12th ಪಾಸ್ ಆಗುವ ಮುನ್ನ “12th Fail” ಚಿತ್ರವನ್ನೊಮ್ಮೆ ನೋಡಲೇಬೇಕು

ಶೇರ್ ಮಾಡಿ

’12th Fail’ ಚಿತ್ರ 2023ರ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಿ 2023ರ ಅತ್ಯುತ್ತಮ ಚಿತ್ರವಾಗಿ ಅನೇಕ ವಿಭಾಗಗಳಲ್ಲಿ ಫಿಲಂಫೇರ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಚಿತ್ರ. ಪ್ರಸ್ತುತ ಮಹಾರಾಷ್ಟ್ರ ಪೊಲೀಸ್ ಇಲಾಖೆಯಲ್ಲಿ ಅತ್ಯುನ್ನತ ಹುದ್ದೆಯಾದ Inspector General of Police ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಐಪಿಎಸ್ ಅಧಿಕಾರಿ ಮನೋಜಕುಮಾರ್ ಶರ್ಮಾ ಅವರ ಯಶಸ್ವಿ ಜೀವನ ಆಧಾರಿತ ಚಿತ್ರ ಈ ’12th Fail’.

“ಕಾಲವೆಂಬ ಹೊಯ್ಗೆಯಲ್ಲಿ
ನಿನ್ನ ಹೆಜ್ಜೆ ಮೂಡಬೇಕಾದರೆ
ಕಾಲೆಳೆದುಕೊಂಡು ಸಾಗಬೇಡ”

ಎಂಬ ಅಬ್ದುಲ್ ಕಲಾಂ ಅವರ ಮಾತನ್ನು ತಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಂಡಿರುವ ಮನೋಜ್ ಕುಮಾರ್ ಶರ್ಮ ಎಂಬ ಯುವಕನು ಐಪಿಎಸ್ ಅಧಿಕಾರಿ ಆಗುವ ಕನಸನ್ನು ಕಟ್ಟಿಕೊಳ್ಳುವ, ಈ ಕನಸಿನ ಹಾದಿಯಲ್ಲಿ ಬರುವ ಅನೇಕ ಸೋಲುಗಳನ್ನು ಎದುರಿಸುತ್ತಾನೆ. ಪ್ರತಿ ಸೋಲಿನ ಸಂದರ್ಭದಲ್ಲಿಯೂ ಅವನ ತಂದೆಯ ಸೋಲೊಪ್ಪಿಕೊಳ್ಳದ ದಾರಿಗಳು ಮತ್ತು ಪೊಲೀಸ್ ಅಧಿಕಾರಿ ತುಷ್ಯಂತ್ ಸಿಂಗ್ ಅವರ ಪ್ರಾಮಾಣಿಕತೆಯ ‘ನೋ ಚೀಟಿಂಗ್’ ಎಂಬ ಪಾಠ ಹಾಗೂ ದೆಹಲಿಯ ಕೋಚಿಂಗ್ ಸೆಂಟರ್ ನಲ್ಲಿ ಸಿಕ್ಕ ಗುರು ಗೌರಿ ಅಣ್ಣ ಹೇಳುವ ರೀಸ್ಟಾರ್ಟ್ ಎಂಬ ಪ್ರೋತ್ಸಾಹದಾಯಕ ಮಾತುಗಳು ಸೋಲನ್ನು ಮೆಟ್ಟಿ ನಿಲ್ಲಲು ಪ್ರಮುಖ ಪಾತ್ರ ವಹಿಸುತ್ತವೆ.

ಡಕಾಯಿತಿಗೆ ಹೆಸರಾದ ಮಧ್ಯಪ್ರದೇಶದ ಚಂಬಲ್ ಪ್ರಾಂತ್ಯದ ಬಿಲಗಾಂವ್ ಎಂಬ ಹಳ್ಳಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರನ ಮೊಮ್ಮಗನಾಗಿ, ಪ್ರಾಮಾಣಿಕತೆಯ ಉಳಿವಿಗಾಗಿ ಭ್ರಷ್ಟಾಚಾರ ವ್ಯವಸ್ಥೆಯ ವಿರುದ್ಧ ಹೋರಾಡುತ್ತ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದ ಪ್ರಾಮಾಣಿಕ ತಂದೆಯ ಮಗನಾಗಿ, ಬಡತನದ ಬೆಯ್ಗೆಯಲ್ಲಿಯೂ ಮೂರು ಮಕ್ಕಳ ಹೊಟ್ಟೆಗೆ ಹಿಟ್ಟು ಬೇಯಿಸಿ ಹಾಕುತ್ತಿದ್ದ ವಾತ್ಸಲ್ಯಮಯಿ ತಾಯಿಯ ಮಗನಾಗಿ ಬೆಳೆಯುತ್ತಿದ್ದ ಮನೋಜ್ ಕುಮಾರ್ ಗೆ 12ನೇ ತರಗತಿ ಪಾಸ್ ಆಗಿ ಯಾವುದೋ ಒಂದು ಉದ್ಯೋಗ ಮಾಡಿ ತಂದೆಯ ಜವಾಬ್ದಾರಿ ಹಂಚಿಕೊಳ್ಳುವುದೇ ಪ್ರಧಾನ ಆಸೆಯಾಗಿತ್ತು.
ಕಥೆ ಆರಂಭವಾಗುವುದೇ ಈ ವಿವರಣೆಯೊಂದಿಗೆ, ಆದರೆ ಮನೋಜಕುಮಾರ್ ನ ಜೀವನಕ್ಕೆ ತಿರುವು ಸಿಗುವುದು ಪೊಲೀಸ್ ಅಧಿಕಾರಿ(DYSP) ತುಷ್ಯಂತ್ ಸಿಂಗ್ ಅವರ ಪ್ರವೇಶದೊಂದಿಗೆ. ಬಿಲಗಾಂವ್ ಗ್ರಾಮದಲ್ಲಿ ಯಾವೊಬ್ಬ ವಿದ್ಯಾರ್ಥಿಯೂ ಕಾಪಿ ಮಾಡದೆ ಪಾಸ್ ಆಗಲು ಸಾಧ್ಯವಿರಲಿಲ್ಲ. ಏಕೆಂದರೆ ಶಿಕ್ಷಣದಿಂದ ಹಿಡಿದು ಅನೇಕ ವ್ಯವಸ್ಥೆಗಳು ಗುಣಮಟ್ಟ ಕಳೆದುಕೊಂಡು ಭ್ರಷ್ಟಾಚಾರದ ಸ್ವರೂಪಗಳಾಗಿ ಬೆಳೆದುಬಿಟ್ಟಿದ್ದವು. ಇದರ ಭಾಗವಾಗಿಯೇ ಇದ್ದ ಮನೋಜ್ 12ನೇ ತರಗತಿ ಪಾಸ್ ಆಗಲು ಸಕಲ ಸಿದ್ಧತೆಯಿಂದಲೇ ನಕಲು ಮಾಡಲು ಪೂರ್ವ ತಯಾರಿಯೊಂದಿಗೆ ಪರೀಕ್ಷೆಗೆ ಹಾಜರಾಗಿದ್ದ. ಏಕೆಂದರೆ ಕಾಪಿ ಮಾಡುವುದು ಅಪರಾಧ ಎಂದು ಹೇಳುವ ಯಾವ ಮನಸ್ಥಿತಿಯೊಂದೂ ಅಲ್ಲಿರಲಿಲ್ಲ. ಇದೇ ಪರಿಸರದ ಉತ್ಪನ್ನವಾದ ಮನೋಜ್ ಕುಮಾರ್ ಗೆ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದ ತುಷ್ಯಂತ್ ಸಿಂಗ್ ಅವರ ದರ್ಶನವಾಗಿದ್ದೇ ಪರೀಕ್ಷೆಯಲ್ಲಿ ನಕಲು ಮಾಡುವಾಗ. ತುಷ್ಯಂತ್ ಸಿಂಗ್ ಅವರು ನಕಲು ತಡೆಹಿಡಿಯಲು ಪರೀಕ್ಷಾ ಕೇಂದ್ರಕ್ಕೆ ಬಂದು ಯಶಸ್ವಿಯಾಗುವ ಸಂದರ್ಭದಲ್ಲಿ ತುಷ್ಯಂತ್ ಸಿಂಗ್ ಅವರ ನಡೆ, ಪ್ರಾಮಾಣಿಕತೆ, ಧೈರ್ಯ ಎಲ್ಲವೂ ಮನೋಜ್ ಕುಮಾರ್ ಮೇಲೆ ಪರಿಣಾಮ ಬೀರುತ್ತವೆ. ನಕಲು ನಡೆಯದ ಕಾರಣ ಮನೋಜ್ ಫೇಲ್ ಆಗುತ್ತಾನೆ. ತನ್ನ ತಮ್ಮನಾಗಿದ್ದ ಕಮಲೇಶ್ ಜೊತೆಗೂಡಿ ರಿಕ್ಷಾ ಓಡಿಸಿ ಹಣ ಸಂಪಾದಿಸುವ ಮೂಲಕ ಕುಟುಂಬದ ಜವಾಬ್ದಾರಿ ಹೊತ್ತದ್ದಕ್ಕೆ ತಾಯಿ ಸಂತಸ ವ್ಯಕ್ತಪಡಿಸಿದರೆ ಅಜ್ಜಿ ಮನೋಜ್ ಕುಮಾರ್ ಉನ್ನತ ಶಿಕ್ಷಣ ಪಡೆದು ಒಳ್ಳೆಯ ವ್ಯಕ್ತಿಯಾಗಿ ಬೆಳೆಯಬೇಕೆಂಬ ಹಂಬಲವನ್ನು ಅದುಮಿಟ್ಟುಕೊಂಡಿರುತ್ತಾಳೆ.

ಸ್ಥಳೀಯ ಶಾಸಕನ ಖಾಸಗಿ ಬಸ್ಸುಗಳ ದರ್ಬಾರಿನ ಎದುರು ರಿಕ್ಷಾ ಓಡಿಸಲು ವಿಫಲನಾದ ಮನೋಜ್ ಕುಮಾರ್ ಶಾಸಕನ ಕುಮ್ಮಕ್ಕಿನಿಂದ ಬಂಧನಕ್ಕೊಳಗಾಗುತ್ತಾನೆ. ಶಾಸಕನ ಆದೇಶದಂತೆ ಪೊಲೀಸರು ಅವರನ್ನು ಜೈಲಿಗೆ ತಳ್ಳಿ ಹಿಂಸೆ ಕೊಡಲಾರಂಬಿಸುತ್ತಾರೆ. ಈ ಸಂದರ್ಭದಲ್ಲಿ ನಡೆಯುವ ಘಟನೆಯು ತುಂಬಾ ಪರಿಣಾಮಕಾರಿಯಾಗಿದೆ‌. ಮನೋಜ್ ಕುಮಾರ್ ನ ಆಲೋಚನೆಯ ಕ್ರಮವನ್ನು ಭಿನ್ನ ರೀತಿಯಲ್ಲಿ ನಿರ್ದೇಶಕರು ಅಭಿವ್ಯಕ್ತಿಸುತ್ತಾರೆ. ಪೊಲೀಸರ ದೌರ್ಜನ್ಯಕ್ಕೆ ಎದುರಾಗಿ ಮಾತನಾಡುವ ಮನೋಜ್ ಕುಮಾರ್ ನ ತಮ್ಮನಾದ ಕಮಲೇಶನು ‘ನಿಮ್ಮನ್ನು ಬಂದೂಕಿನಿಂದ ಕೊಲ್ಲುತ್ತೇನೆ’ ಎನ್ನುತ್ತಾನೆ. ಇದರಿಂದ ಕೋಪಗೊಂಡ ಪೊಲೀಸ್ ಬಂದೂಕು ತರಲು ಹೇಳಿ ಮನೋಜನ ಧೈರ್ಯ ಪರೀಕ್ಷಿಸುತ್ತಾನೆ. ಬಂದೂಕು ತರಲು ತೆರಳುವ ಮನೋಜ್ ನೇರವಾಗಿ ಹೋಗುವುದು ಪ್ರಾಮಾಣಿಕ ಪೊಲೀಸ್ ಅಧಿಕಾರಿ ತುಷ್ಯಂತ್ ಸಿಂಗ್ ಅವರ ಮನೆಗೆ. ಇಲ್ಲದ ಆರೋಪಕ್ಕೆ ಗುರಿಯಾಗಿರುವ ಸಂದರ್ಭದಲ್ಲಿ ಪೊಲೀಸರ ಈ ದೌರ್ಜನ್ಯಕ್ಕೆ ಪ್ರಾಮಾಣಿಕ ಅಧಿಕಾರಿಯೇ ನಿಜವಾದ ಬಂದೂಕು ಈ ತುಷ್ಯಂತ್ ಸಿಂಗ್. ಪೊಲೀಸ್ ಠಾಣೆಗೆ ಬಂದು ಮನೋಜನನ್ನು ಜೈಲಿನಿಂದ ಬಿಡಿಸಿ ಮನೆಗೆ ಕಳಿಸುತ್ತಾನೆ. ಇದೇ ಸಂದರ್ಭದಲ್ಲಿ ಮನೋಜ್ ತುಷ್ಯಂತ್ ಸಿಂಗ್ ಅವರಿಗೆ ‘ಒಂದು ಪ್ರಶ್ನೆ ಕೇಳಬಹುದೇ?’ ಎನ್ನುತ್ತಾನೆ. ತುಷ್ಯಂತ್ ಸಿಂಗ್ ಕೇಳಲು ಅನುಮತಿ ನೀಡಿದಾಗ ‘ನಾನು ನಿಮ್ಮ ಹಾಗೆ ಆಗಲು ಏನು ಮಾಡಬೇಕು? ಎನ್ನುತ್ತಾನೆ. ಆಗ ತುಷ್ಯಂತ್ ಸಿಂಗ್ ಅವರು ನಗುತ್ತಾ “ಇನ್ಮೇಲೆ ಚೀಟಿಂಗ್ ಮಾಡಬೇಡ ಅಷ್ಟೇ” ಎನ್ನುತ್ತಾರೆ. ನಕಲು ಮಾಡದೆ ಪಾಸಾದರೆ ಖಂಡಿತ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಬಹುದೆಂಬ ಕನಸಿನೊಂದಿಗೆ ಮನೋಜ್ ಮತ್ತೊಮ್ಮೆ 12ನೇ ತರಗತಿ ಪರೀಕ್ಷೆ ಬರೆದು ಕಾಪಿ ಮಾಡದೆ ಬರೆದು ತೃತೀಯ ದರ್ಜೆಯಲ್ಲಿ ಪಾಸ್ ಆಗುತ್ತಾನೆ. ನಕಲು ಮಾಡಿ ಮೊದಲ ದರ್ಜೆಯಲ್ಲಿ ಪಾಸ್ ಆಗುವುದಕ್ಕಿಂತಲೂ ಕಷ್ಟಪಟ್ಟು ಓದಿ ಪಡೆದ ತೃತೀಯ ದರ್ಜೆಯ ಅಂಕಗಳಲ್ಲಿ ಹೆಚ್ಚು ತೃಪ್ತಿ ಇದೆ, ಎಂಬುದನ್ನು ಕಂಡ ಮನೋಜ್ ಕುಮಾರ್ ಗೆ ಇದು ಮೊದಲ ಸೋಲಿನ ನಂತರ ಮೊದಲ ಗೆಲುವಿನಂತೆ ಯಶಸ್ಸಿನ ಬಾಗಿಲು ತೆರೆದುಕೊಳ್ಳುತ್ತದೆ.

12ನೇ ತರಗತಿ ಪಾಸಾದ ಮನೋಜ್ ಕುಮಾರ್ ಗ್ವಾಲಿಯರ್ ಗೆ ತೆರಳಿ ಬಿಎ ಪದವಿ ಪಡೆದುಕೊಳ್ಳುತ್ತಾನೆ. ತುಷ್ಯಂತ್ ಸಿಂಗ್ ಅವರಂತೆ ಡಿವೈಎಸ್ಪಿ ಆಗಲು ಪದವಿ ಶಿಕ್ಷಣ ಅರ್ಹತೆ ಪಡೆದ ಮನೋಜ್ ನೇರ ಗ್ವಾಲಿಯರಿಗೆ ತೆರಳುತ್ತಾನೆ. UPSC, IAS, IPS ಎಂಬ ಯಾವ ಆಡಳಿತ ಕ್ಷೇತ್ರದ ಅಧಿಕಾರದ ಬಗ್ಗೆಯೂ ಅರಿತುಕೊಂಡಿರದ ಮನೋಜನಿಗೆ DYSP ಗಿಂತಲೂ IPS ಉನ್ನತಮಟ್ಟದ್ದು ಎಂಬ ವಿಷಯ ಗಮನಕ್ಕೆ ಬರುತ್ತದೆ. IPS ಕನಸು ಹೊತ್ತು ದೆಹಲಿಗೆ ಬಂದಿಳಿಯುತ್ತಾನೆ. ಕೈಯಲ್ಲಿ ಬಿಡಿಗಾಸಿಲ್ಲದೆ, ಹೊಟ್ಟೆಗೆ ಅನ್ನವಿಲ್ಲದೆ, ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮ ಈ ಎರಡನೇ ತನ್ನ ಆಸ್ತಿಯನ್ನಾಗಿ ಉಟ್ಟ ಬಟ್ಟೆಯಲ್ಲೇ ದೇಶದ ರಾಜಧಾನಿಯ ಗದ್ದಲದಲ್ಲಿ ಬಂದು UPSC ಎಂಬ ಸಾಗರದ ಪರಿಚಯ ಇಲ್ಲದೆ ಈಜಲು ಧುಮುಕುತ್ತಾನೆ.

ಆರಂಭದಲ್ಲಿ ದೆಹಲಿಯ ಕೇಂದ್ರ ಗ್ರಂಥಾಲಯದಲ್ಲಿ ಕಸಗುಡಿಸುವ ಮತ್ತು ಓದುಗರು ಓದಿದ ಪುಸ್ತಕಗಳ ಮರುಜೋಡಸಿಡುವ ಮತ್ತು ಗ್ರಂಥಾಲಯದ ಇನ್ನಿತರ ಕೆಲಸ ಮುಗಿಸಿ ರಾತ್ರಿಯೆಲ್ಲಾ ಪುಸ್ತಕಗಳಲ್ಲಿ ಲೀನವಾಗುತ್ತಾನೆ. ಹಗಲು ಗ್ರಂಥಾಲಯದ ಸ್ವಚ್ಛತೆ, ರಾತ್ರಿ ಗ್ರಂಥಾಲಯವೇ ತನ್ನ ಮನೆಯೆಂಬಂತೆ ಭಾವಿಸಿ ಕನಸಿನ ಗುರಿಯ ಬೆನ್ನತ್ತಿದ ಓದು.

ಕೆಲಸದಿಂದ ಅಳಿದುಳಿದ ಹಣದೊಂದಿಗೆ ಕೋಚಿಂಗ್ ಪಡೆಯಲು ಕೋಚಿಂಗ್ ಸೆಂಟರ್ ಗಳಿಗೆ ಹೆಜ್ಜೆ ಇಟ್ಟರೆ ಅಲ್ಲಿಯೂ ಕರಾಳದಂಧೆಯ ಅನಾವರಣ. ಈ ಸಂದರ್ಭದಲ್ಲಿ ಮನೋಜನಿಗೆ ಅಗ್ನಿಪರೀಕ್ಷೆ ಎದುರಾಗುತ್ತದೆ. MBBS ಪದವಿ ಪಡೆದು ವೈದ್ಯೆಯಾಗಿದ್ದರೂ IAS ಕನಸು ಹೊತ್ತು ಬಂದ ಶ್ರದ್ಧಾಳ ಪರಿಚಯ ಮನೋಜನಿಗೆ ಆಗುತ್ತದೆ. ತನಗರಿವಿಲ್ಲದೆಯೇ ಶ್ರದ್ದಾಳ ಸ್ನೇಹವನ್ನು ಪ್ರೇಮವನ್ನಾಗಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಶ್ರದ್ಧಾಳಿಗೂ ಮನೋಜನ ವ್ಯಕ್ತಿತ್ವ, ಕನಸಿನ ಗುರಿಯೆಡೆಗೆ ಅವನ ಪಯಣದ ನಡೆಗಳು ಆಕರ್ಷಿತವಾಗುತ್ತವೆ. ಮನೋಜನಿಗೆ ತನ್ನ ಕುಟುಂಬದ ಪರಿಸ್ಥಿತಿ, ತಾಯಿ ಮತ್ತು ಅಜ್ಜಿಗೆ “IPS Officer” ಆಗಿ ಯೂನಿಫಾರ್ಮ್ ನಲ್ಲಿಯೇ ಊರಿಗೆ ಕಾಲಿಡುತ್ತೇನೆಂದು ತನ್ನ ಅಜ್ಜಿ, ತಾಯಿಗೆ ಮಾಡಿದ್ದ ಶಪಥ ಎಲ್ಲವೂ ಜಾಗೃತವಾಗಿ ಪ್ರೇಮದ ಮನಸ್ಥಿತಿಯಿಂದ ಅಂತರ ಕಾಪಾಡಿಕೊಂಡು ತನ್ನ ಸಮಯವನ್ನು ಓದಿಗೆ ಮೀಸಲಿಡುತ್ತಾನೆ. ಪ್ರೀತಿ, ಪ್ರೇಮ ಮತ್ತು IPS ಈ ಎರಡರ ಆಯ್ಕೆಯ ಸಂದರ್ಭದಲ್ಲಿ ಮನೋಜ್ ಮತ್ತು ಶ್ರದ್ಧಾ ಅವರ ಆಯ್ಕೆಯಲ್ಲಿ ಮೊದಲು ಸಾಧನೆಯ ಹಾದಿಯನ್ನು ಆಯ್ಕೆ ಮಾಡಿಕೊಂಡದ್ದು. ಇಬ್ಬರ ಈ ನಡೆಗಳು ಎಲ್ಲಾ ಯುವಸಮುದಾಯಕ್ಕೂ ಮಾದರಿಯಾಗಿ ನಿಲ್ಲುತ್ತವೆ. ಸಾಧಿಸುವ ಅವಕಾಶ ಎಲ್ಲರಿಗೂ ಸಿಗುತ್ತದೆ, ಆದರೆ ಸಾಧನೆಯ ಹಾದಿ ಮರೆಯದೇ ಸಾಗುವವರು ಮಾತ್ರ ಗುರಿ ತಲುಪಿ ಯಶಸ್ವಿಯಾಗುತ್ತಾರೆ. ಪ್ರೇಮದಲ್ಲಿ ಇದ್ದರೂ ಕನಸಿನ ಗುರಿಯ ತುಡಿತಕ್ಕೆ ಮಿಡಿಯುವ ಮನೋಜ್ ಮತ್ತು ಶ್ರದ್ಧಾ ಅವರ ಅಭಿಪ್ರಾಯಗಳು ಯಶಸ್ಸಿನ ಸೂತ್ರಗಳಂತೆ ಪ್ರೇಮಿಗಳಿಗೆ ಮಾದರಿಯಾಗುತ್ತವೆ.

UPSC ಪರೀಕ್ಷೆಯಲ್ಲಿ ಮೂರು ಹಂತಗಳಾದ Prelims, Mains, ಮತ್ತು ಕೊನೆಯ ಹಂತ ಸಂದರ್ಶನ. ಈ ಕಠಿಣ ದಾರಿಯಲ್ಲಿ ಮನೋಜ್ ಅನೇಕ ಬಾರಿ ಸೋತು ಎಡವಿ ಬೀಳುತ್ತಾನೆ. Prelims ಪಾಸ್ ಆಗಿ ಮುಖ್ಯ ಪರೀಕ್ಷೆಗೆ ಸಂಪೂರ್ಣ ತೊಡಗಿಸಿಕೊಳ್ಳಲು ಆಗದೆ ಮನೆಯ ಜವಾಬ್ದಾರಿ ನೆನಪಾಗಿ ಹಿಟ್ಟಿನ ಮಿಲ್ ನಲ್ಲಿ 15 ಗಂಟೆಗಳ ಕಾಲ ಕೆಲಸ, ನಂತರ ಅದೇ ಮಿಲ್ ನಲ್ಲಿ ರಾತ್ರಿ ಓದು. ಮನೋಜ್ ನ ಹಿಟ್ಟಿನ ಮಿಲ್ ನಲ್ಲಿ ಕಷ್ಟಪಡುವ ದೃಶ್ಯಗಳೆಲ್ಲವೂ ಸಾಧನೆಯ ದಾರಿಯಲ್ಲಿರುವ ಯುವ ಸಮುದಾಯಕ್ಕೆ ಕಷ್ಟದ ಪಾಠಗಳನ್ನು ಕಣ್ಣೆದುರು ತಂದು ನಿಲ್ಲಿಸುತ್ತವೆ. ಹೀಗೆಯೇ ಹಿಟ್ಟಿನ ಮಿಲ್ ನಲ್ಲಿ ಇದ್ದರೆ ಖಂಡಿತ ಮುಖ್ಯ ಪರೀಕ್ಷೆ ಪಾಸಾಗಲು ಸಾಧ್ಯವಿಲ್ಲವೆಂಬ ಶ್ರದ್ಧಾ ಮತ್ತು ಗೆಳೆಯರಾದ ಪಾಂಡೆ, ಗೌರಿ ಅಣ್ಣ ಅವರ ಸಲಹೆಗಳನ್ನು ಸ್ವೀಕರಿಸಿದ ಮನೋಜ್ ಅವರ ನೆರವಿನಿಂದ ಒಂದು ಕೋಣೆ ಬಾಡಿಗೆ ಪಡೆದು ಮೊದಲ ಬಾರಿಗೆ ಒಂದು ಕುರ್ಚಿ ಟೇಬಲ್ ಮೇಲೆ ಅಭ್ಯಾಸ ಮಾಡುತ್ತಾನೆ. ಮುಖ್ಯ ಪರೀಕ್ಷೆಯಲ್ಲಿ ‘Tourism in India’ ಎಂಬ ವಿಷಯವನ್ನು ‘Terrorism in India’ ಎಂದು ತಪ್ಪಾಗಿ ಓದಿ ಸಮಯಕ್ಕೆ ಸರಿಯಾಗಿ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮುಖ್ಯ ಪರೀಕ್ಷೆಯಲ್ಲಿ ಮತ್ತೊಮ್ಮೆ ಫೇಲಾಗುತ್ತಾನೆ. ‘ReStart’ ಎಂಬ ಗೆಳೆಯ ಗೌರಿ ಅಣ್ಣನ ಮಾತುಗಳು ಮನೋಜನಿಗೆ ಹೊಸ ಸ್ಥೈರ್ಯ ತಂದು ಕೊಡುತ್ತವೆ.

“ಬೇಸರವೆ ಇಲ್ಲ ಈ ನಿಸರ್ಗಕ್ಕೆ
ಸದಾ ಹೊಚ್ಚ ಹೊಸದಾಗಿ ಚಿಗುರುವುದಕ್ಕೆ” ಎಂಬ ಜಿ.ಎಸ್.ಎಸ್ ಅವರ ಯುಗಾದಿ ಕವಿತೆಯ ಸಾಲಿನಂತೆ ಮನೋಜ್ ತನ್ನ ಗುರಿಯೆಡೆಗಿನ ಪಯಣವನ್ನು ಮತ್ತೆ ಮೊದಲಿನಿಂದ ಆರಂಭಿಸುತ್ತಾನೆ. ತನ್ನ ಎಲೆಗಳನ್ನೆಲ್ಲ ಉದುರಿಸಿ ಯುಗದ ಆದಿಗೆ ಹೊಸ ಚಿಗುರನ್ನು ಪಲ್ಲವಿಸುವಂತೆ ಇಡೀ ಪ್ರಕೃತಿಯೇ ಅರಳಿದಂತೆ IPS Officer ಎಂಬ ಹೂವಾಗಿ ಅರಳಲು ಮನೋಜ್ ಸಿದ್ದನಾಗುತ್ತಾನೆ. ಈ ಬಾರಿ ಇದು ನಾಲ್ಕನೇ ಪ್ರಯತ್ನ ಅಂದರೆ UPSC ಪಾಸ್ ಆಗಲು ಕೊನೆಯ ಅವಕಾಶ. ತನ್ನ ಬದುಕಿಗೆ, ಕನಸಿನ ಹಾದಿಗೆ, ಬೆಂಬಲವಾಗಿ ನಿಂತ ತಂದೆ ತಾಯಿ, ಪ್ರೇಯಸಿ ಶ್ರದ್ಧಾ, ಗೆಳೆಯರಾದ ಗೌರಿ ಅಣ್ಣ, ಪಾಂಡೆ ಎಲ್ಲರ ಆಶಯದಂತೆ ಮುಖ್ಯ ಪರೀಕ್ಷೆ ಪಾಸಾಗಿ ಸಂದರ್ಶನಕ್ಕೆ ಆಯ್ಕೆಯಾಗುತ್ತಾನೆ. ಈಗಾಗಲೇ IRS ಅಧಿಕಾರಿಯಾಗಿ ಆಯ್ಕೆಯಾಗಿದ್ದ ಶ್ರದ್ಧಾ ತಾನಾಗಿಯೇ ಮನೋಜ್ ನನ್ನ ಸಂದರ್ಶನಕ್ಕೆ ಕರೆದುಕೊಂಡು ಬರುತ್ತಾಳೆ. ಕೈಯಲ್ಲಿ ಒಂದು ಚೀಟಿ ನೀಡಿ ಸಂದರ್ಶನದ ಒಳಗೆ ಹೋಗುವ ಮುನ್ನ ಇದನ್ನು ಒಮ್ಮೆ ಏಕಾಂತದಲ್ಲಿ ಓದಿಕೋ! ಎಂದು ಶುಭ ಹಾರೈಸಿ ಹೊರಡುತ್ತಾಳೆ. ಮನೋಜನ ಸಂದರ್ಶನ ನಡೆಯುವುದು ಎರಡು ಭಾಗಗಳಾಗಿ. ಏಕೆಂದರೆ 12ನೇ ತರಗತಿಯಲ್ಲಿ ಮೊದಲ ಬಾರಿ ಫೇಲಾಗಲು ಕಾರಣ ಕೇಳಿದಾಗ ಮನೋಜ್ ಹೇಳಿದ್ದು “ಆ ಬಾರಿ ಚೀಟಿಂಗ್ ಮಾಡಲು ತುಷ್ಯಂತ್ ಸಿಂಗ್ ಅವರು ಅವಕಾಶ ನೀಡಲಿಲ್ಲ ಅದಕ್ಕೆ” ಎನ್ನುತ್ತಾನೆ‌. ಇದರಿಂದ ಕುಪಿತರಾದ ಅಧಿಕಾರಿಗಳು ‘ಎರಡನೇ ಬಾರಿಗೆ ಹೇಗೆ ಪಾಸಾದೆ?’ ಎಂದು ಕೇಳುತ್ತಾರೆ. ಎರಡನೇ ಬಾರಿ ಕಾಪಿ ಮಾಡದೆ ಪೊಲೀಸ್ ಅಧಿಕಾರಿ ತುಷ್ಯಂತ್ ಸಿಂಗ್ ಅವರ ಸಲಹೆಯಂತೆ ಓದಿ ಪ್ರಾಮಾಣಿಕವಾಗಿ ಬರೆದು ಪಾಸಾದ ಸಂದರ್ಭವನ್ನು ತಿಳಿಸುತ್ತಾನೆ.

12ನೇ ತರಗತಿಯೇ ಪಾಸ್ ಆಗದೆ ಇರುವವನು ಮತ್ತು IIT, NIT, ಸಂಸ್ಥೆಗಳಲ್ಲಿ ಓದಿ ರ್ಯಾಂಕ್ ಪಡೆದು ಸಂದರ್ಶನಕ್ಕೆ ಬಂದವರೂ ಇದ್ದಾರೆ, ಇವರನ್ನು ಬಿಟ್ಟು ನಿನಗೆ ಏಕೆ ಆಯ್ಕೆ ಮಾಡಬೇಕೆಂಬ ಪ್ರಶ್ನೆಗೆ ಮತ್ತು ಸಂದರ್ಶನದಲ್ಲಿ ಇಂಗ್ಲಿಷ್ ಬಾರದಿದ್ದರೂ ತಾನು ಐಪಿಎಸ್ ಆಗಲು ಹೇಗೆ ಫಿಟ್ ಇದ್ದೇನೆ ಎನ್ನುವುದನ್ನು ಮನಮುಟ್ಟುವಂತೆ ಮನೋಜಕುಮಾರ್ ಶರ್ಮಾ ವಿವರಿಸುತ್ತಾನೆ. ನನಗಿರುವಂತಹ ಗ್ರಾಮೀಣ ಪರಿಸರದ ಹಿನ್ನೆಲೆ ಬೇರೆಯವರಲ್ಲಿ ಸಿಕ್ಕಿರಲು ಸಾಧ್ಯವಿಲ್ಲ. ಗ್ರಾಮೀಣ ಪರಿಸರದ ಸಮಸ್ಯೆಗಳ ಬಗ್ಗೆ, ಅವ್ಯವಸ್ಥೆಗಳ ಬಗ್ಗೆ ಬೇರೆಯವರಿಗಿಂತಲೂ ನನಗೆ ಚೆನ್ನಾಗಿ ಗೊತ್ತಿದೆ. ನಮ್ಮ ದೇಶದ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕೆಂದರೆ ಗ್ರಾಮೀಣ ಭಾಗದಿಂದ ಆರಂಭವಾಗಬೇಕು‌ ಈ ಗ್ರಾಮೀಣ ಭಾಗದ ಅನುಭವಗಳು ನನಗೆ ದಟ್ಟವಾಗಿವೆ‌. ಅನೇಕ ಅನಾನುಕೂಲತೆಗಳ ನಡುವೆ ಹೋರಾಡಿ ಈ ಹಂತಕ್ಕೆ ಬಂದು ಅವಕಾಶಕ್ಕಾಗಿ ನಿಂತಿದ್ದೇನೆ ಹಾಗಾಗಿ ತಾನು ಈ ಹುದ್ದೆಗೆ ಹೇಗೆ ಫಿಟ್ ಎಂಬುದನ್ನು ಅತ್ಯಂತ ವಿನಯದಿಂದ ಮಂಡಿಸುತ್ತಾನೆ.

ಗ್ರಾಮದ ಬದುಕಿನ ಚಿತ್ರಣವನ್ನು ತನ್ನ ಮಾತುಗಳಲ್ಲೇ ವ್ಯಕ್ತಪಡಿಸಿ ಮುಗ್ಧತೆ, ಪ್ರಾಮಾಣಿಕತೆ, ಬದ್ಧತೆ ಮತ್ತು ನಿಷ್ಠೆಯ ಜೀವಂತಿಕೆಯ ಕ್ರಿಯಾಶೀಲತೆಯನ್ನು ವ್ಯಕ್ತಪಡಿಸುತ್ತಾ ಮನೋಜ್ IPS ಹುದ್ದೆ ಪಡೆಯುವಲ್ಲಿ ಯಶಸ್ವಿಯಾಗುತ್ತಾನೆ. ಫಲಿತಾಂಶ ಬಂದ ಕ್ಷಣ ತಾನು “ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದೇನೆ” ಎಂದು ಕಿವಿಗೆ ಬಿದ್ದ ಕ್ಷಣದಲ್ಲಿ ಅವನ ಎಲ್ಲಾ ಕಷ್ಟದ ಹಾದಿಗಳು ಸ್ಮೃತಿಪಟಲದಲ್ಲಿ ಹಾಳೆಗಳಂತೆ ತೆರೆದುಕೊಂಡು ಧನ್ಯತಾಭಾವ ಹೊಂದುತ್ತವೆ. ಆ ದೃಶ್ಯವನ್ನು ಕಣ್ತುಂಬಿಕೊಳ್ಳುವ ಪ್ರೇಕ್ಷಕರ ಕಣ್ಣಂಚು ಕಂಬನಿಯಿಂದ ತುಂಬಿ ಮುಂಜಾಗದೆ ಇರದು. ಯಶಸ್ಸಿನ ಉತ್ತುಂಗದ ಭಾವಕ್ಕೆ ಹೃದಯದಿಂದ ಅಪ್ಪಿದಂತೆ, ಸಂಘರ್ಷದ ಬದುಕಿನಲ್ಲಿ ಸೋಲೊಪ್ಪಿಕೊಳ್ಳದ ಜೀವನವು ಒಂದೊಂದು ಹಂತದಲ್ಲೂ ಒಂದೊಂದು ದಳವು ಅರಳಿಸಿದಂತೆ ಇಡೀ ಹೂವಾಗಿ ನಿಂತಂತೆ ಮನೋಜಕುಮಾರ್ ಶರ್ಮಾ ಅವರ ಸಾಧನೆಯ ಹಾದಿ ವ್ಯಕ್ತವಾಗುತ್ತದೆ.

ಒಂದು ಸಣ್ಣ ಸೋಲನ್ನೂ ಒಪ್ಪಿಕೊಳ್ಳದ ಯುವ ಸಮುದಾಯಕ್ಕೆ ಮನೋಜ್ ಕುಮಾರ್ ಅವರ ಈ ಯಶಸ್ಸಿನ ಸಾಧನೆಯ ಜೀವನ ಸ್ಪೂರ್ತಿ ತರುತ್ತದೆ‌ ಬದುಕಿನಲ್ಲಿ ಯಾವ ಕೀಳರಿಮೆಗೂ ಒಳಗಾಗದೆ, ಪಿ.ಯು.ಸಿ ಪಾಸಾಗಿ ಉನ್ನತ ಶಿಕ್ಷಣ, ಪದವಿ ಶಿಕ್ಷಣಕ್ಕೆ ಪ್ರವೇಶ ಮಾಡದೇ ಶೈಕ್ಷಣಿಕ ಬದುಕಿನಿಂದ ವಿಮುಖರಾಗಿ ಸಾಧನೆಯ ಹಾದಿಗಳಲ್ಲಿ ಸಾಗದೇ ಇರುವ, ಅನೇಕ ವಿದ್ಯಾರ್ಥಿಗಳಿಗೆ, ಉನ್ನತ ಶಿಕ್ಷಣ ಪಡೆದು ಯಾವ ಸೋಲಿಗೂ ನಿಲ್ಲದೆ, ಸಾಧನೆಯ ಗುರಿಯೆಡೆಗೆ ಮುನ್ನುಗ್ಗುವ ಮನೋಧರ್ಮವೊಂದನ್ನು ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಈ ಚಿತ್ರ ರೂಪಿಸುತ್ತದೆ. ಹಾಗಾಗಿ 12th ಪಾಸ್ ಆಗುವ ಮುನ್ನ ಅಥವಾ ಜೀವನದ ಸಾಧನೆಯ ಯಾವ ಪರೀಕ್ಷೆಯನ್ನೂ ಪಾಸ್ ಮಾಡುವ ಮುನ್ನ 12 ಫೇಲ್ ಚಿತ್ರವನ್ನು ಒಮ್ಮೆ ನೋಡಲೇಬೇಕು.

ನಿರ್ದೇಶಕ ವಿಧು ವಿನೋದ್ ಚೋಪ್ರಾ ಅವರ ಸೊಗಸಾದ ಸಂಭಾಷಣೆ ಮತ್ತು ನಿರ್ದೇಶನ, ಮನೋಜ್ ಕುಮಾರ್ ಶರ್ಮಾ ಅವರ ಪಾತ್ರದಲ್ಲಿ ಅಭಿನಯಿಸಿದ ನಟ ವಿಕ್ರಾಂತ್ ಮಾಸ್ಸೆ ಅವರ ಮನೋಜ್ಞ ಅಭಿನಯ, ಮತ್ತು ವಾಸ್ತವಕ್ಕೆ ಹತ್ತಿರವಾದ ದೃಶ್ಯಗಳೆಲ್ಲವೂ ಪ್ರೇಕ್ಷಕರಲ್ಲಿ ಹೊಸ ಚೈತನ್ಯವನ್ನು ತರುತ್ತವೆ..(ಚಿತ್ರ ವೀಕ್ಷಣೆಗಾಗಿ Hotstar app ಗೆ ಭೇಟಿ ನೀಡಬಹುದು. ಕನ್ನಡದಲ್ಲಿಯೂ ವೀಕ್ಷಣೆ ಲಭ್ಯವಿದೆ.

ಲೇಖಕರು.
ಡಾ.ನೂರಂದಪ್ಪ
ಉಪನ್ಯಾಸಕರು, ಕನ್ನಡ ವಿಭಾಗ ವಿಶ್ವವಿದ್ಯಾನಿಲಯ ಕಾಲೇಜು, ನೆಲ್ಯಾಡಿ.

Leave a Reply

error: Content is protected !!