ ಮುಂದೆ ಹೋಗಿದ್ವಿ. ರಸ್ತೆ ಬದಿ ನಿಂತಿದ್ದ ನಮ್ಮ ಕಾರು ಡೋರ್ ಓಪನ್ ಆದಾಗ ಬೈಕ್ ನಲ್ಲಿ ಬಂದು ಡಿಕ್ಕಿ ಹೊಡೆದಿದ್ದಾರೆ. ಬಳಿಕ ಕೆಳಗೆ ಬಿದ್ದಿದ್ದಾಗ ಬಸ್ ಹರಿದಿದೆ. ಪೋಸ್ಟ್ ಮಾರ್ಟಮ್ ನಲ್ಲಿ ಸಾವು ಹೇಗೆ ಆಗಿದೆ ಎನ್ನುವುದು ತಿಳಿಯಲಿದೆ. ನಮಗೆಲ್ಲರಿಗೂ ದುಃಖ ಆಗಿದೆ, ಪ್ರಕಾಶ್ ನಿಷ್ಟಾವಂತ ಕಾರ್ಯಕರ್ತ. ಕುಟುಂಬಕ್ಕೆ ಪಕ್ಷದಿಂದ ಪರಿಹಾರ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.