ಕಾರ್ಮಿಕರೊಂದಿಗೆ ಹೊಡೆದಾಟ; ನೆಲ್ಯಾಡಿ ಮೆಕ್ಯಾನಿಕ್ ಬ್ರಹ್ಮಾವರದಲ್ಲಿ ಸಾವು

ಶೇರ್ ಮಾಡಿ

ನೆಲ್ಯಾಡಿ: ಇಲ್ಲಿನ ನಿವಾಸಿಯೊಬ್ಬರು ಬ್ರಹ್ಮಾವರದಲ್ಲಿ ಸಹಕಾರ್ಮಿಕರ ಜೊತೆ ಹೊಡೆದಾಡಿಕೊಂಡು ಸುಸ್ತಾಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆಯೇ ಮೃತಪಟ್ಟಿರುವ ಘಟನೆ ಎ.10ರಂದು ನಡೆದಿದೆ.

ಕೌಕ್ರಾಡಿ ಗ್ರಾಮದ ಆಲಂಪಾಡಿ ನಿವಾಸಿ ಜಿ.ಎ.ಸಿದ್ದೀಕ್(40ವ.)ಮೃತಪಟ್ಟವರಾಗಿದ್ದಾರೆ. ಸಿದ್ದೀಕ್ ಮೂಲತ: ಸಕಲೇಶಪುರ ಆನೆಮಹಲ್ ನಿವಾಸಿಯಾಗಿದ್ದು ಹಲವು ವರ್ಷಗಳಿಂದ ನೆಲ್ಯಾಡಿಯಲ್ಲಿ ದ್ವಿಚಕ್ರ ವಾಹನಗಳ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದು ಪತ್ನಿ, ಮಕ್ಕಳೊಂದಿಗೆ ಆಲಂಪಾಡಿಯಲ್ಲಿ ವಾಸ್ತವ್ಯವಿದ್ದರು. ಇತ್ತೀಚಿನ ಕೆಲ ಸಮಯದಿಂದ ಮೆಕ್ಯಾನಿಕ್ ವೃತ್ತಿ ಬಿಟ್ಟು ಬೇರೆ ಕೆಲಸ ನಿರ್ವಹಿಸುತ್ತಿದ್ದರು. ಜಿ.ಎ.ಸಿದ್ದೀಕ್ ಹಾಗೂ ನೆಲ್ಯಾಡಿಯ ಪ್ರಶಾಂತ ಎಂಬವರನ್ನು ಬೋಪಣ್ಣ ಎಂಬವರು ಇಂಟರ್‌ಲಾಕ್ ಅಳವಡಿಕೆ ಕೆಲಸಕ್ಕೆಂದು ಬ್ರಹ್ಮಾವರಕ್ಕೆ ಕರೆದೊಯ್ದಿದ್ದರು ಎನ್ನಲಾಗಿದೆ. ಬ್ರಹ್ಮಾವರದ ಹಾರಾಡಿ ಗ್ರಾಮದ ಹಾರಾಡಿ ನಿವಾಸಿ ಅರುಣ್ ಆಲ್ಪ್ರೇಡ್ ಎಂಬವರ ಅಂಗಳದಲ್ಲಿ ಎ.10ರಂದು ಬೆಳಿಗ್ಗೆ ಕೆಲಸ ಮಾಡುತ್ತಿದ್ದಾಗ ಸಹ ಕಾರ್ಮಿಕರೊಂದಿಗೆ ಪರಸ್ಪರ ಜಗಳ ಮಾಡಿ, ಹೊಡೆದಾಡಿಕೊಂಡು ಸುಸ್ತಾಗಿದ್ದರು. ಇದನ್ನು ನೋಡಿದ ಸಹ ಕಾರ್ಮಿಕರು ಅವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಗೆ ಮಧ್ಯಾಹ್ನ 12:55ಕ್ಕೆ ಕರೆದೊಯ್ದಿದ್ದರು. ಆದರೆ ಸಿದ್ದೀಕ್ ಅವರು ದಾರಿ ಮಧ್ಯೆಯೇ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಹೊಡೆದಾಟಕ್ಕೂ ಮೊದಲು ಸಿದ್ದೀಕ್ ಅವರ ಮೊಬೈಲ್‌ಗೆ ಯಾರದ್ದೋ ಫೋನ್ ಕರೆ ಬಂದಿದ್ದು ಆ ಬಳಿಕ ಅವರು ಮಾನಸಿಕವಾಗಿ ಕುಗ್ಗಿದಂತೆ ಭಾಸವಾಗಿದ್ದರು ಎಂದು ಸಹ ಕಾರ್ಮಿಕರು ತಿಳಿಸಿರುವುದಾಗಿ ಸಿದ್ದೀಕ್ ಅವರ ಪತ್ನಿ ಮೈಮುನ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮೈಮುನ ಅವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 29/2024 ಕಲಂ: 174 (3) (iv) ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿದೆ.

Leave a Reply

error: Content is protected !!